ಕೊರೊನಾ ಸೋಂಕಿತರ ಜೀವ ಉಳಿಸಿದ 2ಡಿಜಿ ಔಷಧ; ಬೆಂಗಳೂರಿನಲ್ಲಿ ಮೂರಕ್ಕೆ ಮೂರು ಪ್ರಯೋಗವೂ ಯಶಸ್ವಿ

ಬೆಂಗಳೂರಿನ ಮಣಿಪಾಲ ಮತ್ತು ನಾರಾಯಣ ಹೆಲ್ತ್ ಆಸ್ಪತ್ರೆಗಳಲ್ಲಿ ಒಟ್ಟು ಮೂವರು ಕೊರೊನಾ ಸೋಂಕಿತರ ಮೇಲೆ 2ಡಿಜಿ ಪ್ರಯೋಗ ಮಾಡಲಾಗಿದ್ದು ಅವರೆಲ್ಲರೂ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಈ ಪೈಕಿ 45 ಹಾಗೂ 66 ವರ್ಷದ ಇಬ್ಬರಿದ್ದು ಅವರು ವೆಂಟಿಲೇಟರ್ ಸಹಾಯ ಪಡೆದ ಸೋಂಕಿತರಾಗಿದ್ದರು ಎನ್ನುವುದು ಗಮನಾರ್ಹವಾಗಿದೆ.

ಕೊರೊನಾ ಸೋಂಕಿತರ ಜೀವ ಉಳಿಸಿದ 2ಡಿಜಿ ಔಷಧ; ಬೆಂಗಳೂರಿನಲ್ಲಿ ಮೂರಕ್ಕೆ ಮೂರು ಪ್ರಯೋಗವೂ ಯಶಸ್ವಿ
ಸಾಂಕೇತಿಕ ಚಿತ್ರ

ಬೆಂಗಳೂರು: ಕೊರೊನಾ ಎರಡನೇ ಅಲೆ ಹೊಡೆತಕ್ಕೆ ಸಿಲುಗಿರುವ ಕರ್ನಾಟಕದ ಪಾಲಿಗೆ ಹೊಸ ಆಶಾಕಿರಣವೊಂದು 2ಡಿಜಿ ಔಷಧದ ರೂಪದಲ್ಲಿ ಸಿಕ್ಕಿದೆ. ಡಿಆರ್​ಡಿಓ, ರೆಡ್ಡೀಸ್​ ಲ್ಯಾಬ್ಸ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿರುವ 2ಡಿಜಿ ಔಷಧವನ್ನು ರಾಜ್ಯದಲ್ಲಿ ಮೂರು ಕೊರೊನಾ ಸೋಂಕಿತರ ಮೇಲೆ ಪ್ರಯೋಗಿಸಲಾಗಿದ್ದು, ಮೂರಕ್ಕೆ ಮೂರು ಜನರೂ ಗುಣಮುಖರಾಗಿರುವುದು ದೊಡ್ಡ ಮಟ್ಟದ ಭರವಸೆ ಮೂಡಿಸಿದೆ. ಬಹುಮುಖ್ಯವಾಗಿ ಈ ಮೂವರು ಸೋಂಕಿತರೂ ಗಂಭೀರಾವಸ್ಥೆಗೆ ತಲುಪಿದವರಾಗಿದ್ದು, 2ಡಿಜಿ ಪ್ರಯೋಗದ ನಂತರ ಸಂಪೂರ್ಣ ಚೇತರಿಕೆ ಕಂಡಿರುವುದು ವೈದ್ಯಕೀಯ ವಲಯದಲ್ಲಿ 2ಡಿಜಿ ಬಗ್ಗೆ ಭಾರೀ ನಿರೀಕ್ಷೆ ಮೂಡಿಸಲು ಕಾರಣವಾಗಿದೆ.

ಬೆಂಗಳೂರಿನ ಮಣಿಪಾಲ ಮತ್ತು ನಾರಾಯಣ ಹೆಲ್ತ್ ಆಸ್ಪತ್ರೆಗಳಲ್ಲಿ ಒಟ್ಟು ಮೂವರು ಕೊರೊನಾ ಸೋಂಕಿತರ ಮೇಲೆ 2ಡಿಜಿ ಪ್ರಯೋಗ ಮಾಡಲಾಗಿದ್ದು ಅವರೆಲ್ಲರೂ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಈ ಪೈಕಿ 45 ಹಾಗೂ 66 ವರ್ಷದ ಇಬ್ಬರಿದ್ದು ಅವರು ವೆಂಟಿಲೇಟರ್ ಸಹಾಯ ಪಡೆದ ಸೋಂಕಿತರಾಗಿದ್ದರು ಎನ್ನುವುದು ಗಮನಾರ್ಹವಾಗಿದೆ. 45 ವರ್ಷದ ಸೋಂಕಿತ ಮಹಿಳೆ ಸಂಪೂರ್ಣ ಗುಣಮುಖರಾಗಿದ್ದರೆ, 66 ವರ್ಷದ ವ್ಯಕ್ತಿ ಐಸಿಯುನಿಂದ ಸಾಮಾನ್ಯ ವಾರ್ಡ್​ಗೆ ಶಿಫ್ಟ್ ಆಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

2ಡಿಜಿ ಔಷಧವು ಕೊವಿಡ್ ಸಂಕಷ್ಟದ ಮಧ್ಯೆ ಆಶಾಕಿರಣವಾಗುತ್ತಿದ್ದು, 990 ರೂ.ಗೆ 5.9 ಗ್ರಾಂ 2DG ಪೊಟ್ಟಣ ಲಭ್ಯವಿರುವ ಕಾರಣ ಬಡ ಹಾಗೂ ಮಧ್ಯಮ ವರ್ಗದವರಿಗೆ ತೀರಾ ದುಬಾರಿ ಖರ್ಚಿನಿಂದ ಪಾರಾಗಲು ಸಹಕಾರಿಯಾಗಿದೆ. 100 ಎಂಎಲ್ ನೀರಿಗೆ ಬೆರಸಿ ರೋಗಿಗೆ ನೀಡುವ ಈ ಔಷಧವನ್ನು ಸಾಧ್ಯವಾದಷ್ಟು ತ್ವರಿತವಾಗಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಸಬೇಕೆಂದು ವೈದ್ಯರು ಒತ್ತಾಯಿಸುತ್ತಿದ್ದು, ಚಿಕಿತ್ಸೆ ವಿಚಾರದಲ್ಲಿ ಬಹುದೊಡ್ಡ ಬದಲಾವಣೆ ತರುವ ಭರವಸೆ ವ್ಯಕ್ತಪಡಿಸುತ್ತಿದ್ದಾರೆ.

ಡಿಆರ್​ಡಿಓ ಮತ್ತು ಡಾ.ರೆಡ್ಡೀಸ್ ಪ್ರಯೋಗಾಲಯದ ವತಿಯಿಂದ ಅಭಿವೃದ್ಧಿಯಾದ 2ಡಿಜಿ ಔಷಧಿಯು ಬೆಲೆಯಲ್ಲೂ ಕಡಿಮೆ ಇದ್ದು, ಗುಣಮುಖರಾಗುವ ಪ್ರಮಾಣವೂ ಹೆಚ್ಚಿರುವುದರಿಂದ ಕೊರೊನಾ ವಿರುದ್ಧದ ಹೋರಾಟಕ್ಕೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಸೋಂಕಿನಿಂದ ಆಮ್ಲಜನಕ ಸಮಸ್ಯೆಗೆ ಒಳಗಾಗಿರುವವರ ಪಾಲಿಗೆ ಇದು ಪರಿಣಾಮಕಾರಿ ಆಗುತ್ತಿದೆ ಎನ್ನುವುದೇ ವೈದ್ಯರಲ್ಲಿ ಭರವಸೆ ಮೂಡಿಸಿದ್ದು, ಔಷಧ ಪೂರೈಕೆಗೆ ಬೇಡಿಕೆಯೂ ಅಧಿಕವಾಗುತ್ತಿದೆ.

ಇದನ್ನೂ ಓದಿ:
ರಾಜ್ಯದ ಕೊವಿಡ್‌ ಸ್ಥಿತಿಗತಿ ಬಗ್ಗೆ ಎಚ್​.ಡಿ.ಕುಮಾರಸ್ವಾಮಿ ಆನ್‌ಲೈನ್‌ ಸಮಾಲೋಚನೆ; 2ಡಿಜಿ ಔ‍ಷಧ ಜೆಡಿಎಸ್‌ನಿಂದ ಉಚಿತವಾಗಿ ಹಂಚಲು ಚಿಂತನೆ 

ಕೊರೊನಾ ವಿರುದ್ಧ ಹೊಸ ಅಸ್ತ್ರ: ಡಿಆರ್​ಡಿಓ ಅಭಿವೃದ್ಧಿಪಡಿಸಿದ 2ಡಿಜಿ ಔಷಧ ಬಿಡುಗಡೆ