ಕರ್ನಾಟಕ ಬಿಜೆಪಿ ನಾಯಕರ ಮೇಲಿನ ಕ್ರಿಮಿನಲ್ ಕೇಸ್ಗಳ ಸಂಖ್ಯೆ ಬಿಚ್ಚಿಟ್ಟ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು
ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ವಿರುದ್ಧ 4 ಕ್ರಿಮಿನಲ್ ಪ್ರಕರಣಗಳಿವೆ ಎಂದು ನಗರದ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಹೇಳಿಕೆ ನೀಡಿದರು.
ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಒಂದಲ್ಲ ಒಂದು ವಿಚಾರಕ್ಕೆ ಕಾಂಗ್ರೆಸ್ (Congress) ಹಾಗೂ ಬಿಜೆಪಿ ನಡುವೆ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಇದೀಗ ರೌಡಿಗಳು ಬಿಜೆಪಿ ನಾಯಕರ ಜೊತೆ ಕಾಣಿಸಿಕೊಳ್ಳುತ್ತಿರುವುದನ್ನು ಕಾಂಗ್ರೆಸ್ ಅಸ್ತ್ರವನ್ನಾಗಿ ಮಾಡಿಕೊಂಡು ಬಿಜೆಪಿ ವಿರುದ್ಧ ಮುಗಿಬಿದ್ದಿದೆ. ಇನ್ನು ಈ ಬಗ್ಗೆ ಇಂದು(ಡಿ.1) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು (Ramesh Babu), ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ, ಸದಾನಂದಗೌಡ ಸೇರಿದಂತೆ ರಾಜ್ಯ ಬಿಜೆಪಿಯ ಒಟ್ಟು 47 ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ಗಳಿವೆ ಎಂದು ಆರೋಪಿಸಿದರು.
ಸಚಿವ ಶ್ರೀರಾಮುಲು ವಿರುದ್ಧ ಒಂದು ಕ್ರಿಮಿನಲ್ ಕೇಸ್ ಇದೆ. ಸಚಿವ ಕೆ.ಗೋಪಾಲಯ್ಯ ವಿರುದ್ಧ ಒಂದು ಕೊಲೆ ಕೇಸ್ ಇದೆ. ಬಿಜೆಪಿ ಸಂಸದ ಪ್ರತಾಪ್ ಸಿಂಹ 4 ಕೇಸ್ಗೆ ತಡೆ ತಂದಿದ್ದಾರೆ. ಮಾಜಿ ಸಿಎಂ ಸದಾನಂದಗೌಡ ಒಂದು ಕೇಸ್ನಲ್ಲಿ ತಡೆ ತಂದಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ರಮೇಶ್ ಬಾಬು ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯದಲ್ಲಿ 60 ರೌಡಿಶೀಟರ್‌ಗಳು ಬಿಜೆಪಿ ಸೇರಲು ಸಿದ್ಧರಿದ್ದಾರೆ: ವಕ್ತಾರ ಎಂ.ಲಕ್ಷ್ಮಣ
ಬಿಜೆಪಿ ಸೇರಲು ರಾಜ್ಯಾದ್ಯಂತ ರೌಡಿಗಳು ಉತ್ಸುಕರಾಗಿದ್ದಾರೆ. ರಾಜ್ಯದಲ್ಲಿ 60 ರೌಡಿಶೀಟರ್‌ಗಳು ಬಿಜೆಪಿ ಸೇರಲು ಸಿದ್ಧರಿದ್ದಾರೆ. ಯಾವ್ಯಾವ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಗೆಲ್ಲಬಹುದಿತ್ತೋ, ಆ ಕ್ಷೇತ್ರಗಳಲ್ಲಿ ರೌಡಿಗಳನ್ನು ಬಿಡುತ್ತಿದ್ದಾರೆ ಎಂದು ಕೆಪಿಸಿಸಿ ಕಚೇರಿಯಲ್ಲಿ ವಕ್ತಾರ ಎಂ.ಲಕ್ಷ್ಮಣ ಗಂಭೀರ ಆರೋಪ ಮಾಡಿದರು. ಬಿಜೆಪಿಗೆ ರೌಡಿಗಳ ಸೇರ್ಪಡೆ ಸಂಬಂಧ ಈಗಾಗಲೇ ಸಭೆ ನಡೆದಿದೆ. ರಾಜ್ಯಾದ್ಯಂತ 60 ರೌಡಿಗಳು ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರಂತೆ ಎಂದರು.
ಬಿಜೆಪಿಯ ಮೂವರು ಸಂಸದರ ವಿರುದ್ಧ ಕ್ರಿಮಿನಲ್ ಕೇಸ್ಗಳಿವೆ. ಆ್ಯಕ್ಸಿಡೆಂಟ್ ಮಾಡಿ ನಾಲ್ವರು ಅಮಾಯಕರನ್ನು ಸಿ.ಟಿ.ರವಿ ಕೊಂದಿದ್ದ. ಇಂತಹ ಸಿ.ಟಿ.ರವಿ ಸತ್ಯಹರಿಶ್ಚಂದ್ರನಂತೆ ಮಾತನಾಡುತ್ತಾರೆ. ನಮ್ಮ ನಾಯಕರ ಬಗ್ಗೆ ಮಾತಾಡಲು ಬಿಜೆಪಿಯವರಿಗೆ ನೈತಿಕತೆಯಿಲ್ಲ ಎಂದು ಎಂ.ಲಕ್ಷ್ಮಣ ಹೇಳಿದರು.
ರೌಡಿಶೀಟರ್‌ಗಳು ರಾಜಕೀಯಕ್ಕೆ ಬರಬಾರದು ಇದಕ್ಕೆ ಕಡಿವಾಣ ಹಾಕಬೇಕು:
ರೌಡಿಶೀಟರ್ಗಳನ್ನ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುತ್ತಿರುವ ವಿಚಾರವಾಗಿ ನಿವೃತ್ತ ನ್ಯಾ.ಸಂತೋಷ ಹೆಗ್ಡೆ ಅವರು ಪ್ರತಿಕ್ರಿಯೆ ನೀಡಿದ್ದು, ಎಲ್ಲರೂ ರಾಜಕೀಯಕ್ಕೆ ಬರಬೇಕು ಎಂದುಕೊಳ್ಳುತ್ತಿದ್ದಾರೆ. ಐಎಎಸ್ ಅಧಿಕಾರಿಗಳು, ಗೂಂಡಾಗಳು ರಾಜಕೀಯಕ್ಕೆ ಬರುತ್ತಿದ್ದಾರೆ. ಇಲ್ಲಿರುವಷ್ಟು ಸಂಪಾದನೆ ಎಲ್ಲಿಯೂ ಬರುವುದಿಲ್ಲ ಎಂದುಕೊಂಡಿದ್ದಾರೆ. ಇದೇ ಕಾರಣಕ್ಕೆ ರೌಡಿಶೀಟರ್‌ಗಳು ರಾಜಕೀಯಕ್ಕೆ ಬರುತ್ತಿದ್ದಾರೆ. ಇದಕ್ಕೆ ಕಡಿವಾಣ ಬೀಳಬೇಕು, ವ್ಯವಸ್ಥೆ ಸುಧಾರಣೆ ಆಗಬೇಕು. ಲೋಕಾಯುಕ್ತ ಈಗ ಅಧಿಕಾರ ಕೊಟ್ಟಿದ್ದಾರೆ ಅದು ಹೇಗೆ ಆಡಳಿತ ನಡೆಸುತ್ತದೆ ಎನ್ನುವುದು ಕಾದು ನೋಡೋಣ ಎಂದು ಹೇಳಿದರು.
ಇದನ್ನೂ ಓದಿ: ಜಮೀರ್ ಹಣಿಯಲು ‘ಸೈಲೆಂಟ್’ ಅಸ್ತ್ರ: ಸೈಲೆಂಟ್ ಸುನೀಲ್ ಮೂಲಕ ಸೋಲಿಸಲು ರಣತಂತ್ರ…!
ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ವಾಗ್ದಾಳಿ
ಇನ್ನು ಈ ವಿಚಾರವಾಗಿ ಕಾಂಗ್ರೆಸ್ ಮತ್ತೆ ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ಮಾಡಿದೆ. ರೌಡಿಗಳಿಗೂ ಬಿಜೆಪಿ ನಾಯಕರಿಗೂ ಏನು ಸಂಬಂಧ? ರೌಡಿಗಳಿಗೂ ಬಿಜೆಪಿಗೂ ಯಾವ ನಂಟು, ಏನು ವ್ಯವಹಾರ? ಎಂದು ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ಘಟಕ ಬಿಜೆಪಿಗೆ ಪ್ರಶ್ನೆ ಮಾಡಿದೆ. ಈಗಾಗಲೇ ಸೈಲೆಂಟ್ ಸುನಿಲ್, ಫೈಟರ್ ರವಿ, ಬೆತ್ತನಗೆರೆ ಶಂಕರ ಮತ್ತಿತರರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಆದ್ರೆ ಈಗ ವಿಲ್ಸನ್ಗಾರ್ಡನ್ ನಾಗ ಕೂಡ ನಿನ್ನೆ ರಾತ್ರಿ ಸಚಿವರ ಮನೆಗೆ ಭೇಟಿ ನೀಡಿದ್ದಾನೆ. ಸಚಿವ ವಿ.ಸೋಮಣ್ಣ ಮನೆಗೆ ರೌಡಿಶೀಟರ್ ನಾಗ ಬಂದಿದ್ದೇಕೆ? ನಾಗನೂ ಬಿಜೆಪಿ ರೌಡಿ ಮೋರ್ಚಾ ಸೇರುವ ಸಂಭವವಿದೆಯೇ? ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಟೀಕೆ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:10 pm, Thu, 1 December 22