ಪಕ್ಷದ ಬ್ಯಾನರ್ ನಂತಿದೆ ಎಂದು ಸರ್ಕಾರ ಕೊಟ್ಟ ಸೀರೆಯನ್ನ ಸಾರಾಸಗಟಾಗಿ ತಿರಸ್ಕರಿಸಿದ ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರಕ್ಕೆ ನಷ್ಟ ಎಷ್ಟು ಗೊತ್ತಾ!?
ಈ ಅಭಿಯಾನದ ಭಾಗವಾಗಿ, 62,580 ಕೇಂದ್ರಗಳು ಮತ್ತು 3,331 ಮಿನಿ ಅಂಗನವಾಡಿಗಳಲ್ಲಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅವರ ಸಹಾಯಕಿಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ತಲಾ ಎರಡು ಸೀರೆಗಳನ್ನು ವಿತರಿಸಲು ಸರ್ಕಾರ ಟೆಂಡರ್ ಸಹ ಆಹ್ವಾನಿಸಿದೆ. ಆದರೆ ಇದೀಗ ಈ ಸೀರೆಗಳನ್ನು ಪಡೆಯಲು ಕಾರ್ಯಕರ್ತೆಯರು ಹಿಂದೇಟು ಹಾಕುತ್ತಿದ್ದಾರೆ.
ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು(Anganwadi Workers) ರಾಜ್ಯ ಸರ್ಕಾರ ನೀಡುತ್ತಿರುವ ಸೀರೆಗಳನ್ನು ತಿರಸ್ಕರಿಸಿದ್ದಾರೆ. ಪ್ರಧಾನಮಂತ್ರಿಯವರ ಬಹುಮುಖ್ಯ ಕಾರ್ಯಕ್ರಮವಾದ ಪೋಷಣ್ ಅಭಿಯಾನದಡಿ (Poshan Campaign-National Nutrition Mission) ವಿತರಿಸಲು ಮುಂದಾಗಿರುವ ಸೀರೆಗಳನ್ನು ಅಂಗನವಾಡಿ ಕಾರ್ಯಕರ್ತೆಯರು ನಿರಾಕರಿಸಿದ್ದಾರೆ. ಈ ಸೀರೆಗಳು ಸರ್ಕಾರದ ಪ್ರಚಾರಕ್ಕೆ ಬಳಸುವ ಬ್ಯಾನರ್ನಂತಿವೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಹೀಗಾಗಿ ಸೀರೆ ಪಡೆಯಲು ಅಂಗನವಾಡಿ ಕಾರ್ಯಕರ್ತೆಯರು ಹಿಂದೇಟು ಹಾಕಿದ್ದಾರೆ.
ಸುಮಾರು 10 ಕೋಟಿ ಮೌಲ್ಯದ 2.5 ಲಕ್ಷಕ್ಕೂ ಹೆಚ್ಚು ಸೀರೆಗಳನ್ನು ರಾಜ್ಯದ ಗೋದಾಮಿನಲ್ಲಿ ಇರಿಸಲಾಗಿದೆ. ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಲ್ಲಿ ಪೌಷ್ಠಿಕಾಂಶದ ಅಂಶಗಳನ್ನು ಸುಧಾರಿಸಲು ರೂಪಿಸಲಾದ ‘ಪೋಷಣ್ ಅಭಿಯಾನ’ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿರುವ ಒಂದು ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಈ ಸೀರೆಗಳನ್ನು ಸಮವಸ್ತ್ರವಾಗಿ ವಿತರಿಸಬೇಕಿತ್ತು. ಈ ಅಭಿಯಾನದ ಭಾಗವಾಗಿ, 62,580 ಕೇಂದ್ರಗಳು ಮತ್ತು 3,331 ಮಿನಿ ಅಂಗನವಾಡಿಗಳಲ್ಲಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅವರ ಸಹಾಯಕಿಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ತಲಾ ಎರಡು ಸೀರೆಗಳನ್ನು ವಿತರಿಸಲು ಸರ್ಕಾರ ಟೆಂಡರ್ ಸಹ ಆಹ್ವಾನಿಸಿದೆ. ಆದರೆ ಇದೀಗ ಈ ಸೀರೆಗಳನ್ನು ಪಡೆಯಲು ಕಾರ್ಯಕರ್ತೆಯರು ಹಿಂದೇಟು ಹಾಕುತ್ತಿದ್ದಾರೆ.
ಏಳು ತಿಂಗಳ ಹಿಂದೆಯೇ ಸೀರೆಯ ಬಣ್ಣ, ಗುಣಮಟ್ಟ, ವಿನ್ಯಾಸ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಒಂದು ಸೀರೆಗೆ 385.75 ರೂ. ನಿಗಧಿ ಮಾಡಿ ಇಲಾಖೆಗೆ ಸೀರೆಗಳನ್ನು ಪೂರೈಕೆ ಸಹ ಮಾಡಲಾಗಿದೆ. ಸರ್ಕಾರ 9.9 ಕೋಟಿಗೆ 2.5 ಲಕ್ಷಕ್ಕೂ ಹೆಚ್ಚು ಸೀರೆಗಳನ್ನು ಖರೀದಿಸಿದೆ. ಆದ್ರೆ ಪೋಷಣ್ ಅಭಿಯಾನದಡಿ ಬಂದಿರುವ ಸೀರೆಗಳನ್ನು ಪಡೆಯಲು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬಂದಿಲ್ಲ. ರಾಜ್ಯದ ಎಲ್ಲ ಕಡೆಯೂ ಇದೇ ರೀತಿಯ ಅಭಿಪ್ರಾಯ ವ್ಯಕ್ತವಾಗಿವೆ. ಹಾಗಾಗಿ ಪೋಷಣ್ ಅಭಿಯಾನದಡಿ ಬಂದಿರುವ ಸೀರೆಗಳು ಸಿಡಿಪಿ ಕಚೇರಿಯಲ್ಲಿ ಉಳಿದಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯ್ತ ಸಿಇಒ ಡಾ.ಕುಮಾರ್ ತಿಳಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರು ಸೀರೆಗಳನ್ನು ನಿರಾಕರಿಸಲು ಕಾರಣವೇನು? ಸರ್ಕಾರ ಯೂನಿಫಾರಂನಂತೆ ನೀಡಲು ಮುಂದಾಗಿರುವ ಸೀರೆಗಳ ಬಾರ್ಡರ್ನಲ್ಲಿ ಪೋಷಣ್ ಅಭಿಯಾನ ಎಂದು ಕನ್ನಡದಲ್ಲಿ ದೊಡ್ಡದಾಗಿ ಬರೆಯಲಾಗಿದೆ. ಅಲ್ಲದೆ ಸೀರೆಯಲ್ಲಿ ಬಣ್ಣ ಬಣ್ಣದ ಬಳ್ಳಿಯ ರೂಪದ ಡಿಸೈನ್ ಇದೆ. ಹಾಗಾಗಿ ಸೀರೆಗಳು ನೋಡಲು ಸರ್ಕಾರದ ಪ್ರಚಾರದ ಬ್ಯಾನರ್ ಗಳ ರೀತಿಯಲ್ಲಿ ಕಾಣಿಸುತ್ತಿವೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಮಹಿಳೆಯರು ಸೌಂದರ್ಯ, ತಮ್ಮ ಅಂದ ಚಂದದ ಬಗ್ಗೆ ಹೆಚ್ಚಿನ ಗಮನಕೊಡ್ತಾರೆ ಹೀಗಾಗಿ ಸೌಂದರ್ಯಕ್ಕೆ ಪೂರಕವಾದ ಸೀರೆಗಳನ್ನು ನೀಡಿದ್ರೆ ಮಾತ್ರ ಧರಿಸುತ್ತೇವೆ ಎಂದು ಅಂಗನವಾಡಿ ನೌಕರರ ಒಕ್ಕೂಟ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ ಸರ್ಕಾರ ಮಾತ್ರ ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ ಕೋಟ್ಯಂತರ ಮೌಲ್ಯದ ಸೀರೆಗಳು ಗೋದಾಮಿನಲ್ಲಿಯೇ ಉಳಿದಿವೆ.
ಪಾವತಿಯಾಗದ ಬಿಲ್ ಎಷ್ಟು? 9.91 ಕೋಟಿ ರೂ. ವೆಚ್ಚದಲ್ಲಿ 2,56,982 ಸೀರೆ ಸರಬರಾಜು ಮಾಡಲಾಗಿದೆ. ರಾಜ್ಯದ 204 ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗಳಿಗೆ ಏಳು ತಿಂಗಳ ಹಿಂದೆಯೇ ಸೀರೆಗಳು ತಲುಪಿವೆ. ಆದ್ರೆ ಬಹುತೇಕ ಕಡೆ ಸೀರೆಗಳನ್ನು ಸ್ವೀಕರಿಸದ ಹಿನ್ನೆಲೆ ಬಿಲ್ ಸಹ ಪಾವತಿ ಆಗಿಲ್ಲ.
ರಾಜ್ಯದ ಇತರೆ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:26 pm, Mon, 9 May 22