ಜೆಜೆ ನಗರದ ಹಿಂದೂ ರುದ್ರಭೂಮಿ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಆರೋಪ; ಲೋಕಾಯುಕ್ತ ಎಸ್ಪಿ ಹಾಗೂ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
ಚಾಮರಾಜಪೇಟೆಯ ಜೆಜೆ ನಗರದಲ್ಲಿರುವ ಹಿಂದೂ ರುದ್ರಭೂಮಿ ಒತ್ತುವರಿ ಮಾಡಿ ಬಿಬಿಎಂಪಿ ಕಟ್ಟಡ ನಿರ್ಮಾಣ ಆರೋಪ ಹಿನ್ನಲೆ ಲೋಕಾಯುಕ್ತ ಎಸ್ಪಿ ಹಾಗೂ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ.
ಬೆಂಗಳೂರು: ಚಾಮರಾಜಪೇಟೆಯ ಜೆಜೆ ನಗರದಲ್ಲಿರುವ ಹಿಂದೂ ರುದ್ರಭೂಮಿ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಆರೋಪದ ಹಿನ್ನಲೆ ಲೋಕಾಯುಕ್ತ ಎಸ್ಪಿ ಹಾಗೂ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ. ಹಿಂದೂ ರುದ್ರಭೂಮಿಗೆ ಸೇರಿದ ಜಾಗ ಒತ್ತುವರಿ ಬಗ್ಗೆ ವಿಶ್ವ ಸನಾತನ ಪರಿಷತ್ ಲೋಕಾಯುಕ್ತಕ್ಕೆ ದೂರು ನೀಡಿದ್ದು ಇದೀಗ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ. ಇದೇ ವೇಳೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ದೂರುದಾರರ ಜೊತೆ ಬಿಬಿಎಂಪಿ ಅಧಿಕಾರಿಗಳು ಸಹ ಸ್ಥಳದಲ್ಲಿ ಹಾಜರಾಗಿದ್ದರು.
ಪುಲಿಕೇಶಿನಗರ ಪೊಲೀಸರಿಂದ ರೈಸ್ ಪುಲ್ಲಿಂಗ್ ದಂಧೆ ಡೀಲ್ ಪ್ರಕರಣ; ಮತ್ತಿಬ್ಬರು ಅಮಾನತ್ತು
ಬೆಂಗಳೂರು: ಪುಲಿಕೇಶಿನಗರ ಠಾಣೆ ಪೊಲೀಸರಿಂದ ರೈಸ್ ಪುಲ್ಲಿಂಗ್ ಹಗರಣದಲ್ಲಿ ಜನರನ್ನು ವಂಚಿಸಿದ್ದ ಎಂಬ ಶಂಕಿತ ಆರೋಪಿಯಿಂದ 10 ಲಕ್ಷ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಹೆಡ್ ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಅಕ್ರಮದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ಪೊಲೀಸ್ ಸಿಬ್ಬಂದಿಗಳನ್ನ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅಮಾನತು ಮಾಡಿದ್ದಾರೆ. ನಸ್ರುಲ್ಲಾ, ಸನಾವುಲ್ಲಾ ಅಮಾನತುಗೊಂಡ ಪೊಲೀಸ್ ಸಿಬ್ಬಂದಿಗಳು. ಸದ್ಯ ದೂರುದಾರನಿಂದ ಮಾಹಿತಿ ಹಾಗೂ ಗುರುತು ಪತ್ತೆಹಚ್ಚಿದ ಹಿನ್ನೆಲೆ ಸಸ್ಪೆಂಡ್ ಮಾಡಲಾಗಿದೆ.
ಇದನ್ನೂ ಓದಿ:ಮಾ, 20ರಂದು ಬಿಬಿಎಂಪಿ ಪೌರಕಾರ್ಮಿಕರಿಂದ ಪ್ರತಿಭಟನೆಗೆ ಕರೆ: ನಗರದಲ್ಲಿ ಎದುರಾಗಲಿದೆ ಕಸ ವಿಲೇವಾರಿ ಸಮಸ್ಯೆ
ಘಟನೆಯ ಹಿನ್ನಲೆ
ಪುಲಿಕೇಶಿನಗರ ಠಾಣೆಯ ಪಿಎಸ್‌ಐ ಸೇರಿ ಮೂವರು ಹೆಡ್ ಕಾನ್‌ಸ್ಟೆಬಲ್‌ಗಳು ಶಂಕಿತ ಆರೋಪಿಯನ್ನು ಅಕ್ರಮವಾಗಿ ಕೂಡಿ ಹಾಕಿ ಕೇಸ್ ದಾಖಲಿಸುವುದಾಗಿ ಬೆದರಿಸಿ 10 ಲಕ್ಷ ರೂ. ಸುಲಿಗೆ ಮಾಡಿ ಸಿಕ್ಕಿಬಿದ್ದಿದ್ದರು. ಮಾರ್ಚ್ 20ರಂದು ರೈಸ್ ಪುಲ್ಲಿಂಗ್ ದಂಧೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಕೊಂಡಯ್ಯ ಎಂಬುವವರನ್ನು ಪಿಎಸ್‌ಐ ರುಮಾನ್ ಪಾಷಾ ಮತ್ತು ತಂಡ ವಶಕ್ಕೆ ಪಡೆದಿತ್ತು. ಆದರೆ ಈ ಬಗ್ಗೆ ಠಾಣಾ ಡೈರಿಯಲ್ಲಿ ನಮೂದಿಸಿರಲಿಲ್ಲ. ಪ್ರಕರಣವನ್ನೂ ದಾಖಲಿಸಿರಲಿಲ್ಲ. ಬದಲಿಗೆ ಕೊಂಡಯ್ಯ ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಕೇಸ್ ದಾಖಲಿಸುವುದಾಗಿ ಬೆದರಿಸಿ 10 ಲಕ್ಷ ರೂ. ಸುಲಿಗೆ ಮಾಡಿ ಬಿಟ್ಟು ಕಳಿಸಿದ್ದರು.
ಇನ್ನು ಇತ್ತೀಜೆಗೆ ಕೊಂಡಯ್ಯ ಹೆಚ್ಚುವರಿ ಪೊಲೀಸ್ ಆಯುಕ್ತ, ಐಜಿಪಿ ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ದೂರು ನೀಡಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಐಜಿಪಿ ಆಂತರಿಕ ತನಿಖೆ ನಡೆಸುವಂತೆ ಪೂರ್ವವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಅವರಿಗೆ ಸೂಚಿಸಿದ್ದರು. ಡಿಸಿಪಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಪಿಎಸ್‌ಐ ರುಮಾನ್ ಮತ್ತು ಸಿಬ್ಬಂದಿ ತಪ್ಪು ಮಾಡಿರುವುದು ಕಂಡು ಬಂದಿದ್ದು, ಐಜಿಪಿಗೆ ವರದಿ ಸಲ್ಲಿಸಿದ್ದರು. ಗುಳೇದ್ ಅವರ ವರದಿಯನ್ನು ಆಧರಿಸಿ, ಪೊಲೀಸ್ ಕಮಿಷನರ್, ಸಿ ಹೆಚ್ ಪ್ರತಾಪ್ ರೆಡ್ಡಿ ಅವರು ಪಿಎಸ್ಐ ಮತ್ತು ಮೂವರು ಹೆಡ್ ಕಾನ್ ಸ್ಟೇಬಲ್ ಗಳನ್ನು ಅಮಾನತುಗೊಳಿಸಿದ್ದರು. ಒಬ್ಬ ವ್ಯಕ್ತಿಯನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡು ಲಂಚ ಪಡೆದು ಬಿಡುಗಡೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು ಎಂದು ಪ್ರತಾಪ್ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದ್ದರು. ಪೊಲೀಸ್ ಠಾಣೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ನಾವು ಪರಿಶೀಲಿಸುತ್ತಿದ್ದೇವೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:30 pm, Wed, 5 April 23