ಇನ್ನೂ ನಿಗದಿಯಾಗದ ಓಲಾ ಹಾಗೂ ಉಬರ್ ಪ್ರಯಾಣ ದರ: ಹೈಕೋರ್ಟ್ ನಿರ್ಧಾರದಂತೆ ನಾಳೆ ದರ ನಿಗದಿ ಸಾಧ್ಯತೆ
ಓಲಾ, ಉಬರ್, ರ್ಯಾಪಿಡೋ ಕಂಪನಿಗಳೊಂದಿಗೆ ಸಭೆ ನಡೆಸಿ ದರ ನಿಗದಿ ಬಗ್ಗೆ ಚರ್ಚಿಸಿರುವ ಸಾರಿಗೆ ಇಲಾಖೆ ಅಧಿಕಾರಿಗಳು ಕಾಟಚಾರಕ್ಕೆ ಮೀಟಿಂಗ್ ಮಾಡಿ ಸುಮ್ಮನಾಗಿದ್ದಾರೆ. ಹೈಕೋರ್ಟ್ ನಿರ್ಧಾರದಂತೆ ನಾಳೆ ದರ ನಿಗದಿ ಮಾಡುವ ಸಾಧ್ಯತೆ ಇದೆ.
ಬೆಂಗಳೂರು: ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಓಲಾ ಹಾಗೂ ಉಬರ್ ಪ್ರಯಾಣ ದರವನ್ನು ನಿಗದಿ ಮಾಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ 15 ದಿನಗಳ ಕಾಲಾವಕಾಶ ನೀಡಿದೆ ಆದೇಶ ಹೊರಡಿಸಿದೆ. ಆದ್ರೆ ಕಾಟಾಚಾರಕ್ಕೆ ಸಭೆ ಮಾಡಿ ಸುಮ್ಮನಾಗಿರುವ ಸಾರಿಗೆ ಇಲಾಖೆ ಈ ವರೆಗೂ ದರ ನಿಗದಿ ಮಾಡಿಲ್ಲ. ಈಗಾಗಲೇ ಹೈಕೋರ್ಟ್ನ ಕಾಲಾವಕಾಶ ಮುಗಿಯುತ್ತಿದ್ದು ಹೈಕೋರ್ಟ್ ಮಧ್ಯ ಪ್ರವೇಶಿಸಿ ದರ ನಿಗದಿ ಮಾಡುತ್ತೆ ಎನ್ನಲಾಗುತ್ತಿದೆ. ನಾಳೆ ಹೈಕೋರ್ಟ್ನಲ್ಲೇ ಪ್ರಯಾಣದ ದರ ಫೈನಲ್ ಆಗುತ್ತಾ? ಎಂಬ ಪ್ರಶ್ನೆ ಎದ್ದಿದೆ.
ಸರ್ಕಾರ ನಿಗದಿ ಮಾಡಿದ್ದ ದರ ಹಾಗೂ ನಿಯಮವನ್ನು ಉಲ್ಲಂಘಿಸಿ ಸೇವೆ ನೀಡುತ್ತಿದ್ದ ಓಲಾ, ಉಬರ್, ಱಪಿಡೋ ಸೇವೆ ಬಂದ್ ಮಾಡಲು ಸರ್ಕಾರ ನಿರ್ಧರಿಸಿತ್ತು. ಬಳಿಕ ಹೈಕೋರ್ಟ್ ಮಧ್ಯ ಪ್ರವೇಶಿಸಿ ಆ್ಯಪ್ ಆಧರಿತ ಆಟೋ, ಕ್ಯಾಬ್ಗಳನ್ನು ಜನ ಹೆಚ್ಚಾಗಿ ಅವಲಂಬಿತರಾಗಿದ್ದಾರೆ. ಹೀಗಾಗಿ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಓಲಾ, ಉಬರ್ ಕಂಪನಿಗಳ ಜೊತೆ ಸಭೆ ನಡೆಸಿ 15 ದಿನದೊಳಗೆ ಹೊಸ ದರ ನಿಗದಿಗೆ ಹೈಕೋರ್ಟ್ ಆದೇಶಿಸಿತ್ತು. ಆದ್ರೆ ಡೆಡ್ಲೈನ್ ಮುಗಿದರೂ ಸಾರಿಗೆ ಇಲಾಖೆ ಮಾತ್ರ ಇನ್ನೂ ದರ ಫಿಕ್ಸ್ ಮಾಡಿಲ್ಲ.
ಇದನ್ನೂ ಓದಿ: ಓಲಾ, ಉಬರ್ ಹಾಗೂ ರ‍್ಯಾಪಿಡೋ ಜೊತೆಗಿನ ಸಭೆ ಅಂತ್ಯ: 2 ಕಿ.ಮೀ.ಗೆ ಆಟೋ ದರ 100 ರೂ. ನಿಗದಿ ಮಾಡಲು ಮನವಿ
ಓಲಾ, ಉಬರ್, ರ್ಯಾಪಿಡೋ ಕಂಪನಿಗಳೊಂದಿಗೆ ಸಭೆ ನಡೆಸಿ ದರ ನಿಗದಿ ಬಗ್ಗೆ ಚರ್ಚಿಸಿರುವ ಸಾರಿಗೆ ಇಲಾಖೆ ಅಧಿಕಾರಿಗಳು ಕಾಟಚಾರಕ್ಕೆ ಮೀಟಿಂಗ್ ಮಾಡಿ ಸುಮ್ಮನಾಗಿದ್ದಾರೆ. ಆ್ಯಪ್ ಆಧಾರಿತ ಓಲಾ- ಉಬರ್ ರ್ಯಾಪಿಡೋ ಹಾಗೂ ಸರ್ಕಾರದ ನಡುವೆ ದರ ನಿಗದಿ ಹಗ್ಗಜಗ್ಗಾಟ ಮುಂದುವರೆದಿದೆ. ಸಭೆಯಲ್ಲಿ ಕನಿಷ್ಠ 2 ಕಿ.ಮೀ.ಗೆ 100 ರೂ. ನಿಗದಿ ಮಾಡುವಂತೆ ಕಂಪನಿಗಳು ಡಿಮ್ಯಾಂಡ್ ಮಾಡಿದ್ದವು. ಹಾಗಾಗಿ ದರ ನಿಗದಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಮುಂದಾಗಿಲ್ಲ. ಹೈಕೋರ್ಟ್ ನಿರ್ಧಾರದಂತೆ ನಾಳೆ ದರ ನಿಗದಿ ಮಾಡುವ ಸಾಧ್ಯತೆ ಇದೆ.
ಟ್ರಾನ್ಸ್‌ಪೋರ್ಟ್ ಕಮೀಷನರ್ ವರ್ಗಾವಣೆ, ಜನರ ಆಕ್ರೋಶ
ಕೋರ್ಟ್ನಲ್ಲಿ ಕೇಸ್ ಇರುವಾಗಲೇ ಟ್ರಾನ್ಸ್‌ಪೋರ್ಟ್ ಕಮೀಷನರ್ ವರ್ಗಾವಣೆ ಮಾಡಲಾಗಿದೆ. ಟ್ರಾನ್ಸ್‌ಪೋರ್ಟ್ ಕಮೀಷನರ್ ಗಳನ್ನ ಮೂರು ತಿಂಗಳಿಗೆ ಆರು ತಿಂಗಳಿಗೆ ಟ್ರಾನ್ಸ್ಫರ್ ಮಾಡ್ತಿದ್ದಾರೆ. ಇವರು ಸರ್ಕಾರ ನಡೆಸುತ್ತಿದ್ದಾರಾ? ಅಥವಾ ಓಲಾ, ಉಬರ್ ಕಂಪನಿಗಳಿಗೆ ತಲೆ ಹಿಡಿಯುತ್ತಿದ್ದಾರಾ ಗೊತ್ತಿಲ್ಲ ಎಂದು ಸರ್ಕಾರದ ವಿರುದ್ದ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಸರ್ಕಾರ ಜನಸಾಮಾನ್ಯರ ಪರ ನಿಲ್ಲದೆ ಹಣವಂತರ ಪರ ನಿಲ್ಲುತ್ತಿದ್ದಾರೆ. ಆಟೋ ವಿಚಾರವಾಗಿ ಕೋರ್ಟ್ ನಲ್ಲಿ ಇರುವ ಕೇಸ್ ಇನ್ನು ಮುಗಿದಿಲ್ಲ. ಆಗಲೇ ಒಬ್ಬ ಜನಪರವಾಗಿ ನಿಂತ ಅಧಿಕಾರಿಯನ್ನ ಟ್ರಾನ್ಫರ್ ಮಾಡಿದ್ದಾರೆ. ಎಲ್ಲರೂ ಅವರವರು ಲಾಭ ಮಾಡುತ್ತಿದ್ದಾರೆ ಅಷ್ಟೇ. ಯಾಕಂದ್ರೆ ಅವರು ಸಾರ್ವಜನಿಕ ವಲಯದಲ್ಲಿ ಇಲ್ವಲ್ಲ. ಇವರು ರೇಟ್ ಫೀಕ್ಸ್ ಮಾಡುವ ಮುಂಚೆ ಆಟೋ ಚಾಲಕ ಅಸೋಸಿಯೇಷನ್ ಜೊತೆ ಚರ್ಚೆ ಮಾಡಬೇಕು. ಸರ್ಕಾರ ಯಾವ ಚರ್ಚೆಯನ್ನು ಮಾಡಿಲ್ಲ.
ಒಂದು ಡಿಪಾರ್ಟ್ಮೆಂಟ್ ಗೆ ಹಾಕಬೇಕು ಅಂದ್ರೆ ಆ ಡಿಪಾರ್ಟ್ಮೆಂಟ್ ಬಗ್ಗೆ ಅವರಿಗೆ ಗೊತ್ತಿರಬೇಕು. ಒಂದು ಡಿಪಾರ್ಟ್ಮೆಂಟ್ ಬಗ್ಗೆ ತಿಳಿದುಕೊಳ್ಳಲು 4 ರಿಂದ 5 ತಿಂಗಳು ಬೇಕು. ಆದ್ರೆ ಸರ್ಕಾರ ಆರು ತಿಂಗಳಿಗೆ ಒಬ್ಬರನ್ನ ಚೇಂಜ್ ಮಾಡ್ತಿದ್ದಾರೆ. ಈ ರೀತಿ ಚೇಂಜ್ ಮಾಡ್ತಿದ್ದಾರೆ ನಾಳೆ ಅಧಿಕಾರಿ ಏನು ವರದಿ ಸಲ್ಲಿಸುತ್ತಾರೆ. ಕಂಪನಿ ಏನ್ ಕೊಟ್ಟಿರುತ್ತಾರೆ ಅದನ್ನೆ ಹೊಸಬರು ಕೋರ್ಟ್ ಗೆ ಸಲ್ಲಿಸುತ್ತಾರೆ. ನಿಷ್ಠಾವಂತ ಅಧಿಕಾರಿಗಳು ನಮ್ಮ ಸರ್ಕಾರದಲ್ಲಿ ಕೆಲಸ ಮಾಡಲು ಸಾಧ್ಯವೇ ಇಲ್ಲ. ನಾಳೆ ಕೋರ್ಟ್ ನಲ್ಲಿ ಯಾವ ರೀತಿ ವರದಿ ಸಲ್ಲಿಸುತ್ತಾರೆ ನೋಡಬೇಕು ಎಂದು ಭಾರತ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ ನ ರಾಜ್ಯಾಧ್ಯಕ್ಷ ಜಯಣ್ಣ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
Published On - 12:21 pm, Sun, 6 November 22