ಮನೆ ಬಾಗಿಲಿಗೆ ಬರಲಿದೆ ಮಾವಿನ ಹಣ್ಣು; ರೈತರಿಂದ ನೇರವಾಗಿ ಹಣ್ಣನ್ನು ಖರೀದಿಸಲು ಈ ವೆಬ್ಸೈಟ್ಗೆ ಭೇಟಿ ನೀಡಿ
ಇಂದಿನಿಂದ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಅಂಚೆ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಮಳೆ ಶುರುವಾಗುತ್ತಿದ್ದಂತೆ ಮಾವಿನ (Mango) ಸೀಸನ್ ಕೂಡಾ ಆರಂಭವಾಗುತ್ತದೆ. ಅಂಗಡಿಗಳಲ್ಲಿ ಹಣ್ಣಿನ ರಾಜ ಮಾವಿನ ಹಣ್ಣಿನ ವ್ಯಾಪಾರ ಜೋರಾಗಿದೆ. ಈ ನಡುವೆ ರಾಜ್ಯದ ಜನರಿಗೆ ಖುಷಿ ಸುದ್ದಿಯೊಂದಿದೆ. ಮಾವಿನ ಹಣ್ಣನ್ನು ತಿನ್ನಬೇಕು ಅಂದರೆ ಅಂಗಡಿಗೆ ಹೋಗಿ ಖರೀದಿಸಬೇಕು ಅಂತ ಇಲ್ಲ. ನಿಮಗೆ ಬೇಕಾಗುವ ನಾನಾ ತಳಿಯ ಮಾವಿನ ಹಣ್ಣನ್ನು ಆನ್‌ಲೈನ್‌ನಲ್ಲಿ (Online) ಬುಕ್ ಮಾಡಿದರೆ ಸಾಕು ಮನೆ ಬಾಗಿಲಿಗೆ ಬಂದು ತಲುಪುತ್ತದೆ. ಇಂದಿನಿಂದ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (KSMDMCL) ಅಂಚೆ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಕ್ ಮಾಡಲು ನಿಗಮದ www.karsirimangoes.karnataka.gov.in ವೆಬ್ಸೈಟ್ಗೆ ಹೋಗಬೇಕು. ನಂತರ ತಮಗೆ ಬೇಕಾಗುವ ತಳಿ ಹಣ್ಣನ್ನು ಆರ್ಡರ್ ಮಾಡಬಹುದು. ಹೀಗೆ ಬುಕ್ ಮಾಡಿದ ಹಣ್ಣು ನೇರವಾಗಿ ರೈತರಿಂದ ಗ್ರಾಹಕರ ಕೈಗೆ ಸೇರುತ್ತದೆ. ಕೊರೊನಾ ಕಾರಣದಿಂದ ರೈತರು ಬೆಳೆದ ಮಾವಿನ ಹಣ್ಣಿಗೆ ಬೇಡಿಕೆ ಇರಲಿಲ್ಲ. ಹೀಗಾಗಿ 2020 ರಲ್ಲಿ ರಾಜ್ಯ ಸರ್ಕಾರ ಮತ್ತು ಭಾರತ ಅಂಚೆ ರಾಮನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ರೈತರಿಂದ ಗ್ರಾಹಕರಿಗೆ ಆನ್ಲೈನ್ ಮೂಲಕ ತಲುಪಿಸುವ ಸೇವೆಗಳನ್ನ ಆರಂಭಿಸಿತು.
ಕಳೆದ ಬಾರಿ ಭರ್ಜರಿ ವ್ಯಾಪಾರ: ಕಳೆದ ಬಾರಿ ಯಶಸ್ಸು ಕಂಡ ನಂತರ KSMDMCL ಈ ಬಾರಿಯೂ ಆನ್ಲೈನ್ ಶಾಪ್ನ ಮುಂದುವರಿಸಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ KSMDMCLನ ವ್ಯವಸ್ಥಾಪಕ ನಿರ್ದೇಶಕ ಸಿಜಿ ನಾಗರಾಜು, ಕಳೆದ ಎರಡು ವರ್ಷಗಳಲ್ಲಿ ರೈತರು ಮತ್ತು ಗ್ರಾಹಕರಿಗೆ ಹೆಚ್ಚು ಉಪಯುಕ್ತವಾಗಿದೆ. 2020ರಲ್ಲಿ ರಾಜ್ಯಾದ್ಯಂತ 35 ಸಾವಿರ ಗ್ರಾಹಕರಿಗೆ ಒಟ್ಟು 100 ಟನ್ ಮಾವು ಪೂರೈಕೆಯಾಗಿದ್ದು, 2021ರಲ್ಲಿ ಕಡಿಮೆ ಇಳುವರಿ ಬಂದರೂ 45 ಸಾವಿರ ಗ್ರಾಹಕರಿಗೆ 79 ಟನ್ ಮಾವು ಮಾರಾಟವಾಗಿದೆ. ಈ ಮೂಲಕ ಗ್ರಾಹಕರು ಆನ್‌ಲೈನ್‌ನಲ್ಲಿ ರೈತರಿಂದ ಗುಣಮಟ್ಟದ ಮಾವನ್ನು ಖರೀದಿಸಲು ಆಸಕ್ತಿ ಹೊಂದಿದ್ದಾರೆ ಎಂದು ತಿಳಿಸಿದರು.
ಪೋರ್ಟಲ್ನಲ್ಲಿ ರೈತರ ಹೆಸರು, ಮೊಬೈಲ್ ಸಂಖ್ಯೆಗಳು ಮತ್ತು ಅವರು ಬೆಳೆದ ಹಣ್ಣುಗಳ ತಳಿಗಳ ಬಗ್ಗೆ ಮಾಹಿತಿ ಲಭ್ಯವಿದೆ. ಗ್ರಾಹಕರು ಆರ್ಡರ್ ಮಾಡಿದ ನಂತರ ರೈತರು ಸಂದೇಶವನ್ನು ಸ್ವೀಕರಿಸುತ್ತಾರೆ. ನಂತರ ರೈತರು ಹಣ್ಣುಗಳನ್ನು ಪ್ಯಾಕ್ ಮಾಡಿ ಬೆಂಗಳೂರಿನ ಜನರಲ್ ಪೋಸ್ಟ್ ಆಫೀಸ್ (GPO)ಗೆ ಕಳುಹಿಸುತ್ತಾರೆ. ಬಾಕ್ಸ್‌ಗಳನ್ನು GPO ಯಿಂದ ಆಯಾ ಸ್ಥಳಗಳಿಗೆ ಕಳುಹಿಸಲಾಗುತ್ತದೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:10 pm, Mon, 16 May 22