ಮಲಗಿದ್ದ ಬೀದಿ ನಾಯಿಯ ಮೇಲೆ ಕಾರು ಚಲಾಯಿಸಿದ ದುಷ್ಕರ್ಮಿ: ನರಳಾಡಿ ಪ್ರಾಣ ಬಿಟ್ಟ ಶ್ವಾನ

| Updated By: ಗಂಗಾಧರ​ ಬ. ಸಾಬೋಜಿ

Updated on: May 30, 2022 | 11:22 AM

ಶ್ವಾನ ಲಾರಾ ಕೇಸ್ ಬೆನ್ನಲ್ಲೇ ಮತ್ತೊಂದು ಅಮಾನವೀಯ ಕೃತ್ಯ. ಮಲಗಿದ್ದ ಬೀದಿ ನಾಯಿಯ ಮೇಲೆ ದುಷ್ಕರ್ಮಿ ಕಾರು ಹತ್ತಿಸಿರುವಂತಹ ಅಮಾನವೀಯ ಕೃತ್ಯ ನಡೆದಿದೆ. ಮೂಕ ಪ್ರಾಣಿಗಳ ಮೇಲಿನ ದೌರ್ಜನ್ಯ ಪದೇ ಪದೆ ಮರುಕಳಿಸುತ್ತಿದೆ.

ಮಲಗಿದ್ದ ಬೀದಿ ನಾಯಿಯ ಮೇಲೆ ಕಾರು ಚಲಾಯಿಸಿದ ದುಷ್ಕರ್ಮಿ: ನರಳಾಡಿ ಪ್ರಾಣ ಬಿಟ್ಟ ಶ್ವಾನ
ಮಲಗಿದ್ದ ಬೀದಿ ನಾಯಿಯ ಮೇಲೆ ಕಾರು ಚಲಾಯಿಸಿದ ದುಷ್ಕರ್ಮಿ
Follow us on

ಬೆಂಗಳೂರು: ಮೂಕ ಪ್ರಾಣಿಗಳ ಮೇಲಿನ ದೌರ್ಜನ್ಯ ಪದೇ ಪದೆ ಮರುಕಳಿಸುತ್ತಿದ್ದು, ಮಲಗಿದ್ದ ಬೀದಿ ನಾಯಿಯ ಮೇಲೆ ದುಷ್ಕರ್ಮಿ ಕಾರು ಹತ್ತಿಸಿರುವಂತಹ ಅಮಾನವೀಯ ಕೃತ್ಯ ಬೆಂಗಳೂರಿನ ಜಯನಗರ 9ನೇ ಬ್ಲ್ಯಾಕ್​ನಲ್ಲಿ ನಡೆದಿದೆ. ಶ್ವಾನ ಲಾರಾ ಕೇಸ್ ಬೆನ್ನಲ್ಲೇ ಮತ್ತೊಂದು ಅಮಾನವೀಯ ಕೃತ್ಯ ನಡೆದಿದ್ದು, ಇದೇ ಮೇ 27ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಾಯಿಯ ಮೇಲೆ ಕಾರು ಹತ್ತಿಸಿದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು, ಪರಿಣಾಮ ನರಳಾಡಿ ಶ್ವಾನ ಕೊನೆಯುಸಿರೆಳೆದಿದೆ. ಶ್ವಾನ ಪ್ರಿಯ ನಾಗರಾಜ್, ಬದ್ರಿ ಪ್ರಸಾದ್‌ ಎಂಬುವರಿಂದ ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಶ್ವಾನದ ಮೇಲೆ ಕಾರು ಹತ್ತಿಸಿರೋದು ಯಾರೆಂದು ತಿಳಿದುಬಂದಿಲ್ಲ. ನಾಗರಾಜ್, ಬದ್ರಿ ಪ್ರಸಾದ್‌ ಮೃತ ಶ್ವಾನದ ಅಂತ್ಯಕ್ರಿಯೆ ನಡೆಸಿದರು. ಆರೋಪಿಯನ್ನು ಶೀಘ್ರವೇ ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಲಾಗಿದೆ.

ಇದನ್ನೂ ಓದಿ; World No Tobacco Day 2022: ಧೂಮಪಾನಿಗಳಿಗೆ ಟೈಪ್​ 2 ಮಧುಮೇಹದ ಅಪಾಯ

ಬೀದಿ ನಾಯಿ ಲಾರಾ ಮೇಲೆ ಕಾರು ಚಲಾವಣೆ

ನಗರದಲ್ಲಿ ಇತ್ತೀಚೆಗೆ ಮನಕಲುಕುವ ದೃಶ್ಯವೊಂದು (ಫೆಬ್ರವರಿ 1ರಂದು) ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಹೌದು, ಬೀದಿ ನಾಯಿ ಲಾರಾ ಮೇಲೆ ಆದಿಕೇಶವಲು ಮೊಮ್ಮಗ ಕಾರು ಹತ್ತಿಸಿದ್ದ. ಘಟನೆ ಬಳಿಕ ಶ್ವಾನ ನಾಪತ್ತೆಯಾಗಿದ್ದು, ನಾಯಿಯ ಮೃತ ದೇಹ ಪತ್ತೆಯಾಗಿದೆ. ನರಳಾಡಿ ನರಳಾಡಿ ಕೊನೆಗೂ ಪ್ರಾಣ ಬಿಟ್ಟಿದ್ದು, ಹೆಬ್ಬಾಳ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಮೃತ ಶ್ವಾನ ಲಾರಾಳ ಪೋಸ್ಟ್ ಮಾಟಂ ಮಾಡಲಾಗಿದೆ. ಆಂಬುಲೆನ್ಸ್ ಮೂಲಕ ಸುಮ್ಮನಹಳ್ಳಿ ಚಿತಾಗಾರಕ್ಕೆ ಶ್ವಾನ ಲಾರಾ ಮೃತದೇಹವನ್ನು ತರಲಾಗಿದ್ದು, ಬಿಬಿಎಂಪಿ ಪ್ರಾಣಿಗಳ ಚಿತಾಗಾರದಲ್ಲಿ ಲಾರಾ ಅಂತ್ಯಕ್ರಿಯೆ ಮಾಡಲಾಯಿತು. ಅಂತ್ಯಕ್ರಿಯೆಯಲ್ಲಿ ಸ್ಯಾಂಡಲ್​ವುಡ್​ನ ನಟಿ ರಮ್ಯಾ ಭಾಗಿಯಾಗಿ ಕಂಬನಿ ಮಿಡಿದಿದ್ದಾರೆ.

ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ಹಾವಳಿ

ಮಡಿಕೇರಿ: ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ಹಾವಳಿ ಹೆಚ್ಚಾಗಿದ್ದು, ಹಸು ಕೊಂದು ವ್ಯಾಘ್ರ ಭಕ್ಷಿಸಿರುವಂತಹ ಘಟನೆ  ಪೊನ್ನಂಪೇಟೆ ತಾಲ್ಲೂಕಿನ ಬಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ. ಕಾಳೇಂಗಡ ಅಜಿತ್ ಎಂಬುವರಿಗೆ ಸೇರಿದ ಹಸು ಬಲಿಯಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಮನೆಯ ಟಿವಿ ಸ್ಟ್ಯಾಂಡ್​ ಕೆಳಗೆ ಅಡಗಿ ಕುಳಿತ ನಾಗರಹಾವು

ಮೈಸೂರು: ಮನೆಯ ಟಿವಿ ಸ್ಟ್ಯಾಂಡ್ ಕೆಳಗೆ ಅಡಗಿದ್ದ ನಾಗರಹಾವು ಸಂರಕ್ಷಣೆ ಮಾಡಿರುವಂತಹ ಘಟನೆ ನಗರದ ಹೆಬ್ಬಾಳ ಮಂಗಲ್ ಅವರ ಮನೆಯಲ್ಲಿ ನಡೆದಿದೆ. ಹಾವನ್ನು ಉರುಗ ಸಂರಕ್ಷಕ ಸೂರ್ಯಕೀರ್ತಿ ರಕ್ಷಣೆ ಮಾಡಿದರು. ಮಂಗಲ್ ಅವರ ಮಗ ಜೀತು ಮಲಗಿದ್ದಾಗ ಆತನ ಮೇಲೆ ನಾಗರಹಾವು ಹರಿದು ಬಂದಿದೆ. ತಕ್ಷಣ ಹಾವನ್ನು ದೂರ ಎಸೆದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಂರಕ್ಷಿಸಿದ ನಾಗರ ಹಾವನ್ನು ಸೂರ್ಯಕೀರ್ತಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.