ಎಲ್ಲ ಮುಸ್ಲಿಮರು, ಕ್ರಿಶ್ಚಿಯನ್ನರು ಮುಂದೊಂದು ದಿನ ಆರ್‌ಎಸ್‌ಎಸ್ ಜೊತೆ ಸೇರಲೇಬೇಕು -ಸಚಿವ ಕೆಎಸ್ ಈಶ್ವರಪ್ಪ
ದೇಶದ ಎಲ್ಲಾ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಮುಂದೊಂದು ದಿನ ಆರ್‌ಎಸ್‌ಎಸ್(RSS)ನೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಎಂದು ಬಿಜೆಪಿಯ ಹಿರಿಯ ನಾಯಕ, ಸಚಿವ ಕೆಎಸ್ ಈಶ್ವರಪ್ಪ(KS Eshwarappa) ಹೇಳಿದ್ದಾರೆ.
ಬೆಂಗಳೂರು: ಹಿಜಾಬ್(Hijab) ತೀರ್ಪಿನ ನಂತರ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳು ಮತ್ತೊಮ್ಮೆ ಸಂಘರ್ಷಗಳು ಶುರುವಾಗುವಂತಹ ಸೂಚನೆಗಳನ್ನು ನೀಡುವಂತಿವೆ. ಏಟಿಗೆ ಎದುರೇಟಿನಂತೆ ಒಂದಲ್ಲಾ ಒಂದು ಬೆಳವಣಿಗೆಗಳು ನಡೆಯುತ್ತಿವೆ. ಇದರ ಮಧ್ಯೆ ರಾಜಕಾರಣಿಗಳ ಹೇಳಿಕೆಗಳು ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುವಂತೆ ಕಂಡು ಬರುತ್ತಿದೆ. ದೇಶದ ಎಲ್ಲಾ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಮುಂದೊಂದು ದಿನ ಆರ್‌ಎಸ್‌ಎಸ್(RSS)ನೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಎಂದು ಬಿಜೆಪಿಯ ಹಿರಿಯ ನಾಯಕ, ಸಚಿವ ಕೆಎಸ್ ಈಶ್ವರಪ್ಪ(KS Eshwarappa) ಹೇಳಿದ್ದಾರೆ. ಗುರುವಾರ ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ‘ನಮ್ಮ ಆರ್‌ಎಸ್‌ಎಸ್’ ಎಂಬ ಪದವನ್ನು ಬಳಸಿದ್ದು, ವಿರೋಧ ಪಕ್ಷದ ಶಾಸಕರು ಕೂಡ ಅದನ್ನೇ ಹೇಳುವ ದಿನ ಬರಲಿದೆ ಎಂದು ಪ್ರಸ್ತಾಪಿಸಿದಾಗ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಈ ಹೇಳಿಕೆ ನೀಡಿದ್ದು ಕಾಂಗ್ರೆಸ್ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವು ಬಿಜೆಪಿ ನಾಯಕರು ಮತ್ತು ಸಚಿವರೊಂದಿಗೆ ತಮ್ಮ ವೈಯಕ್ತಿಕ ಸಮೀಕರಣಗಳ ಬಗ್ಗೆ ಮಾತನಾಡುವಾಗ ಕೇಸರಿ ಸಂಘಟನೆಯ ಬಗ್ಗೆ ಪ್ರಸ್ತಾಪಿಸಿದಾಗ ಈ ವಿವಾದ ಪ್ರಾರಂಭವಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಜಕೀಯ ಭಿನ್ನಾಭಿಪ್ರಾಯ ಬದಿಗಿಟ್ಟು ಪರಸ್ಪರ ಗೌರವ ಕೊಡುವುದು ಪ್ರಮುಖವಾಗಿದೆ ಎಂದು ಹೇಳಿದರು. ನಂತರ ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಉಲ್ಲೇಖಿಸಿ, ನೀವು ಒಳ್ಳೆಯ ಮನುಷ್ಯರು, ನಾನು ಕೂಡಾ ಒಳ್ಳೆಯ ಮನುಷ್ಯ. ಒಂದು ವೇಳೆ ನೀವು ಬಿಜೆಪಿ ಅಥವಾ ಆರ್ಎಸ್ಎಸ್ ನವರಾದರೆ ಮಾತ್ರ ನಂತರ ಬರುತ್ತದೆ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾತುಕತೆಯಲ್ಲಿ ಏಕೆ ಆರ್ಎಸ್ಎಸ್ ಎಳೆದು ತರಲಾಗುತ್ತಿದೆ, ನಮ್ಮ ಆರ್ಎಸ್ಎಸ್ ನ್ನು ಏಕೆ ವಿರೋಧಿಸುತ್ತೀರಾ? ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು. ಈ ವೇಳೆ ನಾವು ಯಾವುದೇ ಭಾವನೆಗಳನ್ನು ಇಟ್ಟುಕೊಂಡು ಮಾತನಾಡುತ್ತಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸುತ್ತಿದ್ದಂತೆ, ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್, ” ಸ್ಪೀಕರ್ ಆಸನದಲ್ಲಿ ಕುಳಿತು ‘ನಮ್ಮ ಆರ್‌ಎಸ್‌ಎಸ್’ ಎಂದು ಹೇಳುತ್ತಿದ್ದೀರಾ?” ಆರ್ ಎಸ್ ಎಸ್ ಪ್ರತಿನಿಧಿ ಎಂಬಂತೆ ಹೇಗೆ ನಮ್ಮ ಆರ್ ಎಸ್ ಎಸ್ ಎಂದು ಹೇಳುತ್ತೀರಾ ಎಂದು ಕಾಗೇರಿ ಅವರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಗೇರಿ, “ನಮ್ಮ ಆರ್‌ಎಸ್‌ಎಸ್ ಅಲ್ಲದಿದ್ದರೆ ಮತ್ತೇನು? ಹೌದು. ಅದು ನಮ್ಮ ಆರ್‌ಎಸ್‌ಎಸ್. ಆರ್‌ಎಸ್‌ಎಸ್ ನಮ್ಮದು. ಜಮೀರ್, ನಾನು ನಿಮಗೆ ಒಂದು ವಿಷಯ ಹೇಳುತ್ತೇನೆ, ಇವತ್ತಲ್ಲದಿದ್ದರೆ ಭವಿಷ್ಯದಲ್ಲಿ, ನಮ್ಮ ದೇಶದಲ್ಲಿ, ಖಂಡಿತವಾಗಿಯೂ ನೀವು ಕೂಡ ಹೇಳಬೇಕು ನಮ್ಮ ಆರ್‌ಎಸ್‌ಎಸ್ಯೆಂದು ಎಂದು ತಿರುಗೇಟು ನೀಡಿದ್ರು. ಇದಕ್ಕೆ ಜಮೀರ್ ಖಾನ್ ಸೇರಿದಂತೆ ಕೆಲ ಕಾಂಗ್ರೆಸ್ ಶಾಸಕರು, ಆ ದಿನ ಬರುವುದಿಲ್ಲ, ಹೇಳುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.