ರಥ ಸಪ್ತಮಿ ಉತ್ಸವ: ಬೆಂಗಳೂರಿನ ಈ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ

Bengaluru Traffic Advisory: ಫೆಬ್ರವರಿ 4 ಮತ್ತು 5 ರಂದು ಬೆಂಗಳೂರಿನ ಆಡುಗೋಡಿಯಲ್ಲಿ ರಥಸಪ್ತಮಿ ಜಾತ್ರೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಆನೇಪಾಳ್ಯ ಜಂಕ್ಷನ್‌ನಿಂದ ಯುಕೋ ಬ್ಯಾಂಕ್ ಜಂಕ್ಷನ್‌ವರೆಗೆ ಆಡುಗೋಡಿ ಮುಖ್ಯ ರಸ್ತೆಯಲ್ಲಿ ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪರ್ಯಾಯ ಮಾರ್ಗಗಳನ್ನು ತಿಳಿಸಲಾಗಿದ್ದು, ವಾಹನ ನಿಲುಗಡೆಯನ್ನು ಸಹ ನಿಷೇಧಿಸಲಾಗಿದೆ. ಸಂಚಾರ ಪೊಲೀಸರು ಈ ಮಾಹಿತಿ ಹಂಚಿಕೊಂಡಿದ್ದಾರೆ.

ರಥ ಸಪ್ತಮಿ ಉತ್ಸವ: ಬೆಂಗಳೂರಿನ ಈ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ
ಸಾಂದರ್ಭಿಕ ಚಿತ್ರ
Updated By: ವಿವೇಕ ಬಿರಾದಾರ

Updated on: Feb 04, 2025 | 7:45 AM

ಬೆಂಗಳೂರು, ಫೆಬ್ರವರಿ 04: ಬೆಂಗಳೂರು (Bengaluru) ನಗರದ ಈ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಮುಂದಿನ ಕೆಲ ದಿನಗಳ ಕಾಲ ನಿರ್ಬಂಧಿಸಲಾಗಿದೆ. ಈ ಕುರಿತು ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಯಾವ ಯಾವ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ವಾಹನ ನಿಲುಗಡೆ ನಿಷೇಧ ಮತ್ತು ಪರ್ಯಾಯ ಮಾರ್ಗದ ಮಾಹಿತಿ ಇಲ್ಲಿದೆ.

ಮಂಗಳವಾರ (ಫೆ.04)ರ ರಾತ್ರಿ 7 ಗಂಟೆಯಿಂದ ಬುಧವಾರ (ಫೆ.05)ರ ಬೆಳಿಗ್ಗೆ 09.00 ಗಂಟೆಯವರೆಗೆ ಆಡುಗೋಡಿ ಮುಖ್ಯ ರಸ್ತೆಯಲ್ಲಿ ರಥ ಸಪ್ತಮಿ ಜಾತ್ರಾ ಮಹೋತ್ಸವ ಹಾಗೂ ವಿವಿಧ ದೇವರುಗಳ ಸುಮಾರು 32 ಕ್ಕೂ ಹೆಚ್ಚು ಪಲ್ಲಕ್ಕಿಗಳ ಮೆರವಣಿಗೆ ನಡೆಯುತ್ತವೆ.

ಈ ರಥಸಮಪ್ತಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಾರೆ. ಹೀಗಾಗಿ, ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಲಾಗಿದೆ. ಪರ್ಯಾಯ ಮಾರ್ಗ ಇಲ್ಲಿದೆ.

ಸಂಚಾರ ನಿರ್ಬಂಧ:

  • ರಥಸಪ್ತಮಿ ಜಾತ್ರಾ ಮಹೋತ್ಸವ ನಡೆಯುವ ಆಡುಗೋಡಿ ಮುಖ್ಯ ರಸ್ತೆಯಲ್ಲಿ ಆನೇಪಾಳ್ಯ ಜಂಕ್ಷನ್‌ನಿಂದ ಯುಕೋ ಬ್ಯಾಂಕ್ ಜಂಕ್ಷನ್​ವರೆಗೆ ಎರಡು ಬದಿಯಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
  • ಆಡುಗೋಡಿ ಜಂಕ್ಷನ್‌ಗೆ ಸಂಪರ್ಕ ಕಲ್ಪಿಸುವ ಅಡ್ಡ ರಸ್ತೆಗಳಾದ ನ್ಯೂ ಮೈಕೋ ಲಿಂಕ್ ರಸ್ತೆ ಮತ್ತು ಬಜಾರ್ ಸ್ಟ್ರೀಟ್ ರಸ್ತೆಗಳಲ್ಲಿಯೂ ಸಹ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಟ್ರಾಫಿಕ್​ ಡೈವರ್ಷನ್​ ಸ್ಥಳಗಳು:

  • ಆನೇಪಾಳ್ಯ ಜಂಕ್ಷನ್ಯು
  • ಕೋ ಬ್ಯಾಂಕ್​ ಜಂಕ್ಷನ್
  • ಮೈಕೋ ಬಂಡೆ ಜಂಕ್ಷನ್
  • ಬಜಾರ್ ಸ್ಟ್ರೀಟ್ ರಸ್ತೆ (ಶನಿಮಹಾತ್ಮ ದೇವಸ್ಥಾನ ಜಂಕ್ಷನ್)
  • ಡೈರಿ ಸರ್ಕಲ್

ಪರ್ಯಾಯ ಮಾರ್ಗ:

  • ಯುಕೋ ಬ್ಯಾಂಕ್ ಜಂಕ್ಷನ್ ಕಡೆಯಿಂದ ಆನೇಪಾಳ್ಯ ಮತ್ತು ಎಂ.ಜಿ ರಸ್ತೆಗೆ ಸಾಗುವ ವಾಹನಗಳು, ಯುಕೋ ಬ್ಯಾಂಕ್ ಜಂಕ್ಷನ್‌ನಲ್ಲಿ ಬಲತಿರುವು ಪಡೆದು, ಎನ್.ಜಿ.ವಿ ಬ್ಯಾಕ್ ಗೇಟ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಪಾಸ್‌ಪೋಟ್ ಆಫೀಸ್ ಬಳಿ ಬಲತಿರುವು ಪಡೆದು ಬುಚರಿ ಜಂಕ್ಷನ್ ಮುಖಾಂತರ ಅನೇಪಾಳ್ಯ ಮತ್ತು ಎಂ.ಜಿ ರಸ್ತೆಯ ಕಡೆಗೆ ಸಾಗಬಹುದು.
  • ಆನೇಪಾಳ್ಯ ಜಂಕ್ಷನ್ ಕಡೆಯಿಂದ ಮಡಿವಾಳ ಚೆಕ್​ಪೋಸ್ಟ್ ಹಾಗೂ ಹೊಸೂರು ರಸ್ತೆ ಕಡೆಗೆ ಸಾಗುವ ವಾಹನಗಳು ಅನೇಪಾಳ್ಯ ಜಂಕ್ಷನ್‌ನಲ್ಲಿ ಬಲತಿರುವು ಪಡೆದು, ಬಿ.ಜಿ ರಸ್ತೆಯ ಮುಖಾಂತರ ಸಾಗಿ ಡೈರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ ಡೈರಿ ಸರ್ಕಲ್ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಡಾ. ಮರಿಗೌಡ ರಸ್ತೆಯ ಮುಖಾಂತರ ಮಡಿವಾಳ ಚೆಕ್‌ಪೋಸ್ಟ್ ಮತ್ತು ಹೊಸೂರು ರಸ್ತೆಗೆ ತಲುಪಿ ಮುಂದೆ ಸಾಗಬಹುದು.
  • ಲಕ್ಕಸಂದ್ರ ಮೆಟ್ರೋ ಕಾಮಗಾರಿ ಸಂಬಂಧ ಬಿ.ಜಿ ರಸ್ತೆ ಚೆನ್ನಯ್ಯನ ಪಾಳ್ಯ ಕ್ರಾಸ್‌ನಿಂದ ಆನೇಪಾಳ್ಯ ಜಂಕ್ಷನ್‌ವರೆಗೆ ಸಂಚಾರವನ್ನು ನಿರ್ಬಂಧಿಸಿ ಅಧಿಸೂಚನೆ ಹೊರಡಿಸಿದ್ದು, ರಥ ಸಪ್ತಮಿ ಜಾತ್ರಾ ಮಹೋತ್ಸವ ಸಂಬಂಧ ಮೈಕೋಬಂಡೆ ಜಂಕ್ಷನ್‌ನಿಂದ ಆಡುಗೋಡಿ ಜಂಕ್ಷನ್‌ವರೆಗೆ ಮೈಕೋ ಲಿಂಕ್​ ರಸ್ತೆಯ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವುದರಿಂದ ಡೈರಿ ಸರ್ಕಲ್ ಕಡೆಯಿಂದ ಅನೇಪಾಳ್ಯ ಹಾಗೂ ಎಂ.ಜಿ ರಸ್ತೆಯ ಕಡೆಗೆ ಸಾಗುವ ವಾಹನಗಳು ಮೈಕೋ ಬಂಡೆ ಜಂಕ್ಷನ್‌ನಿಂದ ಬಿ.ಜಿ ರಸ್ತೆಯಲ್ಲಿಯೇ ಸ್ವಲ್ಪ ಮುಂದೆ ಸಾಗಿ ಚೆನ್ನಯ್ಯನ ಪಾಳ್ಯ ಕ್ರಾಸ್​ನಲ್ಲಿ ಎಡತಿರುವು ಪಡೆದು ವಿಲ್ಸನ್ ಗಾರ್ಡನ್ 10ನೇ ಕ್ರಾಸ್ ಕಡೆಗೆ ಸಂಚರಿಸಿ ಕೆ.ಹೆಚ್. ರಸ್ತೆಯ ಮೂಲಕ ಮುಂದೆ ಸಾಗಬಹುದು.
  • ಡೈರಿ ಸರ್ಕಲ್ ಜಂಕ್ಷನ್‌ನಲ್ಲಿ ಭಾರಿ ಗಾತ್ರದ ವಾಹನಗಳು ಹಾಗೂ ಬಸ್ಸುಗಳ ಸಂಚಾರವನ್ನು ಮೈಕೋಬಂಡೆ ಜಂಕ್ಷನ್, ಚಿನ್ನಯ್ಯನಪಾಳ್ಯ ಕ್ರಾಸ್ ಕಡೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಿದ್ದು, ಸದರಿ ವಾಹನಗಳು ನಿಮ್ಹಾನ್ಸ್, ವಿಲ್ಸನ್ ಗಾರ್ಡನ್ 10ನೇ ಕ್ರಾಸ್ ಮುಖಾಂತರ ಸಾಗಬಹುದು.
  • ಮಡಿವಾಳ ಚೆಕ್ ಪೋಸ್ಟ್ ಕಡೆಯಿಂದ ಯುಕೋ ಬ್ಯಾಂಕ್ ಜಂಕ್ಷನ್ ಕಡೆಗೆ ಭಾರಿ ಗಾತ್ರದ ವಾಹನಗಳು ಹಾಗೂ ಬಸ್ಸುಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದು, ವಾಹನಗಳು ಡಾ|ಮರೀಗೌಡ ರಸ್ತೆ-ಡೈರಿಸರ್ಕಲ್-ನಿಮ್ಹಾನ್ಸ್-ವಿಲ್ಸನ್ ಗಾರ್ಡನ್ 10ನೇ ಕ್ರಾಸ್ ಮುಖಾಂತರ ಸಾಗಬಹುದು.

ಪಾರ್ಕಿಂಗ್ ನಿಷೇಧ

  • ಆಡುಗೋಡಿ ಮುಖ್ಯ ರಸ್ತೆಯಲ್ಲಿ ಅನೇಪಾಳ್ಯ ಜಂಕ್ಷನ್‌ನಿಂದ ಯುಕೋ ಬ್ಯಾಂಕ್ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ.
  • ಮೈಕೋ ಬಂಡೆ ಜಂಕ್ಷನ್ ನಿಂದ ಆಡುಗೋಡಿ ಜಂಕ್ಷನ್ ವರೆಗೆ ನ್ಯೂ ಮೈಕೋ ಲಿಂಕ್ ರಸ್ತೆಯ ಎರಡೂ ಬದಿಗಳಲ್ಲಿ.
  • ಆಡುಗೋಡಿ ಬಹಾರ್ ಸ್ಟ್ರೀಟ್ ರಸ್ತೆಯ ಎರಡೂ ಬದಿಗಳಲ್ಲಿ

ಆಡುಗೋಡಿಯ ವಿವಿಧ ಬಡಾವಣೆಗಳ ನಿವಾಸಿಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ:

  • ಆಡುಗೋಡಿಯ ನಂಜಪ್ಪ ಲೇಔಟ್, ಮಹಾಲಿಂಗೇಶ್ವರ ಬಡಾವಣೆ, ಅನ್ಸಲ್ ಕೃಷ್ಣ ಅಪಾರ್ಟ್‌ ಮೆಂಟ್, ಬೃಂದಾವನ ಅಪಾರ್ಟ್​ಮೆಂಟ್, ಪ್ರೆಸ್ಟೀಜ್ ಅಪಾರ್ಟ್​ಮೆಂಟ್ ನಿವಾಸಿಗಳು ಡೈರಿ ಸರ್ಕಲ್ ಪೊಲೀಸ್ ವಸತಿಗೃಹದ ಪಕ್ಕದ ರಸ್ತೆಯಿಂದ ಸಂಚರಿಸಬಹುದು.
  • ಆಡುಗೋಡಿ ಸಿ.ಎ.ಆರ್ ದಕ್ಷಿಣ ಪೊಲೀಸ್ ವಸತಿಗೃಹದ ನಿವಾಸಿಗಳು ಮೇಲ್ಕಂಡ ಸಮಯದಲ್ಲಿ ಆಡುಗೋಡಿ ಮುಖ್ಯರಸ್ತೆಯ ಬದಲಾಗಿ ಮಂಗಳ ಕಲ್ಯಾಣ ಮಂಟಪದ ಗೇಟ್ ಮುಖಾಂತರ ಸಂಚರಿಸಬಹುದು.
  • ಬಜಾರ್ ಸ್ಪೀಟ್, ದೇವೇಗೌಡ ಬ್ಲಾಕ್, ಎ.ಕೆ ಕಾಲೋನಿ, ಆಡುಗೋಡಿ ಗ್ರಾಮ ಹಾಗೂ ಕೋರಮಂಗಲ 8ನೇ ಬ್ಲಾಕ್, ಬಾಲಪ್ಪ ಲೇಔಟ್ ನಿವಾಸಿಗಳು ಪಾಸ್‌ಪೋರ್ಟ್ ಆಫೀಸ್ ಕಡೆಯಿಂದ ಅಥವಾ ಕೋರಮಂಗಲ ಪೊಲೀಸ್ ಠಾಣೆ ಎದುರು ರಸ್ತೆಯ ಕಡೆಯಿಂ ಸಂಚರಿಸಬಹುದು.

ವರ್ತೂರಿನಲ್ಲಿ ಸಂಚಾರ ನಿರ್ಬಂಧ

ಬುಧವಾರ (ಫೆ.5) ರಿಂದ ಸೋಮವಾರ (ಫೆ.10) ವರ್ತೂರಿನಲ್ಲಿ ಶ್ರೀ ಚನ್ನರಾಯಸ್ವಾಮಿ ಜಾತ್ರಾ ರಥೋತ್ಸವ ದೀಪೋತ್ಸವ ಮತ್ತು ಪಲ್ಲಕ್ಕಿ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ವಾಹನ ಸಂಚಾರ ನಿರ್ಬಂಧಿಸಲಾಗಿದೆ, ಪರ್ಯಾಯ ಮಾರ್ಗ ಸೂಚಿಸಲಾಗಿದೆ.

ಪರ್ಯಾಯ ಮಾರ್ಗಗಳು :

  • ಗುಂಜೂರಿನಿಂದ ವೈಟ್‌ ಫೀಲ್ಡ್ ಕಡೆಗೆ ಸಂಚರಿಸುವ ಲಘು ವಾಹನಗಳು ಗುಂಜೂರಿನ ಶ್ರೀರಾಮದೇವಾಲಯದ ಬಳಿ ಬಲ ತಿರುವು ಪಡೆದು ಹಲಸಹಳ್ಳಿ ರಸ್ತೆಯಿಂದ ಮಧುರನಗರದ ಮೂಲಕ ಸೂರಹುಣಸೆ ಮತ್ತು ವಾಲೇಪುರ ಮೂಲಕ ಹಾಗೂ ವರ್ತೂರು ಕಾಲೇಜು ಮೂಲಕ ವೈಟ್ ಫೀಲ್ಡ್ ಕಡೆಗೆ ಸಂಚರಿಸಬಹುದಾಗಿದೆ.
  • ವೈಟ್‌ಫೀಲ್ಡ್‌ನಿಂದ ಗುಂಜೂರು ಕಡೆಗೆ ಸಂಚರಿಸುವ ಲಘು ವಾಹನಗಳು ಇಮ್ಮಡಿಹಳ್ಳಿ, ವಾಲೇಪುರ ಸೂರಹುಣಸೆ ರಸ್ತೆಯಿಂದ ಮಧುರನಗರದ ಮೂಲಕ ಹಲಸಹಳ್ಳಿ ಗುಂಜೂರು ಕಡೆಗೆ ಹಾಗೂ ವರ್ತೂರು ಪೊಲೀಸ್ ಠಾಣೆ ಕಡೆಯಿಂದ ಸಂಚರಿಸಬಹುದಾಗಿದೆ.
  • ಗುಂಜೂರು ಕಡೆಯಿಂದ ಕುಂದಲಹಳ್ಳಿ ಮತ್ತು ಮಾರತ್‌ ಹಳ್ಳಿ ಕಡೆಗೆ ಸಂಚರಿಸುವ ಲಘುವಾಹನಗಳು ಗುಂಜೂರು ಕೆ.ಎಫ್.ಸಿ ರಸ್ತೆ, ಪಣತ್ತೂರು ರೈಲ್ವೆ ಬ್ರಿಜ್ ಮೂಲಕ ಹಾಗೂ ವಿಬ್‌ಗಯಾರ್ ಕಡೆಯಿಂದ ಸಂಚರಿಸಬಹುದಾಗಿದೆ.

HGV ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗಗಳು:

  • ಹೊಸಕೋಟೆಯಿಂದ ಬರುವ ಎಲ್ಲಾ HGV ವಾಹನಗಳು ಕಡ್ಡಾಯವಾಗಿ ಹೋಪ್‌ ಫಾರ್ಮ್ನಲ್ಲಿ ಎಡಕ್ಕೆ ತೆಗೆದುಕೊಂಡು ಚನ್ನಸಂದ್ರ ಮಾರ್ಗವಾಗಿ ಸರ್ಜಾಪುರ ಕಡೆಗೆ ಸಂಚರಿಸಬಹುದಾಗಿದೆ.
  • ಹೆಚ್.ಎ.ಎಲ್ ಓಲ್ಡ್ ಏ‌ರ್ಪೋರ್ಟ್ ಮಾರ್ಗವಾಗಿ ಬರುವ ಎಲ್ಲಾ HGV ವಾಹನಗಳು ಕಡ್ಡಾಯವಾಗಿ ವರ್ತೂರು ಕೋಡಿ, ಹೋಪ್‌ ಫಾರ್ಮ್, ಚನ್ನಸಂದ್ರ ಮಾರ್ಗವಾಗಿ ಸರ್ಜಾಪುರ ಸಂಚರಿಸಬಹುದಾಗಿದೆ.
  • ಸರ್ಜಾಪುರದಿಂದ ಬರುವ ಎಲ್ಲಾ HGV ವಾಹನಗಳು ಚಿಕ್ಕತಿರುಪತಿ, ದೊಮ್ಮಸಂದ್ರ, ಕೊಡತಿ, ಬೆಳ್ಳಂದೂರು ಮಾರ್ಗವಾಗಿ ಸಂಚರಿಸಬಹುದಾಗಿದೆ.
  • ಬೆಳ್ಳಂದೂರು ಮಾರ್ಗವಾಗಿ ಬರುವ HGV ವಾಹನಗಳು ಕೊಡತಿ, ದೊಮ್ಮಸಂದ್ರ ಮಾರ್ಗವಾಗಿ ಸಂಚರಿಸಬಹುದಾಗಿದೆ.
  • ಗುಂಜೂರು ಬಿ.ಎಂ.ಟಿ.ಸಿ ಡಿಪೋ-41 ಯಿಂದ ಗುಂಜೂರು ವರ್ತೂರು ಕಡೆಗೆ ಹೋಗುವ ಬಸ್ಸುಗಳು ನೆರಿಗೆ ರಸ್ತೆಯನ್ನು ಬಳಸಿ ಹೊಸಹಳ್ಳಿ ಮಾರ್ಗವಾಗಿ ಮದುರನಗರ ಕಡೆಯಿಂದ ವರ್ತೂರಿನ ಮಾರ್ಗವಾಗಿ ಸಂಚರಿಸಬಹುದಾಗಿದೆ.

ಹಳೇ ಮದ್ರಾಸ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ

  • ಕೆನ್ಸಿಂಗ್​ಟನ್​ ರಸ್ತೆಯಲ್ಲಿ ಬಿಬಿಎಂಪಿ ವತಿಯಿಂದ ಮಂಗಳವಾರ (ಫೆ.04) ರಿಂದ 45 ದಿನಗಳ ಕಾಲ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ವಾಹನ ಸಂಚಾರ ಮಾರ್ಪಾಡು ನಿರ್ಬಂಧಿಸಲಾಗಿದೆ.

ವಾಹನ ಸಂಚಾರ ನಿರ್ಬಂಧಿಸಿರುವ ರಸ್ತೆ :

  • ಹಳೆ ಮದ್ರಾಸ್ ರಸ್ತೆ ಆಂಜನೇಯ ಜಂಕ್ಷನ್‌ನಿಂದ – ಕೆನ್ಸಿಂಗ್ಟನ್ ಜಂಕ್ಷನ್ – ಗುರುದ್ವಾರ ಜಂಕ್ಷನ್‌ ವರೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
  • ಕೆನ್ಸಿಂಗ್ಟನ್ ಜಂಕ್ಷನ್‌‌ನಿಂದ ಎಮ್​​ಇಜಿ ಜಂಕ್ಷನ್​ವರೆಗೆ ಎರಡೂ ಬದಿಯ ಸಂಚಾರವನ್ನು ನಿರ್ಬಂಧಿಸಲಾಗಿದೆ.
  • ತಾಮರೈ ಕಣ್ಣನ್ ರಸ್ತೆಯಲ್ಲಿಯೂ ಸಹ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: ಏರ್ ಶೋ: ಬೆಂಗಳೂರಿನಲ್ಲಿ ಐದು ದಿನಗಳ ಕಾಲ ರೂಮ್, ಕ್ಯಾಬ್ ಸಿಗೋದು ಕಷ್ಟ!

ಪರ್ಯಾಯ ಮಾರ್ಗ:

  • ಇಂದಿರಾನಗರದ 80 ಅಡಿ ರಸ್ತೆ ಮತ್ತು 100 ಅಡಿ ರಸ್ತೆ ಕಡೆಯಿಂದ ಹಳೆ ಮದ್ರಾಸ್ ರಸ್ತೆ ಮೂಲಕ ನಗರದ ಕಡೆಗೆ ಹೋಗುವ ವಾಹನ ಚಾಲಕರು/ಸವಾರರು ಆಂಜನೇಯ ಜಂಕ್ಷನ್ ಬಳಿ ಎಡ ತಿರುವು ಪಡೆದು ಸ್ವಾಮಿ ವಿವೇಕಾನಂದ ರಸ್ತೆಯ ಮೂಲಕ ಆದರ್ಶ ಜಂಕ್ಷನ್ – ರಾಮಯ್ಯ ಜಂಕ್ಷನ್ – ಕಾಮಧೇನು ಜಂಕ್ಷನ್ ಟ್ರಿನಿಟಿ ಜಂಕ್ಷನ್ – ವೆಬ್ ಜಂಕ್ಷನ್ ಮೂಲಕ ಮುಂದೆ ಸಂಚರಿಸಬಹುದಾಗಿದೆ.
  • ವಾರ್ ಮೇಮೋರಿಯಲ್ ಕಡೆಯಿಂದ ಕೆ.ಆರ್.ಪುರ ಕಡೆಗೆ ಹೋಗುವ ವಾಹನ ಚಾಲಕರು/ಸವಾರರು ವಾರ್ ಮೇಮೋರಿಯಲ್ ಜಂಕ್ಷನ್ ಬಳಿ ಬಲ ತಿರುವು ಪಡೆದು – ತಿರುವಳ್ಳುವ‌ರ್ ಜಂಕ್ಷನ್ ಬಳಿ ಎಡ ತಿರುವು ಪಡೆದು ಗಂಗಾಧರ ಚಟ್ಟಿ ರಸ್ತೆ ಮೂಲಕ ಸಾಗಿ ಗುರುದ್ವಾರ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಬಾಸ್ಕರನ್ ರಸ್ತೆಯ ಮೂಲಕ ಮುಂದೆ ಸಂಚರಿಸಬಹುದಾಗಿದೆ.
  • ಕೆನ್ಸಿಂಗ್ಟನ್ ಜಂಕ್ಷನ್ ಕಡೆಯಿಂದ ಇಂದಿರಾನಗರ ಸಿ.ಎಂ.ಹೆಚ್ ರಸ್ತೆ ಕಡೆಗೆ ಹೋಗುವ ವಾಹನ ಚಾಲಕರು/ಸವಾರರು ಹಳೆ ಮದ್ರಾಸ್ ರಸ್ತೆ ಮೂಲಕ ಸಾಗಿ ಡಬಲ್ ರಸ್ತೆ ಜಂಕ್ಷನ್ ಬಳಿ ಬಲ ತಿರುವು ಪಡೆದು ಮುಂದೆ ಸಂಚರಿಸಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:44 am, Tue, 4 February 25