ಬೆಂಗಳೂರು: ಪೊಲೀಸ್ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಪ್ರವೃತ್ತಿಯನ್ನು ಇತ್ತೀಚೆಗೆ ಸ್ವಯಂ ನಿವೃತ್ತಿ ಪಡೆದ ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ (Bhaskar Rao) ಖಂಡಿಸಿದ್ದಾರೆ. ಫೇಸ್ಬುಕ್ ಮತ್ತು ಟ್ವಿಟರ್ ಪೋಸ್ಟ್ಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ‘ಆಡಳಿತ ಪಕ್ಷ ತಪ್ಪು ಮಾಡುತ್ತಿದೆ’ ಎಂದು ಪರೋಕ್ಷವಾಗಿ ಕಿವಿ ಹಿಂಡಿದ್ದಾರೆ. ‘ಜವಾಬ್ದಾರಿಯುತವಾದ ಪೋಲಿಸ್ ಸಂಸ್ಥೆಯ ಆಯುಕ್ತರನ್ನು ಆಡಳಿತ ಪಕ್ಷದ ಹಿರಿಯ ನಾಯಕರು ಸುಳ್ಳು ಹೇಳುತ್ತಾರೆ ಎನ್ನುವುದು, ಸರ್ಕಾರ, ಮುಖ್ಯಮಂತ್ರಿಗಳನ್ನು ಕಡೆಗಣಿಸಿದಂತೆ. ಆಡಳಿತರೂಢ ಪಕ್ಷವು ತನ್ನ ಹಿರಿಯ ನಾಯಕರಿಗೆ ತಿಳಿ ಹೇಳುತ್ತದೆ ಎನ್ನುವುದು ಸಾರ್ವಜನಿಕರ ಅಪೇಕ್ಷೆಯಾಗಿದೆ’ ಎಂದು ಭಾಸ್ಕರ್ ರಾವ್ ತಾಕೀತು ಮಾಡಿದ್ದಾರೆ.
‘ಪೊಲಿಸ್ ಆಯುಕ್ತರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕಾರ್ಯವೈಖರಿಯ ಬಗ್ಗೆ ಭಿನ್ನಾಭಿಪ್ರಾಯವಿದ್ದರೆ ನೇರವಾಗಿ ಭೇಟಿ ಮಾಡುವುದು ಸೂಕ್ತ. 1.5 ಕೋಟಿ ನಾಗರಿಕರನ್ನು ರಕ್ಷಣೆ ಮಾಡುವ ಸಂಸ್ಥೆಯನ್ನು ಅವಮಾನ ಮಾಡಲಾಗಿದೆ. ಇದು ಅವಿವೇಕತನದ ರಾಜಕೀಯ’ ಎಂದು ಹರಿಹಾಯ್ದಿದ್ದಾರೆ.
‘ಬೆಂಗಳೂರು ಪೊಲೀಸ್ ಆಯುಕ್ತರು ಎಂದರೆ 1.5 ಕೋಟಿ ನಾಗರಿಕರನ್ನು ರಕ್ಷಿಸುವ ಸಂಸ್ಥೆಯಿದ್ದಂತೆ. ರಾಜ್ಯದ ಆಡಳಿತಾರೂಢ ಪಕ್ಷ ಮತ್ತು ಅದರ ನಾಯಕರೊಬ್ಬರು ಮಾಧ್ಯಮಗಳಲ್ಲಿ ಆಯುಕ್ತರನ್ನು ‘ಸುಳ್ಳುಗಾರ’ ಎಂದು ಕರೆಯುವುದು ಮುಖ್ಯಮಂತ್ರಿ ಮತ್ತು ಸರ್ಕಾರವನ್ನು ಅವಮಾನಿಸಿದಂತೆ. ಉತ್ತಮ ಆಡಳಿತವು ಮೇಲುಗೈ ಸಾಧಿಸುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ಅವರು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
The Commissioner of Police, Bengaluru is an institution that protects 15 million citizens. Calling the commissioner a “liar” in media by a politician of the ruling state government and party in power is insulting Chief Minister and Government.hopefully better governance prevails.
— Bhaskar Rao (@deepolice12) April 11, 2022
ಭಾಸ್ಕರ್ ರಾವ್ ಹೇಳಿಕೆಯ ಪರ ವಿರೋಧ ಚರ್ಚೆಗಳು ಸಾಮಾಜಿಕ ಮಾಧ್ಯಮದಲ್ಲಿ ಆರಂಭವಾಗಿದೆ. ‘ನಿಮ್ಮಿಂದ ಇಂತಹ ಹೇಳಿಕೆಗಳು ಇನ್ಮುಂದೆ ಪುಂಖಾನುಪುಂಖವಾಗಿ ಬರುತ್ತಿರುತ್ತೆ. ಅದು ಸಹಜ ಕೂಡ ಅಲ್ವೇ’ ಎಂದು ಕೆ.ಜಿ.ಸುಬ್ರಹ್ಮಣ್ಯ ಭಟ್ ಎನ್ನುವವರು ಪ್ರತಿಕ್ರಿಯಿಸಿದ್ದಾರೆ. ಭಾಸ್ಕರ್ ರಾವ್ ಆಮ್ ಪದ್ಮಿ ಪಕ್ಷಕ್ಕೆ ಸೇರಿದ್ದನ್ನೇ ದೊಡ್ಡದು ಮಾಡಿ ಹಲವರು ವ್ಯಂಗ್ಯವಾಡಿದ್ದಾರೆ. ಭಾಸ್ಕರ್ ರಾವ್ ಅವರ ಹಲವು ಅಭಿಮಾನಿಗಳು, ‘ನಿಮಗೆ ರಾಜಕೀಯ ಬೇಕಿರಲಿಲ್ಲ ಸರ್, ಅದು ಅತ್ಯಂತ ಕೆಟ್ಟ ಪಕ್ಷದ ಜೊತೆ ಕೈ ಜೋಡಿಸಿದಿರಿ. ನೀವು ಅಧಿಕಾರದಲ್ಲಿ ಇದ್ದಾಗಿನ ಪ್ರಾಮಾಣಿಕತೆ ಪ್ರಶ್ನೆ ಮಾಡೋ ಹಾಗೆ ಆಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜಗಳವೇ ಕೊಲೆಗೆ ಕಾರಣ: ಕಮಲ್ ಪಂತ್
ಚಂದ್ರು ಕೊಲೆ ಕುರಿತು ಟ್ವೀಟ್ ಮಾಡಿದ್ದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಸೈಮನ್ ಮತ್ತು ಚಂದ್ರು ಊಟ ಮುಗಿಸಿ ವಾಪಸ್ ಬರುವ ವೇಳೆ ಬೈಕ್ ಟಚ್ ಆದ ವಿಚಾರಕ್ಕೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಚಂದ್ರುಗೆ ಶಾಹಿದ್ ಚಾಕು ಇರಿದು ಪರಾರಿಯಾಗಿದ್ದಾನೆ. ಗಾಯಾಳು ಚಂದ್ರುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಕೊಲೆ ಪ್ರಕರಣ ಸಂಬಂಧ ಮೂವರ ಬಂಧಿಸಿದ್ದು ತನಿಖೆ ಮುಂದುವರೆಸಲಾಗಿದೆ’ ಎಂದು ಹೇಳಿದ್ದರು. ನಂತರ ಈ ಹೇಳಿಕೆಯನ್ನು ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ನಿರಾಕರಿಸಿದ್ದರು. ‘ಆಯುಕ್ತರು ಸುಳ್ಳು ಹೇಳುತ್ತಿದ್ದಾರೆ’ ಎಂದು ಆರೋಪ ಮಾಡಿದ್ದರು. ಆದರೆ ಆಯುಕ್ತರು ತಮ್ಮ ಹೇಳಿಕೆಗೆ ಬದ್ಧ ಎಂದು ಸ್ಪಷ್ಟಪಡಿಸಿದ್ದರು.
JJ Nagar PS murder case
In the midnight of 05.04.2022, Simon Raj and Chandru [ 22 years, r/o Cottonpete, Christian by community] had gone to an eatery on Mysore Road. While returning back on their bike, they collided with another bike, being ridden by one Shahid. 1/2— Kamal Pant, IPS. ಪೊಲೀಸ್ ಆಯುಕ್ತರು, ಬೆಂಗಳೂರು ನಗರ. (@CPBlr) April 5, 2022
ಸಿಐಡಿಗೆ ಚಂದ್ರು ಹತ್ಯೆ ತನಿಖೆ ಹೊಣೆ
ಬೆಂಗಳೂರಿನ ಜೆಜೆ ನಗರದಲ್ಲಿ ನಡೆದ ಯುವಕ ಚಂದ್ರು ಹತ್ಯೆ ಪ್ರಕರಣವು ಹಲವು ತಿರುವುಗಳನ್ನು ಪಡೆದುಕೊಂಡಿದೆ. ಉರ್ದು ಭಾಷೆ ಮಾತನಾಡದ ಕಾರಣಕ್ಕೆ ಚಂದ್ರು ಕೊಲೆ ಆಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸಹ ಹೇಳಿದ್ದರು. ಇದೀಗ ರಾಜ್ಯ ಸರ್ಕಾರವು ಚಂದ್ರು ಕೊಲೆ ತನಿಖೆಯ ಹೊಣೆಯನ್ನು ಸಿಐಡಿಗೆ ಒಪ್ಪಿಸಿದೆ. ಎಲ್ಲ ಆಯಾಮಗಳಿಂದ ತನಿಖೆ ನಡೆಸಿ ಸತ್ಯ ಬಯಲಿಗೆ ಎಳೆಯಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದರು.
ಇದನ್ನೂ ಓದಿ: ಚಂದ್ರು ಕೊಲೆ ಪ್ರಕರಣವನ್ನ ಸಿಐಡಿ ತನಿಖೆಗೆ ವಹಿಸಿದ ಕರ್ನಾಟಕ ಸರ್ಕಾರ; ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ
ಇದನ್ನೂ ಓದಿ: TV9 Inside Story: ಜೆಜೆ ನಗರ ಯುವಕ ಚಂದ್ರು ಮರ್ಡರ್ ಕೇಸ್: ಇಡೀ ವೃತ್ತಾಂತ ಏನು?