ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣ ಹಿನ್ನೆಲೆ ನಗರದ ಸಿಐಡಿ ಕಚೇರಿಯಲ್ಲಿ ಅಧಿಕಾರಿಗಳಿಂದ ಎಡಿಜಿಪಿ ಅಮೃತ್ ಪೌಲ್ ವಿಚಾರಣೆ ಮಾಡಲಾಗಿದೆ. ಈ ಹಿಂದೆ ಪೊಲೀಸ್ ನೇಮಕಾತಿ ವಿಭಾಗದಲ್ಲಿ ಅಮೃತ್ ಪೌಲ್ ಎಡಿಜಿಪಿ ಆಗಿದ್ದರು. ಪೊಲೀಸ್ ನೇಮಕಾತಿ ವಿಭಾಗದ ಶಾಂತಕುಮಾರ್ ಬಂಧನವಾಗಿತ್ತು. ನೇಮಕಾತಿ ವಿಭಾಗದಲ್ಲಿ ಡಿವೈಎಸ್ಪಿ ಆಗಿದ್ದ ಶಾಂತಕುಮಾರ್, ಶಾಂತಕುಮಾರ್ ಬಂಧನ ಬೆನ್ನಲ್ಲೇ ಪೌಲ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿತ್ತು. ನಿನ್ನೆ ಸಂಜೆ 4.30ರಿಂದ 7 ಗಂಟೆಯವರೆಗೆ ಅಮೃತ್ ಪೌಲ್ ವಿಚಾರಣೆ ಮಾಡಿದ್ದು, ಇಂದು ಬೆಳಗ್ಗೆ 11 ಗಂಟೆಯಿಂದ ಮತ್ತೆ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಇದನ್ನೂ ಓದಿ: ನಂಜನಗೂಡು ನಂಜುಂಡೇಶ್ವರನ ಸನ್ನಿಧಿಯಲ್ಲಿ ನೆರವೇರಿದ ಉಚಿತ ಸಾಮೂಹಿಕ ವಿವಾಹ
ಅಮೃತ್ ಪಾಲ್ ವಿಚಾರಣೆಗೊಳಪಡಿಸುವ ಕುರಿತು ಈ ಹಿಂದೆಯೇ ಟಿವಿ 9 ವರದಿ ಬಿತ್ತರಿಸಿತ್ತು. ಪಿಎಸ್ಐ ಅಕ್ರಮ ನೇಮಕಾತಿ ಸಂಬಂಧ ಇಂಚಿಂಚೂ ಮಾಹಿತಿ ಬಹಿರಂಗ ಮಾಡಲಾಗಿತ್ತು. ಟಿವಿ 9 ವರದಿ ಬೆನ್ನಲ್ಲೇ ಡಿವೈಎಸ್ಪಿ ಶಾಂತ ಕುಮಾರ್ ಬಂಧಿಸಿದ್ದ ಸಿಐಡಿ, ನೇಮಕಾತಿ ವಿಭಾಗದ ಕೆಲ ಅಧಿಕಾರಿ ಮತ್ತು ಸಿಬ್ಬಂದಿಗಳನ್ನ ಬಂಧಿಸಿ ತೀವ್ರ ವಿಚಾರಣೆ ನಡೆಸಿತ್ತು. ಅಕ್ರಮ ಸಂಬಂಧ ಹಲವು ಮಹತ್ವದ ಸಾಕ್ಷಿಗಳನ್ನ ಕಲೆಹಾಕಲಾಗಿತ್ತು. ನೇಮಕಾತಿ ವಿಭಾಗದಲ್ಲಿ ಎಡಿಜಿಪಿ ಅಮೃತ್ ಪೌಲ್ ನಿನ್ನೆ ಸಂಜೆ ಸಿಐಡಿಯಿಂದ ವಿಚಾರಣೆ ಮಾಡಲಾಗುತ್ತಿದೆ. ಸದ್ಯ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು.
ಸಂಜೆ ವೇಳೆಗೆ ಅಮೃತ್ ಪೌಲ್ ಬಂಧನ ಸಾಧ್ಯತೆ..!
ಸಿಐಡಿ ಅಧಿಕಾರಿಗಳಿಂದ ಇಂದೇ ಅಮೃತ್ ಪೌಲ್ ಬಂಧನ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿವೆ. ಅಮೃತ್ ಪೌಲ್ ಸಹಕಾರ ಇಲ್ಲದೆ ಅಕ್ರಮ ನಡೆಯಲು ಸಾಧ್ಯವಿಲ್ಲ. ಇಂದು ವಿಚಾರಣೆ ವೇಳೆ ಸೂಕ್ತ ಉತ್ತರ ನೀಡದಿದ್ದಲ್ಲಿ ಸಂಜೆ ವೇಳೆಗೆ ಸಿಐಡಿ ಅಧಿಕಾರಿಗಳಿಂದ ಬಂಧನವಾಗುವ ಸಾಧ್ಯತೆಯಿದೆ.
ಮತ್ತೆ ಸಿಐಡಿ ವಶಕ್ಕೆ ಶಾಂತಕುಮಾರ್
545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿ ಡಿವೈಎಸ್ಪಿ ಶಾಂತಕುಮಾರ್ ಅವರನ್ನು ಸಿಐಡಿ ವಶಕ್ಕೆ ತೆಗೆದುಕೊಂಡಿದೆ. ಸಿಐಡಿ ಕಸ್ಟಡಿಗೆ ನೀಡಿದ್ದ ಅವಧಿ ಮುಗಿದಿದ್ದ ಹಿನ್ನೆಲೆಯಲ್ಲಿ ನಿನ್ನೆ ಅವರನ್ನು ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ಗೆ ಸಿಐಡಿ ಹಾಜರುಪಡಿಸಿತ್ತು. ಸಿಐಡಿ ಪರ ವಕೀಲರ ಮನವಿ ಮೇರೆಗೆ ಶಾಂತಕುಮಾರ್ನನ್ನು ನ್ಯಾಯಾಲಯವು ಮತ್ತೆ ಮೂರು ದಿನ ಸಿಐಡಿ ಕಸ್ಟಡಿಗೆ ಕೊಟ್ಟಿದೆ.
6 ಜನರ ಬಂಧನ
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಮಕಾತಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 6 ಮಂದಿಯನ್ನು ಸಿಐಡಿ ಬಂಧಿಸಿದೆ. ಇವರೆಲ್ಲರೂ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಸೂಚನೆಯಂತೆ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಬಂಧಿತ ಆರು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಪೈಕಿ ಎಎಚ್ಸಿ ಶ್ರೀಧರ್ ಬಳಿ ಸುಮಾರು ₹ 2 ಕೋಟಿ ನಗದು ಪತ್ತೆಯಾಗಿತ್ತು. ಹಿರಿಯ ಅಧಿಕಾರಿಗಳ ಸೂಚನೆಯಂತೆ ಹಣ ಪಡೆಯಲಾಗಿತ್ತು ಎಂಬ ಅಂಶವೂ ತನಿಖೆ ವೇಳೆ ಪತ್ತೆಯಾಯಿತು. ಸದ್ಯ ಐದರಿಂದ ಆರು ಅಭ್ಯರ್ಥಿಗಳಿಗೆ ಸೇರಿದ್ದ ಹಣ ಮಾತ್ರ ಸಿಕ್ಕಿದೆ. ಸಿಐಡಿ ತನಿಖೆ ವೇಳೆ ಇನ್ನಷ್ಟು ಹಣ ಪತ್ತೆಯಾಗುವ ಸಾಧ್ಯತೆಯಿದೆ. ಪ್ರಥಮ ದರ್ಜೆ ಗುಮಾಸ್ತ ಹರ್ಷನ ಮೂಲಕವೂ ಸಾಕಷ್ಟು ಅಕ್ರಮ ಅಗಿದೆ ಎಂದು ತಿಳಿಸಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:00 pm, Thu, 26 May 22