ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ 50 ಸಾವಿರ ವಸೂಲಿ; ಸಾಮಾಜಿಕ ಕಾರ್ಯಕರ್ತ ಅಶೋಕ್ ಕುಮಾರ್ ಅಡಿಗ ಬಂಧಿಸಿದ ಸಿಸಿಬಿ ಪೊಲೀಸ್
ಒಂದು ತಿಂಗಳ ಹಿಂದೆ ಮಾಗಡಿ ರಸ್ತೆಯ ಕ್ಲಬ್ ಒಂದರಲ್ಲಿ ಇಸ್ಪಿಟ್ ಕ್ಲಬ್ ಮಾಲೀಕರ ಸಭೆ ನಡೆಸಿದ್ದ ಅಡಿಗ, ಈ ವೇಳೆ ತನ್ನ ಹೆಸರಲ್ಲಿ ಕ್ಲಬ್ ಇದ್ದರೆ ಯಾರು ರೈಡ್ ಮಾಡಲ್ಲ. ಇದಕ್ಕಾಗಿ ನೀವು ಪ್ರತಿ ತಿಂಗಳು 50 ಸಾವಿರ ನೀಡಬೇಕು ಎಂದು ಹೇಳಿದ್ದ. ಆದರೆ ಇದಕ್ಕೆ ರಮೇಶ್ ಹಾಗೂ ಶ್ರೀನಿವಾಸ್ ಎಂಬುವರು ಒಪ್ಪಿರಲಿಲ್ಲ.
ಬೆಂಗಳೂರು: ಸಿಸಿಬಿ ಪೊಲೀಸರು(CCB Police) ಸಾಮಾಜಿಕ ಕಾರ್ಯಕರ್ತ ಅಶೋಕ್ ಕುಮಾರ್ ಅಡಿಗರನ್ನ(Ashok Kumar Adiga) ಅರೆಸ್ಟ್ ಮಾಡಿದ್ದಾರೆ. ಬಂಧಿತ ಅಶೋಕ್ ಕುಮಾರ್‌ಗೆ 10 ದಿನ ಸಿಸಿಬಿ ಕಸ್ಟಡಿಗೆ ನೀಡಿ ಬೆಂಗಳೂರಿನ ಒಂದನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ. ಸಿಸಿಬಿ ಪೊಲೀಸರು 14 ದಿನಗಳ ಕಸ್ಟಡಿಗೆ ಕೇಳಿದ್ದರು. ಆದ್ರೆ ಕೋರ್ಟ್ 10 ದಿನ ಸಿಸಿಬಿ ಕಸ್ಟಡಿಗೆ ಆದೇಶಿಸಿದೆ. ರಮೇಶ್ ಎಂಬುವವರು ನೀಡಿದ ದೂರಿನ ಮೇರೆಗೆ ಅಶೋಕ್ ಕುಮಾರ್ ಅಡಿಗರನ್ನ ಬಂಧಿಸಲಾಗಿದೆ.
ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ 50 ಸಾವಿರ ವಸೂಲಿ ಬೆಂಗಳೂರಿನಲ್ಲಿ ಇಸ್ಪಿಟ್ ಕ್ಲಬ್ ನಡೆಸುವ ಬಗ್ಗೆ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತ ಅಶೋಕ್ ಕುಮಾರ್ ಅಡಿಗನ ಮೇಲೆ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ರಮೇಶ್ ಎಂಬುವವರು ಅಶೋಕ್ ಕುಮಾರ್ ಅಡಿಗನ ಮೇಲೆ ನೀಡಿದ ದೂರಿನ ಮೇರೆಗೆ . ಆರ್ಮ್ಸ್ ಆ್ಯಕ್ಟ್ 25,3 ಹಾಗೂ ಐಪಿಸಿ ಸೆಕ್ಷನ್ 384, 420 506b ಅಡಿ ಎಫ್ಐಆರ್ ದಾಖಲಾಗಿದೆ.
ಒಂದು ತಿಂಗಳ ಹಿಂದೆ ಮಾಗಡಿ ರಸ್ತೆಯ ಕ್ಲಬ್ ಒಂದರಲ್ಲಿ ಇಸ್ಪಿಟ್ ಕ್ಲಬ್ ಮಾಲೀಕರ ಸಭೆ ನಡೆಸಿದ್ದ ಅಡಿಗ, ಈ ವೇಳೆ ತನ್ನ ಹೆಸರಲ್ಲಿ ಕ್ಲಬ್ ಇದ್ದರೆ ಯಾರು ರೈಡ್ ಮಾಡಲ್ಲ. ಇದಕ್ಕಾಗಿ ನೀವು ಪ್ರತಿ ತಿಂಗಳು 50 ಸಾವಿರ ನೀಡಬೇಕು ಎಂದು ಹೇಳಿದ್ದ. ಆದರೆ ಇದಕ್ಕೆ ರಮೇಶ್ ಹಾಗೂ ಶ್ರೀನಿವಾಸ್ ಎಂಬುವರು ಒಪ್ಪಿರಲಿಲ್ಲ. ಹೀಗಾಗಿ ತನ್ನ ಸಹಕಾರ ಇಲ್ಲದೆ ಹೇಗೆ ಕ್ಲಬ್ ನಡೆಸುತ್ತೀರಿ ಎಂದು ಅವಾಜ್ ಹಾಕಿದ್ದ. ಅಲ್ಲದೆ ಪಿಸ್ತೂಲ್ ತೋರಿಸಿ ನಾನು ಅರ್ಧ ಗಂಟೆಯಲ್ಲಿ ನಿನ್ನ ಕ್ಲಬ್ ಕ್ಲೋಸ್ ಮಾಡಿಸ್ತಿನಿ ಎಂದು ಶ್ರೀನಿವಾಸ ಬಳಿ 50 ಸಾವಿರ ತೆಗೆದುಕೊಂಡು ಹೋಗಿದ್ದ. ಈ ಹಿನ್ನೆಲೆ ರಮೇಶ್ ಎನ್ನುವವರು ದೂರು ದಾಖಲಿಸಿದ್ದರು. ಸದ್ಯ ಸಿಸಿಬಿ ಪೊಲೀಸರು ಅಶೋಕ್ ಕುಮಾರ್ ಅಡಿಗರನ್ನ ಅರೆಸ್ಟ್ ಮಾಡಿದ್ದು 10 ದಿನಗಳ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಶೋಕ್ ಬಳಿ ಇರುವ ಪಿಸ್ತೂಲ್ಗೆ ಲೈಸೆನ್ಸ್ ಇದೆಯಾ? ಅದು ಇಲ್ಲಿಂದ ಬಂತು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ.