ಕೆಂಪೇಗೌಡ, ವಾಜಪೇಯಿ ಹೆಸರಿನಲ್ಲಿ ತಲಾ ಒಂದೊಂದು ಪಾರ್ಕ್ ನಿರ್ಮಾಣ: ಆರ್ ಅಶೋಕ್
ಬೆಂಗಳೂರು ಇತಿಹಾಸದಲ್ಲಿ ದಾಖಲಾಗುವ ಯೋಜನೆಯನ್ನು ಜಾರಿ ಮಾಡುತ್ತಿದ್ದೇವೆ. ಕೆಂಪೇಗೌಡರ ಹುಟ್ಟೂರು ಬಳಿಯ ಆವತಿ ಸಮೀಪದ ಬೆಟ್ಟ ಹಲಸೂರಿನಲ್ಲಿ ಪಾರ್ಕ್ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಆರ್.ಅಶೋಕ್ ಹೇಳಿದರು.
ಬೆಂಗಳೂರು: ಕಬ್ಬನ್ ಪಾರ್ಕ್, ಲಾಲ್ಬಾಗ್ ರೀತಿ ಮತ್ತೊಂದು ಪಾರ್ಕ್ (park) ನಿರ್ಮಾಣ ಮಾಡಲಾಗುವುದು ಎಂದು ಕಂದಾಯ ಇಲಾಖೆ ಸಚಿವ ಆರ್.ಅಶೋಕ್ (R Ashoka) ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಇತಿಹಾಸದಲ್ಲಿ ದಾಖಲಾಗುವ ಯೋಜನೆಯನ್ನು ಜಾರಿ ಮಾಡುತ್ತಿದ್ದೇವೆ. ಕೆಂಪೇಗೌಡರ ಹುಟ್ಟೂರು ಬಳಿಯ ಆವತಿ ಸಮೀಪದ ಬೆಟ್ಟ ಹಲಸೂರಿನಲ್ಲಿ ಪಾರ್ಕ್ ನಿರ್ಮಿಸಲು ನಿರ್ಧರಿಸಲಾಗಿದೆ. ಕಂದಾಯ ಇಲಾಖೆಯ 184 ಎಕರೆ ಜಮೀನಿನಲ್ಲಿ ಕಬ್ಬನ್ ಪಾರ್ಕ್ಗಿಂತಲೂ ದೊಡ್ಡ ಪಾರ್ಕ್ ನಿರ್ಮಿಸಲಾಗುತ್ತೆ. ಆ ಹೊಸ ಪಾರ್ಕ್ಗೆ ಕೆಂಪೇಗೌಡ ಎಂದು ಹೆಸರಿಡಲು ನಿರ್ಧರಿಸಲಾಗಿದೆ. ಜೊತೆಗೆ ಜಾರಕ ಬಂಡೆ ಬಳಿ ವಾಜಪೇಯಿ ಹೆಸರಿನಲ್ಲಿ ಮತ್ತೊಂದು ಪಾರ್ಕ್ ನಿರ್ಮಾಣ ಆಗಲಿದೆ. ಈ ಜಾಗ ಉಳಿಯಬೇಕು ಅಂತಾ ಪಾರ್ಕ್ ಮಾಡುತ್ತಿದ್ದೇವೆ. 184 ಎಕರೆಯಲ್ಲಿ ಯಾವುದೇ ರೈತರ ಜಮೀನು ಇಲ್ಲ. ಪೂರ್ತಿ ಸರ್ಕಾರಿ ಜಮೀನು ಇದೆ. ನಾನು ಮತ್ತು ಮುನಿರತ್ನ ಬೆಂಗಳೂರಿನವರಾಗಿದ್ದು, ಬೆಂಗಳೂರಿನ ಜನರ ಋಣ ತೀರಿಸಲು ಈ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ನನ್ನ ಹೆಜ್ಜೆ ಗುರುತು ಬಿಟ್ಟು ಹೋಗಬೇಕು ಅನ್ನೊದು ನನ್ನ ಆಸೆ: ಮುನಿರತ್ನ
ಅಶೋಕ್ ಮಾತನಾಡಿದ ಬಳಿಕ ಮಾತು ಆರಂಭಿಸಿದ ಮುನಿರತ್ನ, ತೋಟಗಾರಿಕೆ ಇಲಾಖೆಯಲ್ಲಿ ನನ್ನ ಹೆಜ್ಜೆ ಗುರುತು ಬಿಟ್ಟು ಹೋಗಬೇಕು ಅನ್ನೊದು ನನ್ನ ಆಸೆ. ಅಷ್ಟರಲ್ಲಿ ಮತ್ತೆ ನಾವೇ ಬರುತ್ತೇವೆ ಅಂತ ಹೇಳಪ್ಪ ಎಂದು ಅಶೋಕ್ ಹೇಳಿದರು. ಇಲ್ಲ, ಈ ಇಲಾಖೆಯಲ್ಲಿ ಮಾತ್ರ ನನ್ನ ಹೆಜ್ಜೆ ಗುರುತು ಬಿಟ್ಟು ಹೋಗುತ್ತೇನೆ ಅಂದೆ ಅಷ್ಟೇ. ಬೆಟ್ಟ ಹಲಸೂರು ಪಾರ್ಕ್ನಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ನಮ್ಮ ಯೋಚನೆ. ಏಕಶಿಲೆಯಲ್ಲಿ ಪ್ರತಿಮೆ ನಿರ್ಮಾಣಕ್ಕೆ ತಿರ್ಮಾನ ಮಾಡಿದ್ದೇವೆ. ಖರ್ಚು ವೆಚ್ಚ ಎಷ್ಟಾದರೂ ಅಡ್ಡಿಯಿಲ್ಲ. ಬೆಂಗಳೂರು ನಿರ್ಮಾತೃ ಪ್ರತಿಮೆಗೆ ಖರ್ಚು ಅನ್ ಲಿಮಿಟೆಡ್ ಎಂದು ಹೇಳಿದರು.
ಇದನ್ನೂ ಓದಿ: KSRTC Employees Strike: ಸರ್ಕಾರಿ ನೌಕರರ ಸರಿಸಮಾನ ವೇತನಕ್ಕೆ ಆಗ್ರಹಿಸಿ ಮುಷ್ಕರಕ್ಕೆ ಕರೆ, ನಾಳೆಯಿಂದ ಸಾರಿಗೆ ಸೇವೆ ಬಂದ್
ಅತೀ ದೊಡ್ಡ ಕೆಂಪೇಗೌಡರ ಪ್ರತಿಮೆ ನಿರ್ಮಾಣ
ಕಂದಾಯ ಇಲಾಖೆಯಿಂದ ಜಮೀನು ಹಸ್ತಾಂತರ ಆಗಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ವಿಧಾನಸೌಧಕ್ಕೆ ಇದು ತಕ್ಕಡಿ ಹಿಡಿದಂತೆ ಪಾರ್ಕ್ ಇರುತ್ತದೆ. ಯಲಹಂಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದು ನಿರ್ಮಾಣ ಆಗುತ್ತದೆ. ಮಲೇಷಿಯಾ, ಸಿಂಗಾಪುರದ ಕಂಪನಿಗಳು ಇದನ್ನು ಅಭಿವೃದ್ಧಿ ಮಾಡಲು ಮುಂದೆ ಬಂದಿದ್ದಾರೆ. ಸಂಪೂರ್ಣವಾಗಿ ತೋಟಗಾರಿಕೆ ಇಲಾಖೆಗೆ ಇದರ ಜವಾಬ್ದಾರಿ ತೆಗೆದುಕೊಂಡಿದ್ದೇವೆ. 100 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗಿದೆ. ಬಾಹುಬಲಿ ಪ್ರತಿಮೆ ಮೀರಿಸುವ ಅತೀ ದೊಡ್ಡ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಪತ್ರದ ಮೂಲಕ ಭಾವನಾತ್ಮಕವಾಗಿ ರೈತರಿಗೆ ಹತ್ತಿರವಾಗಲು ಮುಂದಾದ ಹೆಚ್ ಡಿ ಕುಮಾರಸ್ವಾಮಿ
ಹಕ್ಕು ಪತ್ರ ವಿಚಾರವಾಗಿ ಮಾತನಾಡಿದ ಅವರು, ಲಂಬಾಣಿ ತಾಂಡದವರಿಗೆ ಹಕ್ಕು ಪತ್ರ ನೀಡಿದ ರೀತಿಯಲ್ಲಿ ಕುರುಬರ ಹಟ್ಟಿ ಮತ್ತು ಗೊಲ್ಲರ ಹಟ್ಟಿಯವರಿಗೆ ಹಕ್ಕು ಪತ್ರ ನೀಡುತ್ತೇವೆ. ಒಂದು ಲಕ್ಷ ಕುಟುಂಬಕ್ಕೆ 27 ರಂದು ಆಯಾ ಜಿಲ್ಲೆಗಳಲ್ಲಿ ಸಮಾರಂಭ ಮಾಡಿ ಹಕ್ಕು ಪತ್ರ ವಿತರಣೆ ಮಾಡಲಾಗುವುದು. ಜಿಲ್ಲಾಧಿಕಾರಿಗಳು, ಜಿಲ್ಲಾ ಸಚಿವರು ಸಮಾರಂಭದಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:44 pm, Thu, 23 March 23