ಬೆಂಗಳೂರು ಏರ್ ಶೋ: ಜರ್ಮನ್ ಪೈಲಟ್​ಗಳಿಗೂ ತಟ್ಟಿದ ಟ್ರಾಫಿಕ್ ಜಾಮ್ ಬಿಸಿ, ಉದ್ಘಾಟನಾ ಸಮಾರಂಭ ಮಿಸ್

ಬೆಂಗಳೂರಿನ ಏರೋ ಇಂಡಿಯಾ ಏರ್ ಶೋಗೆ ಆಗಮಿಸಿದ ಜರ್ಮನಿಯ 15 ಮಂದಿ ಪೈಲಟ್‌ಗಳು ಭಾರಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಉದ್ಘಾಟನಾ ಸಮಾರಂಭದಿಂದ ವಂಚಿತರಾಗಿದ್ದ ಬಗ್ಗೆ ವರದಿಯಾಗಿದೆ. ಉಳಿದುಕೊಂಡಿದ್ದ ಹೋಟೆಲ್‌ನಿಂದ ಏರ್ ಶೋ ಸ್ಥಳಕ್ಕೆ ತೆರಳುವಾಗ ಅವರು ಎರಡು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿದ್ದರು.

ಬೆಂಗಳೂರು ಏರ್ ಶೋ: ಜರ್ಮನ್ ಪೈಲಟ್​ಗಳಿಗೂ ತಟ್ಟಿದ ಟ್ರಾಫಿಕ್ ಜಾಮ್ ಬಿಸಿ, ಉದ್ಘಾಟನಾ ಸಮಾರಂಭ ಮಿಸ್
ಬೆಂಗಳೂರು ಟ್ರಾಫಿಕ್ ಜಾಮ್

Updated on: Feb 11, 2025 | 12:30 PM

ಬೆಂಗಳೂರು, ಫೆಬ್ರವರಿ 11: ಬೆಂಗಳೂರು ಏರ್​ಶೋಗೆ ಬಂದ ಜರ್ಮನಿಯ ಪೈಲಟ್​ಗಳಿಗೂ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ. ಪರಿಣಾಮವಾಗಿ 15 ಮಂದಿ ಪೈಲಟ್​ಗಳಿಗೆ ಏರ್ ಶೋ ಉದ್ಘಾಟನಾ ಸಮಾರಂಭವೇ ಮಿಸ್ ಆಗಿದೆ! ಜರ್ಮನ್ ಪೈಲಟ್‌ಗಳು ತಾವು ಉಳಿದುಕೊಂಡಿದ್ದ ಹೋಟೆಲ್‌ನಿಂದ ಖಾಸಗಿ ಕ್ಯಾಬ್‌ನಲ್ಲಿ ಸೋಮವಾರ ಏರ್​ಶೋ ನಡೆಯುವ ಸ್ಥಳಕ್ಕೆ ತೆರಳಿದ್ದರು. ಸುಮಾರು ಎರಡು ಗಂಟೆಗಳ ಕಾಲ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡ ಕಾರಣ ಅವರಿಗೆ, ಉದ್ಘಾಟನಾ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ.

ವಿದೇಶಿ ಪ್ರತಿನಿಧಿಗಳಿಗೆಂದೇ ಸಂಚಾರ ಪೊಲೀಸರು ವ್ಯವಸ್ಥೆ ಮಾಡಿದ ಲೇನ್​ನಲ್ಲಿ ಜರ್ಮನಿಯ ಪೈಲಟ್​​ಗಳಿದ್ದ ಕ್ಯಾಬ್ ಪ್ರಯಾಣಿಸದೇ ಇದ್ದುದು ಅವರು ಟ್ರಾಫಿಕ್ ಜಾಮ್​ನಲ್ಲಿ ಸಿಲುಕಿಕೊಳ್ಳಲು ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ.

ಕಳೆದ ವಾರ ತಮ್ಮ A330 ಪ್ರಯಾಣಿಕ ವಿಮಾನದಲ್ಲಿ ಯಲಹಂಕ ವಾಯುಪಡೆ ನಿಲ್ದಾಣಕ್ಕೆ ಆಗಮಿಸಿದ್ದ ಜರ್ಮನಿ ಪೈಲಟ್​ಗಳ ತಂಡ ಏರೋ ಇಂಡಿಯಾ ಸ್ಥಳದಿಂದ 17 ಕಿ.ಮೀ ದೂರದಲ್ಲಿರುವ ಹೋಟೆಲ್‌ನಲ್ಲಿ ತಂಗಿತ್ತು. ಅವರು ಬೆಳಗ್ಗೆ 8 ಗಂಟೆ ಸುಮಾರಿಗೆ ಹೋಟೆಲ್‌ನಿಂದ ಹೊರಟು ಸಮಾರಂಭದ ಸ್ಥಳಕ್ಕೆ 11 ಗಂಟೆಗೆ ತಲುಪಿದ್ದರು. ಅಷ್ಟರಲ್ಲಾಗಲೇ ಉದ್ಘಾಟನಾ ಸಮಾರಂಭ ಮುಕ್ತಾಯವಾಗಿತ್ತು.

ಜರ್ಮನಿ ಪೈಲಟ್​ಗಳು ಹೇಳಿದ್ದೇನು?

ನಾವು ಏರ್ ಶೋ ಸ್ಥಳದ ಸಮೀಪ ತಲುಪುವವರೆಗೂ ಸಂಚಾರ ಸುಗಮವಾಗಿತ್ತು. ಆದರೆ, ಪ್ರವೇಶ ದ್ವಾರದಲ್ಲಿ ನಾವು ಸುಮಾರು ಒಂದೂವರೆ ಗಂಟೆಗಳ ಕಾಲ ಸಿಲುಕಿಕೊಂಡೆವು ಎಂದು ಹೆಸರು ಬಹಿರಂಗಪಡಿಸಲು ಬಯಸದ ಜರ್ಮನ್ ಪೈಲಟ್ ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಹಿಂದಿನ ದಿನವಷ್ಟೇ ನಮ್ಮ ಸ್ಥಳೀಯ ಮಾರ್ಗದರ್ಶಿ ಮತ್ತು ನಾವು ನಗರದ ಮೂಲಸೌಕರ್ಯ, ಸಂಚಾರ ದಟ್ಟಣೆ ಬಗ್ಗೆ ಚರ್ಚಿಸುತ್ತಿದ್ದೆವು. ಇದೀಗ ನಾವು ಅದನ್ನು ನೇರವಾಗಿ ಅನುಭವಿಸಿದೆವು ಎಂದು ಅವರು ಹೇಳಿದ್ದಾರೆ.

ಆದಾಗ್ಯೂ, ಏರೋ ಇಂಡಿಯಾ ಬಗ್ಗೆ ನಾವು ನಿರಾಶರಾಗಿಲ್ಲ. ನಾವು ಸ್ಥಳೀಯ ಜನರೊಂದಿಗೆ ಹೆಚ್ಚು ಸಂವಹನ ನಡೆಸಲು ಮತ್ತು ನಮ್ಮ ವಿಮಾನಗಳ ಬಗ್ಗೆ ಪ್ರಚಾರ ಮಾಡುವುದನ್ನು ಎದುರು ನೋಡುತ್ತಿದ್ದೇವೆ. ನಾವು ಮೊದಲ ದಿನದ ಪ್ರದರ್ಶನವನ್ನು ತಪ್ಪಿಸಿಕೊಂಡರೂ ಪರವಾಗಿಲ್ಲ. ಉಳಿದ ದಿನಗಳಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಏರ್​ಶೋ: ಏರ್​ಪೋರ್ಟ್​​ ರಸ್ತೆಯಲ್ಲಿ ಕಿಲೋಮೀಟರ್​ಗಟ್ಟಲೆ ಟ್ರಾಫಿಕ್ ಜಾಮ್​

ಏತನ್ಮಧ್ಯೆ, ವಿದೇಶಿ ಗಣ್ಯರಿಗಾಗಿ ಉತ್ತಮ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಜರ್ಮನ್ ಪೈಟಲ್​ಗಳ ತಂಡವು ನಾವು ಮಾಡಿದ ವ್ಯವಸ್ಥೆಗಳನ್ನು ಸ್ಪಷ್ಟವಾಗಿ ತಪ್ಪಿಸಿಕೊಂಡಿದೆ. ಟ್ರಾಫಿಕ್ ಪೊಲೀಸರು ಪ್ರತ್ಯೇಕ ಲೇನ್ ಅನ್ನು ರಚಿಸಿದ್ದರು. ಪ್ರತಿನಿಧಿಗಳ ಅನುಕೂಲಕ್ಕಾಗಿ ಮಾತ್ರ ಈ ಲೇನ್ ಅನ್ನು ರಚಿಸಲಾಗಿದೆ. ಜರ್ಮನ್ ಪೈಲಟ್​ಗಳ ತಂಡ ತಪ್ಪಾಗಿ ಬೇರೆ ಲೇನ್​ನಲ್ಲಿ ಬಂದಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ