ಬೆಂಗಳೂರು: ಕರ್ನಾಟಕದ ವಿದ್ಯಾರ್ಥಿಗಳು ಓದುವ 10ನೇ ತರಗತಿಯ ಪಠ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಸಂಸ್ಥಾಪಕ ಕೇಶವ ಬಲಿರಾಂ ಹೆಡಗೆವಾರ್ ಕುರಿತು ಪಾಠ ಸೇರ್ಪಡೆ ಮಾಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಶಿಕ್ಷಣದಲ್ಲಿ ಕೇಸರಿಕರಣ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಹೀಗಾಗಿಯೇ ಹಲವು ಪಾಠಗಳನ್ನು ಕೈಬಿಡಲಾಗಿದೆ ಎಂಬ ಆಕ್ಷೇಪಗಳು ಕೇಳಿಬಂದಿವೆ. ಜನಾಂಗೀಯ ದ್ವೇಷವನ್ನು ಖಂಡಿಸುವ ಪಿ.ಲಂಕೇಶ್ ಅವರ ‘ಮೃಗ ಮತ್ತು ಸುಂದರಿ’, ಸಾ.ರಾ.ಅಬೂಬಕರ್ ಅವರ ‘ಯುದ್ಧ’, ಎ.ಎನ್.ಮೂರ್ತಿರಾಯರ ‘ವ್ಯಾಘ್ರಗೀತೆ’ ಸೇರಿದಂತೆ ಹಲವು ಪಾಠಗಳನ್ನು ಕೈಬಿಟ್ಟಿದ್ದು ಸರಿಯಲ್ಲ ಎಂಬ ಮಾತುಗಳು ಕೇಳಿಬಂದಿವೆ.
ರೋಹಿತ್ ಚಕ್ರತೀರ್ಥ ಸಮರ್ಥನೆ
ಈ ಕುರಿತು ಪ್ರತಿಕ್ರಿಯಿಸಿರುವ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ, ಭಗತ್ ಸಿಂಗ್ ಪಠ್ಯ ತೆಗೆದು ಹೆಡಗೆವಾರ್ ಪಠ್ಯ ಅಳವಡಿಸಿಲ್ಲ. ಆರೋಪ ಮಾಡುವವರು ಮೊದಲು ಪಠ್ಯಪುಸ್ತಕ ನೋಡಬೇಕು. ಹೆಡಗೆವಾರ್ ಅವರು ದೇಶದ ಸಂಘಟನೆ ಬಗ್ಗೆ ಮಾಡಿದ ಭಾಷಣವನ್ನು ಮಾತ್ರ ಪಠ್ಯದಲ್ಲಿ ಸೇರ್ಪಡೆ ಮಾಡಿದ್ದೇವೆ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಹೆಡಗೆವಾರ್ ಅವರು ದೊಡ್ಡ ಸ್ವಯಂ ಸೇವಕರ ಸಂಘಟನೆ ಕಟ್ಟಿದವರು. ಪಠ್ಯದಲ್ಲಿ ಕೇಸರಿಕರಣ ಎನ್ನುವುದು ಸುಳ್ಳು ಎಂದು ತಿಳಿಸಿದ್ದಾರೆ.
ಎಐಡಿಎಸ್ಒ ಆಕ್ಷೇಪ
ರಾಜ್ಯ ಸರ್ಕಾರವು ಹೊಸದಾಗಿ ಪ್ರಕಟಿಸುತ್ತಿರುವ 10ನೇ ತರಗತಿ ಕನ್ನಡ ಪಠ್ಯಪುಸ್ತಕದಲ್ಲಿ ಭಗತ್ಸಿಂಗ್ ಪಾಠವನ್ನು ಕೈಬಿಟ್ಟು ಕೇಶವ ಬಲಿರಾಂ ಹೆಡಗೆವಾರ್ ಭಾಷಣ ಸೇರ್ಪಡೆ ಮಾಡಿರುವುದನ್ನು ಎಐಡಿಎಸ್ಒ ಖಂಡಿಸಿದೆ. ಶಿಕ್ಷಣವು ಪ್ರಜಾತಾಂತ್ರಿಕ ಧರ್ಮನಿರಪೇಕ್ಷ ಹಾಗೂ ವೈಜ್ಞಾನಿಕವಾಗಿರಬೇಕು. ಇದು ನಮ್ಮ ನವೋದಯ ಚಳವಳಿಯ ಹರಿಕಾರರು ಮತ್ತು ಸ್ವಾತಂತ್ರ್ಯ ಸಂಗ್ರಾಮದ ಹಲವು ಮಹಾನ್ ಹೋರಾಟಗಾರರ ಆಶಯವಾಗಿತ್ತು. ಆದರೆ ಇಲ್ಲಿಯವರೆಗೂ ಆಡಳಿತ ನಡೆಸಿರುವ ಎಲ್ಲಾ ಪಕ್ಷಗಳು ಈ ಆಶಯಗಳಿಗೆ ವಿರುದ್ಧವಾಗಿ ತಮ್ಮ ಅಜೆಂಡಾಗಳನ್ನು ಪುಸ್ತಕದಲ್ಲಿ ತೂರಿಸುವ ಷಡ್ಯಂತ್ರ ರೂಪಿಸುತ್ತಾ ಬಂದಿವೆ ಎಂದು ಹೇಳಿದೆ.
ರಾಜ್ಯ ಸರ್ಕಾರವು ಹೊಸದಾಗಿ ಪ್ರಕಟಿಸಿರುವ 10ನೇ ತರಗತಿಯ ಕನ್ನಡ ಪಠ್ಯದಿಂದ, ಸ್ವಾತಂತ್ರ್ಯಕ್ಕಾಗಿ 23ನೇ ವಯಸ್ಸಿಗೆ ಗಲ್ಲಿಗೇರಿದ ಮಹಾನ್ ಕ್ರಾಂತಿಕಾರಿ ಭಗತ್ಸಿಂಗ್ ಕುರಿತಾದ ಪಾಠವನ್ನು ಕೈಬಿಟ್ಟು ಆರ್ಎಸ್ಎಸ್ ಸ್ಥಾಪಕ ಹಾಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸದ, ಕೋಮು ಭಾವನೆಗಳನ್ನು ಹರಡಿದ ಹೆಡಗೆವಾರ್ ಭಾಷಣವನ್ನು ಸೇರಿಸಲಾಗಿದೆ. ಸ್ಥಾಪಿತ ಸತ್ಯವನ್ನು ತಿರುಚುವ ಸರ್ಕಾರದ ಈ ವಿತಂಡವಾದವನ್ನು ಎಐಡಿಎಸ್ಒ ಅತ್ಯುಗ್ರ ಪದಗಳಲ್ಲಿ ಖಂಡಿಸುತ್ತದೆ. ಆಡಳಿತಾರೂಢ ಬಿಜೆಪಿ ಮತ್ತು ಸಂಘಪರಿವಾರದವರಿಗೆ ಭಗತ್ ಸಿಂಗ್ ಸೇರಿದಂತೆ ಈ ದೇಶದ ಸ್ವಾತಂತ್ರ್ಯಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳ ಬಗ್ಗೆ ಕಿಂಚಿತ್ತೂ ಗೌರವವಿಲ್ಲದಿರುವುದನ್ನು ಇದು ಸ್ಪಷ್ಟೀಕರಿಸುತ್ತದೆ ಎಂದು ತಿಳಿಸಿದೆ.
ಕರ್ನಾಟಕದ ಬಿಜೆಪಿ ಸರ್ಕಾರವು ನೇಮಿಸಿರುವ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ತೀರ್ಮಾನವನ್ನು ಈಗಾಗಲೇ ಹಲವರು ಪ್ರಶ್ನಿಸಿದ್ದಾರೆ. ಸರ್ಕಾರವು ತನ್ನ ವಿಚಾರಧಾರೆಗಳನ್ನು ಶಿಕ್ಷಣದಲ್ಲಿ ತೂರಿಸುವ ಹುನ್ನಾರವಾಗಿ ಈ ಸಮಿತಿಯನ್ನು ರಚಿಸಿರುವುದು ಈಗ ಸಾಬೀತಾಗಿದೆ. ಸಂಕುಚಿತ ವಿಚಾರಗಳನ್ನು ಹರಡುವ ಸರ್ಕಾರದ ಈ ಷಡ್ಯಂತ್ರದ ವಿರುದ್ಧ ರಾಜ್ಯದ ಪ್ರಜ್ಞಾವಂತ ಜನತೆ ಹಾಗೂ ವಿದ್ಯಾರ್ಥಿ ಸಮುದಾಯ ಧ್ವನಿ ಎತ್ತಬೇಕಿದೆ. ತೆಗೆದುಹಾಕಿರುವ ಪಠ್ಯಗಳನ್ನು ಮರಳಿ ಸೇರಿಸಬೇಕು. ಧರ್ಮನಿರಪೇಕ್ಷವಲ್ಲದ, ಅವೈಜ್ಞಾನಿಕ ಹಾಗೂ ಪ್ರಜಾತಾಂತ್ರ ವಿರೋಧಿ ಚಿಂತನೆಗಳನ್ನು ಪಠ್ಯಪುಸ್ತಕದಿಂದ ಕೈಬಿಡಬೇಕು ಸರ್ಕಾರವನ್ನು ಒತ್ತಾಯಿಸಿದೆ.
ತಾಜಾ ಸುದ್ದಿಗೆ ಲಿಂಕ್ ಕ್ಲಿಕ್ ಮಾಡಿ
Published On - 2:59 pm, Mon, 16 May 22