ಬೆಂಗಳೂರಿಗರೇ ಎಚ್ಚರ! ಇನ್ನೂ ಮುಗಿದಿಲ್ಲ ವರುಣಾರ್ಭಟ: ನವೆಂಬರ್ವರೆಗೂ ಮಳೆ ಸಾಧ್ಯತೆ, ಹವಾಮಾನ ಇಲಾಖೆ ಅಲರ್ಟ್
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯದಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯ ಆರ್ಭಟ ಇರಲಿದೆ ಎಂದು ಹವಮಾನ ಇಲಾಖೆ ಅಲರ್ಟ್ ಮಾಡಿದೆ.
ಬೆಂಗಳೂರು: ಬೆಂಗಳೂರಿಗರೇ ಎಚ್ಚರ ಎಚ್ಚರ! ಸಿಲಿಕಾನ್ ಸಿಟಿಗೆ ಇನ್ನೂ 2 ತಿಂಗಳು ಮಹಾಮಳೆಯ ಗಂಡಾಂತರವಿದ್ದು, ಬೆಂಗಳೂರಿನಲ್ಲಿ ಇನ್ನೊಂದು ವಾರ ಅಲ್ಲ, ನವೆಂಬರ್ವರೆಗೂ ಮಳೆ ಸಾಧ್ಯತೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಪ್ರಸಾದ್ ಮುನ್ಸೂಚನೆ ನೀಡಿದ್ದಾರೆ. ಈ ಬಾರಿ ದಾಖಲೆಯ ಮಟ್ಟದ ಪ್ರಮಾಣದ ಮಳೆ ಸಾಧ್ಯತೆಯಿದ್ದು, ಈಗಾಗಲೇ ಮಳೆಯಿಂದ ಬೆಂಗಳೂರಿನ ಜನತೆ ತತ್ತರಿಸಿದ್ದಾರೆ. ಇನ್ನೂ 2 ತಿಂಗಳು ಮಳೆ ಮುಂದುವರಿದರೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಈ ವರ್ಷ ಸೆಪ್ಟೆಂಬರ್ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸಾಧ್ಯತೆಯಿದ್ದು, ಸೆಪ್ಟೆಂಬರ್ ತಿಂಗಳು 211 MM ವಾಡಿಕೆ ಮಳೆಯಾಗಿದೆ. ಆದ್ರೆ ಈ ತಿಂಗಳು ಸೆ.1 ರಿಂದ ಸೆ. 7ರವರೆಗೆ 227 MM ಮಳೆ ದಾಖಲಾಗಿದೆ.
ಯಾಕಿಷ್ಟು ಮಳೆ?
ಕಳೆದ ವಾರ ಸುರಿದಂತೆ ಮತ್ತೆ ಭಾರೀ ಮಳೆ ಸಾಧ್ಯತೆಯಿದ್ದು, ಸಮುದ್ರ ಮಟ್ಟದ ಮೇಲ್ಭಾಗದಲ್ಲಿರುವ ಪ್ರದೇಶ ಮಾನ್ಸೂನ್ ಮಾರುತಗಳ ದಿಕ್ಕು ಬದಲಾವಣೆಯಾಗಿದೆ. ಗಾಳಿ ದಿಕ್ಕಿನ ಬದಲಾವಣೆ ವಲಯದ ಪರಿಣಾಮವಾಗಿದೆ. ದಕ್ಷಿಣ ಒಳನಾಡಿನಲ್ಲಿ 11 ಡಿಗ್ರಿ ಅಕ್ಷಾಂಶದಲ್ಲಿ ಸಂಚಾರವಾದಾಗ ಹಗಲು ಹೊತ್ತು ಬಿಸಿಲು ವಾತಾವರಣ ಪರಿಣಾಮವಾಗಿದೆ. ಬೆಳಗ್ಗೆ ಹಾಗೂ ಸಂಜೆ ಭಾರೀ ಮಳೆ ಸುರಿಯುತ್ತೆ ಎನ್ನಲಾಗುತ್ತಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯದಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯ ಆರ್ಭಟ ಇರಲಿದೆ ಎಂದು ಹವಮಾನ ಇಲಾಖೆ ಅಲರ್ಟ್ ಮಾಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಂದಿನಂತೆ ಭಾರೀ ಮಳೆ ಸಾಧ್ಯತೆ. ಕರಾವಳಿ, ಉತ್ತರ, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಕರಾವಳಿಗೆ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿಗೆ ಹಾಗೂ ದಕ್ಷಿಣ ಒಳನಾಡಿಗೆ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೈಸೂರು, ಮಂಡ್ಯ, ಕೊಡಗು, ರಾಮನಗರ, ಹಾಸನ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಭಾರೀ ಮಳೆಯ ಮೂನ್ಸಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ವಾಯುಭಾರ ಕುಸಿತ ಹಿನ್ನಲೆ ರಾಜಾಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಚಳಿ ವಾತವರಣ ಕಂಡು ಬರ್ತಿದೆ. ಸಿಲಿಕಾನ್ ಸಿಟಿ ಕೂಲ್ ಕೂಲ್ ಸಿಟಿಯಾಗಿದ್ದು, ಚಳಿಯ ವಾತವರಣ ಮುಂದುವರೆದಿದೆ ಎಂದು ರಾಜ್ಯ ಹವಮಾನ ಇಲಾಖೆಯಿಂದ ಮಾಹಿತಿ ನೀಡಲಾಗಿದೆ.
ಇಂದು ಯಾವ ರಾಜ್ಯಗಳಲ್ಲಿ ಮಳೆ?
ಇಂದು ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಗೋವಾ, ಕೇರಳ, ಆಂಧ್ರಪ್ರದೇಶ, ಒಡಿಶಾ, ಛತ್ತೀಸ್‌ಗಢ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಸಿಕ್ಕಿಂ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಜಾರ್ಖಂಡ್ ಮತ್ತು ಗುಜರಾತ್‌ನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಬಿಹಾರ, ಮಧ್ಯಪ್ರದೇಶ, ತಮಿಳುನಾಡು, ಲಕ್ಷದ್ವೀಪ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಅಲ್ಲಲ್ಲಿ ಮಳೆಯಾಗಲಿದೆ. ಲಡಾಖ್, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.