Siddaramaiah: ನಿಮ್ಮದು ಜನಮರ್ದನ ಸರ್ಕಾರ, ನಾನು ಚರ್ಚೆಗೆ ಸಿದ್ಧ ಎಂದು ಬೊಮ್ಮಾಯಿ ವಿರುದ್ಧ ತೊಡೆತಟ್ಟಿದ ಸಿದ್ದರಾಮಯ್ಯ

‘ಜನಮರ್ದನ ಅಲ್ಲಲ್ಲ, ಜನಸ್ಪಂದನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವೀರಾವೇಶದ ಭಾಷಣ ಕೇಳಿ ಖುಷಿಯಾಯಿತು’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

Siddaramaiah: ನಿಮ್ಮದು ಜನಮರ್ದನ ಸರ್ಕಾರ, ನಾನು ಚರ್ಚೆಗೆ ಸಿದ್ಧ ಎಂದು ಬೊಮ್ಮಾಯಿ ವಿರುದ್ಧ ತೊಡೆತಟ್ಟಿದ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 11, 2022 | 12:32 PM

ಬೆಂಗಳೂರು: ‘ಧಮ್ ಇದ್ದೆ ಬಿಜೆಪಿ ಯಾತ್ರೆ ಹಿಮ್ಮೆಟ್ಟಿಸಿ’ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಯು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಣ್ಣು ಕೆಂಪಾಗುವಂತೆ ಮಾಡಿದೆ. ಮುಖ್ಯಮಂತ್ರಿಯ ಹೇಳಿಕೆಗೆ ವ್ಯಂಗ್ಯದ ಪ್ರತಿಕ್ರಿಯೆ ನೀಡಿರುವ ಅವರು, ‘ಧಮ್ ಅಂದರೆ ಇದು, ಧಮ್ ಬಿರಿಯಾನಿ ಅಲ್ಲ’ ಎಂದು ಭ್ರಷ್ಟಾಚಾರವನ್ನು ಚುನಾವಣೆ ವಿಷಯ ಆಗಿಸೋಣ ಬನ್ನಿ ಎಂದು ಸವಾಲು ಹಾಕಿದ್ದಾರೆ. ‘ಜನಮರ್ದನ ಅಲ್ಲಲ್ಲ, ಜನಸ್ಪಂದನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವೀರಾವೇಶದ ಭಾಷಣ ಕೇಳಿ ಖುಷಿಯಾಯಿತು. ಸಂಘ ಪರಿವಾರವು ಇಂತಹ ಜೋರು ಮಾತುಗಳನ್ನು ಸಹಿಸವುದಿಲ್ಲ, ಇದೇ ರೀತಿ ಮಾತನಾಡಿಯೇ ಪಾಪ ಬಿ.ಎಸ್.ಯಡಿಯೂರಪ್ಪ ಜೈಲು ಸೇರಿದ್ದು ಎನ್ನುವುದು ನೆನಪಿರಲಿ’ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ದಮ್ ಇದ್ದರೆ ಯಾತ್ರೆ ಹಿಮ್ಮೆಟ್ಟಿಸಿ ಎಂದು ಬೊಮ್ಮಾಯಿ ಸವಾಲು ಹಾಕಿದ್ದಾರೆ. ನಾವು ಯಾಕೆ ಹಿಮ್ಮೆಟ್ಟಿಸಲು ಹೋಗಬೇಕು? ಸಮಾವೇಶದಲ್ಲಿಯ ಖಾಲಿ ಕುರ್ಚಿಗಳನ್ನು ನೋಡಿದರೆ ನಿಮ್ಮ ‘ಜಾತ್ರೆ’ಯನ್ನು ನಮ್ಮ ಜನರೇ ಹಿಮ್ಮೆಟ್ಟಿಸಿದ್ದಾರೆ ಎಂದು ನಿಮಗೆ ಅನಿಸಲ್ವಾ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ‘ನಮಗೆ ಸವಾಲು ಹಾಕುವ ಧಮ್ ನಿಮಗಿಲ್ಲ ಎನ್ನುವುದು ಸ್ವತಃ ನಿಮಗೂ ಗೊತ್ತು. ನಿಮಗೆ ಧಮ್ ಇದ್ದರೆ ಮೊದಲು ನಿಮ್ಮ ಸಂಪುಟದಲ್ಲಿರುವ ಖಾಲಿ ಸ್ಥಾನಗಳನ್ನು ತುಂಬಿ ಬಿಡಿ. ಕನಿಷ್ಠ ಬಸವನಗೌಡ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಿ. ಆ ಮೇಲೆ ನಿಮ್ಮ ಧಮ್ ನೋಡೋಣ’ ಎಂದು ತಿವಿದಿದ್ದಾರೆ.

‘ನನ್ನ ಆಡಳಿತ ಕಾಲದ ಹಗರಣಗಳನ್ನು ಬಯಲಿಗೆಳೆಯುತ್ತೇವೆ ಎಂದು ಕೆಲವು ದಿನಗಳಿಂದ ಬಿಜೆಪಿಯ ನಾಯಕರು ಹೇಳುತ್ತಲೇ ಇದ್ದಾರೆ. ಮೊನ್ನೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೈಕೋರ್ಟ್ ನೊಟೀಸ್ ನೀಡಿದ್ದನ್ನು ನೋಡಿದರೆ ಇವರು ಹೇಳಿದ್ದು ನನಗೋ, ಯಡಿಯೂರಪ್ಪನವರಿಗೋ ಎಂದು ಗೊಂದಲವಾಗುತ್ತಿದೆ. ಧಮ್ ಇದ್ದರೆ ಮೊದಲು ಆ ಕೆಲಸ (ಹಗರಣ ಬಯಲಿಗೆ ಎಳೆಯುವುದು) ಮಾಡಿ. ನಾನು ಅದನ್ನು ಎದುರಿಸಲು ಸದಾ ಸಿದ್ಧ. ಈ ಬ್ಲಾಕ್ ಮೇಲ್ ತಂತ್ರಗಳನ್ನೆಲ್ಲ ನಿಮ್ಮವರ ಮೇಲೆ ಬಳಸಿಕೊಳ್ಳಿ. ನಮ್ಮ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯುವ ಮೊದಲು ಬಿಜೆಪಿ ನಾಯಕರ ಮೇಲೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಸಾಲು ಸಾಲು ಹಗರಣಗಳನ್ನು ಇತ್ಯರ್ಥ ಮಾಡಿಕೊಂಡು ಬನ್ನಿ. ನೀವು ಬೀಸುವ ಕತ್ತಿ ನಿಮ್ಮ ಕುತ್ತಿಗೆಯನ್ನೇ ಕೊಯ್ಯದಿರಲಿ’ ಎಂದು ಸಲಹೆ ಮಾಡಿದ್ದಾರೆ.

ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕ ಚರ್ಚೆಗೆ ನೀವು ಸಿದ್ಧರಿದ್ದಿರಾ ಎಂದು ಬೊಮ್ಮಾಯಿ ಅವರನ್ನು ಪ್ರಶ್ನಿಸಿರುವ ಸಿದ್ದರಾಮಯ್ಯ, ನಮ್ಮ ಪಕ್ಷ ಸಿದ್ಧವಿದೆ. ನೀವು ಸಿದ್ಧರಿದ್ದರೆ ಸಾರ್ವಜನಿಕ ಚರ್ಚೆಗೆ ಸ್ಥಳ-ಸಮಯ ನೀವೇ ನಿರ್ಧರಿಸಿ, ತಿಳಿಸಿ ನಾನು ಬಂದು ಚರ್ಚಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

‘ಧಮ್ ಎಂದರೆ ಧಮ್ ಬಿರಿಯಾನಿ ಎಂದು ನೀವು ತಿಳಿದುಕೊಂಡ ಹಾಗಿದೆ. ಭ್ರಷ್ಟಾಚಾರವನ್ನೇ ವಿಷಯವನ್ನಾಗಿಟ್ಟು ಚುನಾವಣೆ ಎದುರಿಸುವ ಧಮ್ ನಿಮಗಿದೆಯೇ? ನಿಮಗೆ ಆ ಧಮ್ ಇಲ್ಲ. ಕೊನೆಗೆ ಹಿಂದು-ಮುಸ್ಲಿಮ್, ಮಂದಿರ-ಮಸೀದಿ, ಹಿಜಾಬ್- ಕೇಸರಿ ಶಾಲುಗಳ ವಿವಾದದಲ್ಲಿಯೇ ನಿಮ್ಮ ಪ್ರಚಾರ ಕೊನೆಗೊಳ್ಳಬೇಕಿದೆ. ಬೇರೆ ದಾರಿ ನಿಮಗಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಹತಾಶೆಯಿಂದ ಸಿದ್ದರಾಮಯ್ಯ ಟೀಕೆ: ಸಚಿವ ಅಂಗಾರ

ಬಿಜೆಪಿ ಜನಸ್ಪಂದನ ಸಮಾವೇಶದ ಯಶಸ್ಸು ನೋಡಿ ಹತಾಶರಾಗಿರುವ ಸಿದ್ದರಾಮಯ್ಯ ವಿನಾಕಾರಣ ಟೀಕೆ ಮಾಡುತ್ತಿದ್ದಾರೆ ಎಂದು ಚಾಮರಾಜನಗರದಲ್ಲಿ ಮೀನುಗಾರಿಕೆ ಸಚಿವ ಎಸ್​.ಅಂಗಾರ ಹೇಳಿದರು. ಜನರಿಗೆ 3 ವರ್ಷದ ಸಾಧನೆ ತಿಳಿಸಲು ಸಮಾವೇಶ ಮಾಡಿದ್ದೇವೆ. ನಾವು ಕೊಟ್ಟಷ್ಟು ಅನುದಾನವನ್ನು ಯಾವ ಸರ್ಕಾರವೂ ಕೊಟ್ಟಿರಲಿಲ್ಲ. ನಾವೇನು 30ರಿಂದ 40 ವರ್ಷ ಆಡಳಿತ ಮಾಡಿಲ್ಲ. ರಾಜ್ಯದಲ್ಲಿ ಕೇವಲ ಎಂಟು ವರ್ಷವಷ್ಟೇ ಆಡಳಿತ ಮಾಡಿದ್ದೇವೆ. ಸಿದ್ದರಾಮೋತ್ಸವದಿಂದ ನಮಗೆ ಯಾವುದೇ ಭಯ ಆಗಿಲ್ಲ ಎಂದರು.

Published On - 12:32 pm, Sun, 11 September 22