ಎಐಸಿಸಿ ಅಧ್ಯಕ್ಷರಾದ ನಂತರ ಮೊದಲ ಭಾರಿಗೆ ರಾಜ್ಯಕ್ಕೆ ಭೇಟಿ ನೀಡಲಿರುವ ಮಲ್ಲಿಕಾರ್ಜುನ ಖರ್ಗೆ: ಶಕ್ತಿ ಪ್ರದರ್ಶನಕ್ಕೆ ಮುಂದಾದ ಕೈ ನಾಯಕರು
ಇಂದು ಮಲ್ಲಿಕಾರ್ಜುನ ಖರ್ಗೆ ಆಗಮನ ಹಿನ್ನೆಲೆ ಖರ್ಗೆ ಮುಂದೆ ಶಕ್ತಿ ಪ್ರದರ್ಶನಕ್ಕೆ ತವರು ಜಿಲ್ಲೆ ಕಲಬುರಗಿಯ ಕೈ ನಾಯಕರು ಮುಂದಾಗಿದ್ದಾರೆ. ಖರ್ಗೆ ಸ್ವಾಗತಕ್ಕೆ ಕಲಬುರಗಿ ಜಿಲ್ಲೆಯ ಅಫಜಲಪುರ ಸೇರಿದಂತೆ ಹಲವಡೆಯಿಂದ ಸಾವಿರಾರು ಕಾರ್ಯಕರ್ತರನ್ನು ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತಿದೆ.
ಬೆಂಗಳೂರು: ರಾಜ್ಯಸಭಾ ವಿರೋಧ ಪಕ್ಷದ ನಾಯಕರಾಗಿದ್ದ ಕಾಂಗ್ರೆಸ್ ಹಿರಿಯ ಮುತ್ಸದಿ ರಾಜಕಾರಣಿ ಮಲ್ಲಿಕಾರ್ಜುನ್ ಖರ್ಗೆ(Mallikarjun Kharge) ಎಐಸಿಸಿಯ ರಾಷ್ಟ್ರೀಯ ಅಧ್ಯಕ್ಷರಾಗಿ(AICC President) ಆಯ್ಕೆಯಾದ ನಂತರ ಇದೇ ಮೊದಲ ಭಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಬೆಳಗ್ಗೆ 10:50 ರ ಯುಕೆ 815 ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ಮಲ್ಲಿಕಾರ್ಜುನ್ ಖರ್ಗೆ ಆಗಮಿಸುತ್ತಿದ್ದು ನೂತನ ಅಧ್ಯಕ್ಷರಿಗೆ ಅದ್ದೂರಿ ಸ್ವಾಗತ ಕೋರಲು ಕೈ ನಾಯಕರು ಮುಂದಾಗಿದ್ದಾರೆ.
ಬೆಳಗ್ಗೆ 10:50 ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೂತನ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸುತ್ತಿದ್ದು ಏರ್ಪೋಟ್ ನಿಂದಲೆ ಅದ್ದೂರಿ ಸ್ವಾಗತಕೋರಲು ಸಿದ್ದರಾಗಿದ್ದಾರೆ. ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಕೈ ನಾಯಕರು ಸ್ವಾಗತಕೋರಲಿದ್ದಾರೆ. ಇನ್ನೂ ಏರ್ಪೋಟ್ ಗೆ ಕೇವಲ ಕೈ ನಾಯಕರಿಗೆ ಮಾತ್ರ ಎಂಟ್ರಿ ನೀಡಲಿದ್ದು ಕಾರ್ಯಕರ್ತರು ಮುಖಂಡರನ್ನ ಟೋಲ್ ಬಳಿ ನಿಂತು ಸ್ವಾಗತಕೋರುವಂತೆ ಪೊಲೀಸರು ಸೂಚಿಸಿದ್ದಾರೆ. ಹೀಗಾಗಿ ಬೆಳಗ್ಗೆ 11 ಗಂಟೆಗೆ ಟೋಲ್ ಬಳಿಗೆ ಬರುವ ನೂತನ ಅಧ್ಯಕ್ಷರಿಗೆ ಕೆಪಿಸಿಸಿ ವತಿಯಿಂದ ಹಾರ ಮತ್ತು ವಿವಿಧ ಕಲಾತಂಡಗಳಿಂದ ಆದ್ದೂರಿ ಸ್ವಾಗತಮಾಡಲಿದ್ದು ನಂತರ ಅಲ್ಲಿಂದ ಮೆರವಣಿಗೆ ಮೂಲಕ ಬೆಂಗಳೂರಿಗೆ ಕರೆದೋಗಲಿದ್ದಾರೆ.
ಬೆಂಗಳೂರಿನಲ್ಲಿ ಖರ್ಗೆ ತವರು ಜಿಲ್ಲೆ ಕಲಬುರಗಿ ಕೈ ನಾಯಕರ ಶಕ್ತಿ ಪ್ರದರ್ಶನ
ಇಂದು ಮಲ್ಲಿಕಾರ್ಜುನ ಖರ್ಗೆ ಆಗಮನ ಹಿನ್ನೆಲೆ ಖರ್ಗೆ ಮುಂದೆ ಶಕ್ತಿ ಪ್ರದರ್ಶನಕ್ಕೆ ತವರು ಜಿಲ್ಲೆ ಕಲಬುರಗಿಯ ಕೈ ನಾಯಕರು ಮುಂದಾಗಿದ್ದಾರೆ. ಖರ್ಗೆ ಸ್ವಾಗತಕ್ಕೆ ಕಲಬುರಗಿ ಜಿಲ್ಲೆಯ ಅಫಜಲಪುರ ಸೇರಿದಂತೆ ಹಲವಡೆಯಿಂದ ಸಾವಿರಾರು ಕಾರ್ಯಕರ್ತರನ್ನು ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತಿದೆ. ಕಲಬುರಗಿ ಜಿಲ್ಲೆಯಿಂದಲೇ ಹತ್ತು ಸಾವಿರಕ್ಕೂ ಹೆಚ್ಚು ಜನ ಬೆಂಗಳೂರಿಗೆ ಬರಲಿದ್ದಾರೆ. ಇಂದು ಬೆಂಗಳೂರು ಅರಮನೆ ಮೈದಾನದಲ್ಲಿ ಸರ್ವೋದಯ ಸಮಾವೇಶ ನಡೆಯಲಿದೆ.
ಹುಟ್ಟುಹಬ್ಬ ಮೂಲಕ ಶಕ್ತಿ ಪ್ರದರ್ಶನಕ್ಕೆ ವಿನಯ್ ಕುಲಕರ್ಣಿ ಸಿದ್ಧತೆ
ನಾಳೆ ಮಾಜಿ ಸಚಿವ ವಿನಯ್ ಕುಲಕರ್ಣಿ ಹುಟ್ಟುಹಬ್ಬ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಕಿತ್ತೂರು ವಲಯದಲ್ಲಿ ಅದ್ಧೂರಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಕಾರ್ಯಕ್ರಮಕ್ಕೆ ನೂತನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಲ್ಪಿ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ಗೆ ಆಹ್ವಾನ ನೀಡಲಾಗಿದೆ. ಧಾರವಾಡ ಜಿ.ಪಂ ಸದಸ್ಯ ಯೋಗೇಶ್ ಗೌಡ ಹತ್ಯೆ ಕೇಸ್ನಲ್ಲಿ ಧಾರವಾಡ ಜಿಲ್ಲಾ ಪ್ರವೇಶಕ್ಕೆ ವಿನಯ್ ಕುಲಕರ್ಣಿಗೆ ನಿರ್ಬಂಧ ಹಿನ್ನೆಲೆ ಕಿತ್ತೂರಿನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಇನ್ನು ಈ ಬಗ್ಗೆ ಬೆಳಗಾವಿ ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ, ಮಾಜಿ ಶಾಸಕ ಸಂಜಯ್ ಪಾಟೀಲ್ ಮಾತನಾಡಿದ್ದು, ವಿನಯ್ ಕುಲಕರ್ಣಿ ಕೊಲೆ ಪ್ರಕರಣದಲ್ಲಿ 9 ತಿಂಗಳು ಜೈಲಿನಲ್ಲಿ ಇದ್ದವರು. ಕೊಲೆ ಆರೋಪಿ ವಿನಯ್ ಕುಲಕರ್ಣಿ ಜನ್ಮದಿನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬರ್ತಿದ್ದಾರೆ. ವಿನಯ್ ಏನು ಸಾಧನೆ ಮಾಡಿದ್ದಾರೆ ಎಂದು ಜನ್ಮದಿನ ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ ಖರ್ಗೆ ಬರುತ್ತಿದ್ದಾರೆ? ಕಾಂಗ್ರೆಸ್ ಮಾತನಾಡುವುದು ಬೇರೆ, ನಡವಳಿಕೆ ಬೇರೆ ಎಂಬುದಕ್ಕೆ ಇದು ಜೀವಂತ ಉದಾಹರಣೆ. ಕ್ರಿಮಿನಲ್ ಅಂತಾ ಗುರುತಿಸಿಕೊಂಡವರ, ಕೊಲೆ ಆರೋಪ ಹೊತ್ತವರ ಹುಟ್ಟುಹಬ್ಬಕ್ಕೆ ದೆಹಲಿಯಿಂದ ಬರ್ತಿದ್ದಾರೆ.
ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಕ್ಕೆ ಖುಷಿ ಇದೆ. ಆದ್ರೆ ಕೊಲೆ ಆರೋಪ ಹೊತ್ತವರ ಜನ್ಮದಿನದ ಆಚರಣೆಗೆ ಬರುವುದು ಎಷ್ಟರ ಮಟ್ಟಿಗೆ ಸರಿ? ಕೊಲೆ ಆರೋಪಿ ಜನ್ಮದಿನ ಮಾಡಿ ಜನರಿಗೆ ಏನು ಸಂದೇಶ ಕೊಡುತ್ತಿದ್ದೀರಿ? ಕಾಂಗ್ರೆಸ್ ಪಕ್ಷದ ನಡವಳಿಕೆಯನ್ನು ಇದು ತೋರಿಸುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಮಾಜಕ್ಕೆ ಕೆಟ್ಟ ಸಂದೇಶ ನೀಡುವ ಕೆಲಸ ಮಾಡಬೇಡಿ ಅಂತಾ ಖರ್ಗೆಗೆ ಮನವಿ ಮಾಡಿದ್ದಾರೆ.
Published On - 9:29 am, Sun, 6 November 22