ಬೆಂಗಳೂರು ಸಬ್​ಅರ್ಬನ್ ರೈಲು ಯೋಜನೆಗೆ ವೇಗ: ದೇಶದಲ್ಲೇ ಅತಿ ಉದ್ದದ ಯು ಗರ್ಡರ್‌ ಅಳವಡಿಕೆಗೆ ಸಿದ್ಧತೆ

Bengaluru Suburban Rail Project: ದೇವನಹಳ್ಳಿಯಲ್ಲಿರುವ ಕಾಸ್ಟಿಂಗ್ ಯಾರ್ಡ್​ನಲ್ಲಿ ಅತಿ ಉದ್ದದ ಯುಗಾರ್ಡ್ ಸಿದ್ಧಪಡಿಸಲಾಗಿದೆ. ‘ಯು’ ಆಕಾರದಲ್ಲಿರುವ ಇಂತಹ 450 ‘ಯು-ಗರ್ಡರ್’ಗಳು ಮಲ್ಲಿಗೆ ಲೈನ್​ನಲ್ಲಿ ಅಗತ್ಯವಾಗಿವೆ. ಇದನ್ನು ತಯಾರಿಸಿ ಯಶವಂತಪುರ-ಹೆಬ್ಬಾಳ ನಡುವಿನ 8 ಕಿ.ಮೀ. ಮಾರ್ಗದಲ್ಲಿ ಸದ್ಯದಲ್ಲೇ ಅಳವಡಿಸಲಾಗುವುದು ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರು ಸಬ್​ಅರ್ಬನ್ ರೈಲು ಯೋಜನೆಗೆ ವೇಗ: ದೇಶದಲ್ಲೇ ಅತಿ ಉದ್ದದ ಯು ಗರ್ಡರ್‌ ಅಳವಡಿಕೆಗೆ ಸಿದ್ಧತೆ
ಯು ಗರ್ಡರ್‌ (PC Credit - MB Patil Tweet)
Follow us
TV9 Web
| Updated By: Ganapathi Sharma

Updated on: Jan 08, 2024 | 11:43 AM

ಬೆಂಗಳೂರು, ಜನವರಿ 8: ಬೆಂಗಳೂರು ಉಪನಗರ ರೈಲು ಯೋಜನೆ (Bengaluru Suburban Rail Project) ಅಥವಾ ಸಬ್​​ಅರ್ಬನ್ ಯೋಜನೆಯ ಕಾಮಗಾರಿಗೆ ತುಸು ವೇಗ ದೊರೆತಿದ್ದು, ಕಾರಿಡಾರ್‌- 2 ರಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ 31 ಮೀ ಉದ್ದದ ಯು ಗರ್ಡರ್‌ (U Girder) ಅಳವಡಿಕೆಗೆ ಸಿದ್ಧತೆ ಮಾಡಲಾಗುತ್ತಿದೆ. ಇಲ್ಲಿಯವರೆಗೂ ಮೆಟ್ರೋದಲ್ಲಿ 28 ಮೀ. ಉದ್ದದ ಗರ್ಡರ್ ತಯಾರಿಸಿ ಅಳವಡಿಕೆ‌ ಮಾಡಲಾಗ್ತಿತ್ತು. ಆದರೆ, ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯಲ್ಲಿ ಈ ದಾಖಲೆಯನ್ನು ಮುರಿಯಲಾಗುತ್ತಿದೆ.

ಯು ಗರ್ಡರ್‌ ಅಳವಡಿಕೆ ಬಗ್ಗೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ದೇವನಹಳ್ಳಿಯಲ್ಲಿರುವ ಕಾಸ್ಟಿಂಗ್ ಯಾರ್ಡ್​ನಲ್ಲಿ ಅತಿ ಉದ್ದದ ಯುಗಾರ್ಡ್ ಸಿದ್ಧಪಡಿಸಲಾಗಿದೆ. ‘ಯು’ ಆಕಾರದಲ್ಲಿರುವ ಇಂತಹ 450 ‘ಯು-ಗರ್ಡರ್’ಗಳು ಮಲ್ಲಿಗೆ ಲೈನ್​ನಲ್ಲಿ ಅಗತ್ಯವಾಗಿವೆ. ಇದನ್ನು ತಯಾರಿಸಿ ಯಶವಂತಪುರ-ಹೆಬ್ಬಾಳ ನಡುವಿನ 8 ಕಿ.ಮೀ. ಮಾರ್ಗದಲ್ಲಿ ಸದ್ಯದಲ್ಲೇ ಅಳವಡಿಸಲಾಗುವುದು ಎಂದು ಅವರು ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಪ್ರತೀ ಗರ್ಡರ್ ತಯಾರಿಕೆಗೂ ‘ಎಂ 60’ ಗುಣಮಟ್ಟದ 69.5 ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಬೇಕಾಗುತ್ತದೆ. ಕಾಂಕ್ರೀಟ್ ಮೂಲಕ ತಯಾರಿಸಿದ ಯು ಗರ್ಡರ್ ತಲಾ 178 ಟನ್ ಭಾರವಿರುತ್ತವೆ. ಇವುಗಳಿಂದ ಕಾಮಗಾರಿಗೆ ತಗುಲುವ ಸಮಯ ಸಾಕಷ್ಟು ಉಳಿಯಲಿದೆ. ಇದನ್ನು ‘ಆಸ್ ಸಿಸ್ಟಮ್’ ಕಂಪನಿಯು ಬೆಂಗಳೂರು ಸಬರ್ಬನ್ ರೈಲು ಯೋಜನೆಗಾಗಿ ವಿನ್ಯಾಸಗೊಳಿಸಿದೆ. ಚೆನ್ನೈನ ಐಐಟಿ ಮತ್ತು ಜನರಲ್ ಕನ್ಸಲ್ಟೆಂಟ್ ಕಂಪನಿಗಳು ಕೂಡ ಇದರಲ್ಲಿ ಸಕ್ರಿಯ ಪಾತ್ರ ವಹಿಸಿವೆ ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ಮದುವೆ, ಪ್ರವಾಸಕ್ಕೂ ಬಿಎಂಟಿಸಿ ಬಸ್: ಯಾವ ಬಸ್​​​ಗೆ ಎಷ್ಟು ಬಾಡಿಗೆ? ಇಲ್ಲಿದೆ ವಿವರ

ಇಂತಹ ಗರ್ಡರ್ ಅಳವಡಿಸುವುದರಿಂದ ನೇರವಾಗಿ ಹಳಿಗಳನ್ನು ಅಳವಡಿಸಲು ಸಾಧ್ಯವಾಗಲಿದೆ. ಯು-ಗರ್ಡರ್ ಸಿದ್ಧಪಡಿಸಿರುವುದು ಒಂದು ತಾಂತ್ರಿಕ ಅದ್ಭುತವಾಗಿದ್ದು ಕೆ-ರೈಡ್ ಇದರ ಉಸ್ತುವಾರಿ ಮತ್ತು ಗುಣಮಟ್ಟ ನಿಯಂತ್ರಣಗಳನ್ನು ನೋಡಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ