ಇಂದಿರಾ ಕ್ಯಾಂಟೀನ್​ಗಳಲ್ಲಿ ಮುದ್ದೆ ಊಟಕ್ಕೆ ಕಾದಿದ್ದವರಿಗೆ ನಿರಾಸೆ: ಇನ್ನೂ ಸಿಕ್ಕಿಲ್ಲ ಸರ್ಕಾರದ ಗ್ರೀನ್ ಸಿಗ್ನಲ್

| Updated By: Ganapathi Sharma

Updated on: Nov 23, 2024 | 7:37 AM

ಕಡಿಮೆ ಹಣದಲ್ಲಿ ಊಟ ಕೊಡುವ ಇಂದಿರಾ ಕ್ಯಾಂಟೀನ್​ಗಳಲ್ಲಿ ಮುದ್ದೆ ಸವಿಯುವ ಕನಸು ಕಂಡಿದ್ದ ಜನರು ಇನ್ನೂ ಕೆಲಕಾಲ ಕಾಯಬೇಕಾಗಿದೆ. ಸದ್ಯ ಬೆಂಗಳೂರಿನ ಕೆಲವೇ ಕೆಲವು ಇಂದಿರಾ ಕ್ಯಾಂಟೀನ್​ಗಳಲ್ಲಿ ಹೊಸ ಮೆನು ಜಾರಿಯಾಗಿದ್ದು, ಇತ್ತ ಸರ್ಕಾರದ ಮುಂದಿರುವ ಪ್ರಸ್ತಾವನೆಗೆ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಇತ್ತ ಪಾಲಿಕೆಯ ಒಂದಷ್ಟು ವಾರ್ಡ್​ಗಳಲ್ಲಿ ಮಾತ್ರ ಮುದ್ದೆ, ಬನ್ಸ್ ಸೇರಿ ಹೊಸ ಮೆನು ಊಟ ಸಿಗುತ್ತಿದೆ.

ಇಂದಿರಾ ಕ್ಯಾಂಟೀನ್​ಗಳಲ್ಲಿ ಮುದ್ದೆ ಊಟಕ್ಕೆ ಕಾದಿದ್ದವರಿಗೆ ನಿರಾಸೆ: ಇನ್ನೂ ಸಿಕ್ಕಿಲ್ಲ ಸರ್ಕಾರದ ಗ್ರೀನ್ ಸಿಗ್ನಲ್
ಇಂದಿರಾ ಕ್ಯಾಂಟೀನ್​ಗಳಲ್ಲಿ ಮುದ್ದೆ ಊಟಕ್ಕೆ ಕಾದಿದ್ದವರಿಗೆ ನಿರಾಸೆ
Follow us on

ಬೆಂಗಳೂರು, ನವೆಂಬರ್ 23: ರಾಜಧಾನಿ ಬೆಂಗಳೂರಿನ ಇಂದಿರಾ ಕ್ಯಾಂಟೀನ್​ಗಳಲ್ಲಿ ಹೊಸ ಮೆನು ಊಟ ಸವಿಯಲು ಕಾದವರಿಗೆ ನಿರಾಸೆ ಎದುರಾಗಿದೆ. ಇನ್ನಷ್ಟು ದಿನ ಕಾಯಬೇಕಾದ ಸ್ಥಿತಿ ಎದುರಾಗಿದೆ. ಇಂದಿರಾ ಕ್ಯಾಂಟೀನ್​​ಗಳಲ್ಲಿ ಮುದ್ದೆ, ಚಪಾತಿ ಹಾಗೂ ಮಂಗಳೂರು ಬನ್ಸ್ ನೀಡಲು ನಿರ್ಧರಿಸಿದ್ದ ಸರ್ಕಾರ, ಇದೀಗ ಕೆಲವೇ ಕೆಲವು ಇಂದಿರಾ ಕ್ಯಾಂಟೀನ್​ಗಳಲ್ಲಿ ಮಾತ್ರ ಹೊಸ ಮೆನು ಅಳವಡಿಕೆಗೆ ಗ್ರೀನ್ ಸಿಗ್ನಲ್ ನೀಡಿದೆ. ಸದ್ಯ ಮೂರು ಹಂತದ ಪ್ಯಾಕೇಜ್​ಗಳಲ್ಲಿ ಇದೀಗ ಎರಡು ಪ್ಯಾಕೇಜ್​ಗೆ ಮಾತ್ರ ಒಪ್ಪಿಗೆ ಸಿಕ್ಕಿದೆ. ಇನ್ನೊಂದು ಪ್ಯಾಕೇಜ್​ಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಡಬೇಕಿದೆ. ಸದ್ಯ ಬಿಬಿಎಂಪಿಯ ದಕ್ಷಿಣ ವಲಯ ಸೇರಿ ಒಂದಷ್ಟು ಕಡೆಗಳಲ್ಲಿ ಮಾತ್ರ ಹೊಸ ಮೆನು ಪ್ರಕಾರ ಊಟ ಪೂರೈಕೆ ಆಗುತ್ತಿದ್ದು, ಇನ್ನೂ ಹಲವೆಡೆ ಮೆನುಗಾಗಿ ಕಾಯಬೇಕಿದೆ.

ವಾರದ ಏಳು ದಿನಗಳೂ ಬೆಳಗ್ಗೆ ಸಿಗಲಿದೆ ಇಡ್ಲಿ

ಹೊಸ ಮೆನುವಿನ ಪ್ರಕಾರ, ವಾರದ ಏಳು ದಿನಗಳಲ್ಲಿಯೂ ಬೆಳಗ್ಗೆ ಇಡ್ಲಿ ದೊರೆಯಲಿದೆ. ಮೂರು ಇಡ್ಲಿ ಮತ್ತು ಸಾಂಬಾರ್ ಸಿಗಲಿದೆ. ಪ್ರತಿ ದಿನವೂ ಒಂದೊಂದು ಮಾದರಿಯ ರೈಸ್ ಬಾತ್ ಸಿಗಲಿದೆ. ಈ ಐಟಂಗಳೊದಿಗೆ ಚಟ್ನಿ, ಸಾಂಬರ್, ಮೊಸರು ಬಜ್ಜಿ ಹಾಗೂ ಖಾರಾ ಬೂಂದಿ ನೀಡಲಾಗುತ್ತದೆ. ವಾರದ ಇತರ ದಿನಗಳಲ್ಲಿ ಬೆಳಗಿನ ಉಪಾಹಾರಕ್ಕೆ ಇಡ್ಲಿ ಜೊತೆಗೆ ಕ್ರಮವಾಗಿ ಪಲಾವ್, ಬಿಸಿಬೇಳೆ ಬಾತ್, ಖಾರಾಬಾತ್, ಪೊಂಗಲ್ ಇರಲಿದೆ.

ಕೆಲವೇ ಕ್ಯಾಂಟೀನ್​​ಗಳಲ್ಲಿ ಹೊಸ ಮೆನುವಿನಂತೆ ಆಹಾರ

ಸದ್ಯ ಬಿಬಿಎಂಪಿ ವ್ಯಾಪ್ತಿಯ 192 ಇಂದಿರಾ ಕ್ಯಾಂಟೀನ್​ಗಳ ಪೈಕಿ ಕೆಲವೇ ಕೆಲವು ಇಂದಿರಾ ಕ್ಯಾಂಟೀನ್​ಗಳಲ್ಲಿ ಹೊಸ ಮೆನು ಊಟ ಲಭ್ಯವಾಗುತ್ತಿದೆ. ಇತ್ತ ಬಹುತೇಕ ಇಂದಿರಾ ಕ್ಯಾಂಟೀನ್​ಳಲ್ಲಿ ಹಳೇ ಮೆನು ಪ್ರಕಾರವೇ ಊಟ-ತಿಂಡಿ ಕೊಡಲಾಗುತ್ತಿದ್ದು, ಸದ್ಯ ಸರ್ಕಾರದ ಅಂಗಳದಲ್ಲಿರುವ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕವಷ್ಟೇ ಜನರಿಗೆ ಮುದ್ದೆ ಭಾಗ್ಯ ಸಿಗಲಿದೆ. ಇತ್ತ ಈಗಾಗಲೇ ಅನ್ನ-ಸಾಂಬಾರ್ ಸವಿಯುತ್ತಿರುವ ಜನರು, ಆದಷ್ಟು ಬೇಗ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಲ್ಲೂ ಮುದ್ದೆ, ಚಪಾತಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕೆಎಸ್​ಆರ್​ಟಿಸಿ, ಬಿಎಂಟಿಸಿ ಮುಷ್ಕರಕ್ಕೆ ಸಿದ್ಧತೆ: ಬೇಡಿಕೆ ಈಡೇರಿಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ನೌಕರರು

ಒಟ್ಟಿನಲ್ಲಿ ಕಡಿಮೆ ಬೆಲೆಗೆ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್​ಗಳಲ್ಲಿ ಪೌಷ್ಟಿಕ ಆಹಾರವಾದ ಮುದ್ದೆ, ಚಪಾತಿ ಕೊಡ್ತಿರೋದು ಗ್ರಾಹಕರಿಗೆ ಖುಷಿ ತಂದಿದೆ. ಆದರೆ, ಒಂದಷ್ಟು ಕಡೆ ಇನ್ನೂ ಹೊಸ ಮೆನು ಪಾಲನೆಯಾಗದಿದ್ದಕ್ಕೆ ಗ್ರಾಹಕರ ಬೇಸರ ವ್ಯಕ್ತವಾಗ್ತಿದ್ದು, ಹೊಸವರ್ಷದ ಒಳಗಾದ್ರೂ ರಾಜಧಾನಿಯ ಎಲ್ಲಾ ಇಂದಿರಾ ಕ್ಯಾಂಟೀನ್​ಗಳಲ್ಲಿ ಹೊಸ ಮೆನು ಜಾರಿಯಾಗುತ್ತದೆಯಾ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ