ಕಾಲುವೆ ಒತ್ತುವರಿ ಜಾಗ ತೆರವುಗೊಳಿಸುವಂತೆ ಬೆಂಗಳೂರಿನ ರೈನ್ಬೋ ಡ್ರೈವ್ ಲೇಔಟ್ ವಿಲ್ಲಾಗಳಿಗೆ ನೋಟಿಸ್
ತೆರವು ಕಾರ್ಯಾಚರಣೆ ವೆಚ್ಚ ನೀವೇ ಭರಿಸಬೇಕೆಂದು, 15ಕ್ಕೂ ಹೆಚ್ಚು ವಿಲ್ಲಾಗಳಿಗೆ ತಹಶೀಲ್ದಾರ್ ನೋಟಿಸ್ ಜಾರಿಗೊಳಿಸಿದ್ದಾರೆ. ಮಳೆಯಿಂದ ರೈನ್ಬೋ ಡ್ರೈವ್ ಲೇಔಟ್ ಜಲಾವೃತಗೊಂಡಿತ್ತು.
ಬೆಂಗಳೂರು: ಮಳೆ ನೀರು ನಿಂತು ರೈನ್ ಬೋ ಡ್ರೈವ್ ಲೇಔಟ್ ದೇಶಾದ್ಯಂತ ಹೆಸರುವಾಸಿಯಾಗಿತ್ತು. ಸದ್ಯ ಕಾಲುವೆ ಒತ್ತುವರಿ ಜಾಗ ತೆರವುಗೊಳಿಸುವಂತೆ ನಗರದ ರೈನ್ಬೋ ಡ್ರೈವ್ ಲೇಔಟ್ ವಿಲ್ಲಾಗಳಿಗೆ ಬೆಂಗಳೂರು ಪೂರ್ವ ತಹಶೀಲ್ದಾರ್ ನೋಟಿಸ್ ಜಾರಿ ಮಾಡಿದ್ದಾರೆ. ಒತ್ತುವರಿ ಜಾಗವನ್ನು ತೆರವು ಮಾಡದಿದ್ರೆ ನಾವೇ ಮಾಡುತ್ತೇವೆ. ತೆರವು ಕಾರ್ಯಾಚರಣೆ ವೆಚ್ಚ ನೀವೇ ಭರಿಸಬೇಕೆಂದು, 15ಕ್ಕೂ ಹೆಚ್ಚು ವಿಲ್ಲಾಗಳಿಗೆ ತಹಶೀಲ್ದಾರ್ ನೋಟಿಸ್ ಜಾರಿಗೊಳಿಸಿದ್ದಾರೆ. ಮಳೆಯಿಂದ ರೈನ್ಬೋ ಡ್ರೈವ್ ಲೇಔಟ್ ಜಲಾವೃತಗೊಂಡಿತ್ತು. ರೈನ್ಬೋ ಡ್ರೈವ್ ಲೇಔಟ್ನಲ್ಲಿ ಜಿಲ್ಲಾಡಳಿತ ಸರ್ವೆ ನಡೆಸಿದ್ದು, ಕಾಲುವೆ ಒತ್ತುವರಿ ಮಾಡಿ ವಿಲ್ಲಾಗಳನ್ನ ನಿರ್ಮಿಸಿರುವುದು ಬಹಿರಂಗವಾಗಿದೆ. ಇದೀಗ ವಿಲ್ಲಾಗಳನ್ನ ತೆರವುಗೊಳಿಸುವಂತೆ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಮಳೆ ನಿಂತು ಹೋದ ಮೇಲೆ ರೈನ್ ಬೋ ಡ್ರೈವ್ಗೆ ಆತಂಕ ಶುರುವಾಗಿದ್ದು, ಮಳೆ ಹಿನ್ನೆಲೆ ಸುಮ್ಮನಿದ್ದ ಅಧಿಕಾರಿಗಳು, ಈಗ ತೆರವು ಮಾಡಲೇ ಬೇಕೆಂದು ಪಟ್ಟು ಹಿಡಿದಿದ್ದಾರೆ.
ಜಲಾವೃತಗೊಂಡ ರೈನ್ ಬೋ ಬಡಾವಣೆ, ನಿಲ್ಲದ ಜನರ ಸಂಕಷ್ಟ
ಸರ್ಜಾಪುರ ರಸ್ತೆಯಲ್ಲಿರುವ ರೈನ್ ಬೋ ಡ್ರೈವ್ ಬಡಾವಣೆ ನಿವಾಸಿಗಳ ಟೈಮ್ ಸರಿ ಇಲ್ಲ ಅನ್ಸುತ್ತೆ.. ಮಳೆ ಬಂತು ಅಂದ್ರೆ ಸಾಕು ಬಡಾವಣೆಗೆ ಕೆರೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿದೆ, ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ಮಹದೇವಪುರ ಕ್ಷೇತ್ರದ ದೊಡ್ಡಕನ್ನಹಳ್ಳಿಯ ರೈನ್ ಬೋ ಡ್ರೈವ್ ಬಡಾವಣೆ ನೀರು ನುಗ್ಗಿ ಇಡೀ ಬಡಾವಣೆ ಜಲಾವೃತಗೊಂಡು ನಿವಾಸಿಗಳು ಮನೆಯಿಂದ ಹೊರಬರಲು ಹಾಗೂ ಒಳ ಹೋಗಲು ಸಾಧ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು, ಮೂರು ದಿನ ಕಳೆದ್ರೂ ಸಹ ಬಡಾವಣೆಯಲ್ಲಿ ತುಂಬಿದ್ದ ನೀರು ಕಂಪ್ಲೀಟ್ ತಗ್ಗದ ಹಿನ್ನೆಲೆ ಲೇಔಟ್ ನಿವಾಸಿಗಳು ಪರದಾಡುವ ಸ್ಥಿತಿ ಇದೆ.
ಇಡೀ ಬಡಾವಣೆಯು ದ್ವೀಪದಂತಾಗಿ ಮಾರ್ಪಟ್ಟಿದ್ದರು ಸಹ ಸ್ಥಳೀಯ ಶಾಸಕರಾದ ಅರವಿಂದ್ ಲಿಂಬಾವಳಿ ಮಾತ್ರ ಇತ್ತ ತಲೆಯನ್ನು ಹಾಕಿ ನೋಡಿಲ್ಲ. ಬಿಬಿಎಂಪಿ ಅಧಿಕಾರಿಗಳಂತೂ ಬಡಾವಣೆಯ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಜನರು ಲೇಔಟ್ ರಸ್ತೆಯಲ್ಲಿ ನಿಂತಿರುವ ನೀರು ದಾಟಲು ಹರಸಾಹಸ ಪಡುವಂತಾಗಿತ್ತು . ಇನ್ನು ತುರ್ತು ಸೇವೆ ನೀಡಲು ಆಟೋ ಚಾಲಕರು ಪ್ರಾಣವನ್ನು ಕೈಯಲ್ಲಿ ಹಿಡಿದು ಆಟೋ ಚಾಲನೆ ಮಾಡುವ ಸ್ಥಿತಿ ಆ ಭಾಗದಲ್ಲಿ ಕಂಡು ಬಂದಿದೆ. ಸಿಟಿಯಲ್ಲಿ ಕೊಂಚ ಮಳೆ ಕಡಿಮೆಯಾದ್ರೂ ನಿವಾಸಿಗಳು ಮಾತ್ರ ಪರದಾಡುತ್ತಿದ್ದು ರೈನ್ಬೋ ಡ್ರೈವ್ ಬಡಾವಣೆ ಮಳೆಯಿಂದಾಗಿ ಡ್ರೈನೇಜ್ ಬಡಾವಣೆ ಆಗಿ ಮಾರ್ಪಟ್ಟಿದ್ದು ಸ್ಥಳೀಯ ನಿವಾಸಿಗಳು ಮಾತ್ರ ಪರದಾಟ ಪಡುವಂತಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:13 am, Sun, 11 September 22