ನಾಳಿನ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್: 3 ವಾರಗಳ ಕಾಲ ಯಾವುದೇ ಮುಷ್ಕರ ನಡೆಸದಂತೆ ಆದೇಶ
ನಾಳಿನ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದ್ದು, 3 ವಾರಗಳ ಕಾಲ ಯಾವುದೇ ಮುಷ್ಕರ ನಡೆಸದಂತೆ ಆದೇಶ ಹೊರಡಿಸಿದೆ.
ಬೆಂಗಳೂರು: ನಾಳಿನ ಸಾರಿಗೆ ನೌಕರರ ಮುಷ್ಕರಕ್ಕೆ (transport employees) ಹೈಕೋರ್ಟ್ ಬ್ರೇಕ್ ಹಾಕಿದ್ದು, 3 ವಾರಗಳ ಕಾಲ ಯಾವುದೇ ಮುಷ್ಕರ ನಡೆಸದಂತೆ ಆದೇಶ ಹೊರಡಿಸಿದೆ. ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ಗೆ ಹೆಚ್.ಎಂ.ವೆಂಕಟೇಶ್ ಎಂಬುವರು ಪಿಐಎಲ್ ಸಲ್ಲಿಸಿದ್ದರು. ಮಾ.20ರಂದು ಕಾರ್ಮಿಕ ಇಲಾಖೆ ಆಯುಕ್ತರು ಸಭೆ ಕರೆದಿದ್ದರು. ಆದರೆ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ. ಏಪ್ರಿಲ್ 6ರಂದು ಮುಂದಿನ ಸಭೆಯನ್ನು ನಿಗದಿಪಡಿಸಲಾಗಿದೆ ಎಂದು ಹೈಕೋರ್ಟ್ಗೆ ಸರ್ಕಾರಿ ವಕೀಲೆ ಪ್ರತಿಮಾ ಹೊನ್ನಾಪುರ ಮಾಹಿತಿ ನೀಡಿದ್ದಾರೆ. ನಾಳಿನ ಮುಷ್ಕರದಿಂದ ಸಾರ್ವಜನಿಕ ಸಾರಿಗೆ ಸ್ಥಗಿತವಾಗಲಿದೆ. ಇದರಿಂದ ವಿದ್ಯಾರ್ಥಿಗಳು, ನೌಕರರು, ಪ್ರಯಾಣಿಕರಿಗೆ ತೊಂದರೆ ಉಂಟಾಗಲಿದೆ. ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗಲಿದೆ. ಏಪ್ರಿಲ್ 6ರಂದು ಮುಂದಿನ ಸಭೆಯಿರುವ ಹಿನ್ನೆಲೆ 3 ವಾರಗಳ ಕಾಲ ಮುಷ್ಕರಕ್ಕೆ ಮುಂದಾಗದಂತೆ ಸಿಜೆ ಪ್ರಸನ್ನ ಬಿ.ವರಾಳೆ, ಅಶೋಕ್ ಎಸ್.ಕಿಣಗಿ ಅವರಿದ್ದ ಪೀಠ ಸಂಘಟನೆಗಳಿಗೆ ಸೂಚನೆ ನೀಡಿದೆ.
ಸರ್ಕಾರಿ ನೌಕರರ ಸರಿಸಮಾನ ವೇತನಕ್ಕೆ ಆಗ್ರಹಿಸಿ ನಾಳೆಯಿಂದ (ಮಾರ್ಚ್ 24) ರಾಜ್ಯಾದ್ಯಂತ ಸಾರಿಗೆ ಸೇವೆ ಬಂದ್ ಆಗಲಿದೆ. ನಾಳೆಯಿಂದ ಸಾರಿಗೆ ನೌಕರರಿಂದ ಅನಿರ್ದಿಷ್ಟವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಹಿಂದೆ ಮಾರ್ಚ್ 21ರಂದು ಪ್ರತಿಭಟನೆ ನಡೆಸಲು ಸಾರಿಗೆ ನೌಕರರು ಮುಂದಾಗಿದ್ದರು. ಈ ವೇಳೆ 15% ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಹೀಗಾಗಿ ಮುಷ್ಕರ ಹಿಂಪಡೆಯಲಾಗಿತ್ತು. ಆದರೆ ಈಗ ಮತ್ತೆ ಸಮಾನ ಮನಸ್ಕರ ವೇದಿಕೆ ಸಾರಿಗೆ ಮುಷ್ಕರಕ್ಕೆ ಕರೆ ನೀಡಿದೆ. ಸಾರಿಗೆ ನೌಕರರ ಮುಖಂಡ ಚಂದ್ರು ನಾಲ್ಕು ನಿಗಮದ ಬಸ್ಗಳನ್ನ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ಕರೆ ನೀಡಿದ್ದಾರೆ.
ಇದನ್ನೂ ಓದಿ: KSRTC Employees Strike: ಸರ್ಕಾರಿ ನೌಕರರ ಸರಿಸಮಾನ ವೇತನಕ್ಕೆ ಆಗ್ರಹಿಸಿ ಮುಷ್ಕರಕ್ಕೆ ಕರೆ, ನಾಳೆಯಿಂದ ಸಾರಿಗೆ ಸೇವೆ ಬಂದ್
ಸಮಾನ ಮನಸ್ಕರ ವೇದಿಕೆಯ ಬೇಡಿಕೆಗಳೇನು?
- ಸರ್ಕಾರಿ ನೌಕರರ ಸರಿಸಮಾನಾದ ವೇತನ ನೀಡಬೇಕು
- ನಾಲ್ಕು ನಿಗಮಗಳ ನೌಕರರ ಸಂಘಕ್ಕೆ ಎಲೆಕ್ಷನ್ ಮಾಡಬೇಕು
- ಮುಷ್ಕರದ ಸಮಯದಲ್ಲಿ ವಜಾಗೊಂಡಿರುವ ನಾಲ್ಕು ನಿಗಮಗಳ ನೌಕರರನ್ನು ಯಾವುದೇ ಷರತ್ತುಗಳಿಲ್ಲದೆ ಮರುನೇಮಕಾತಿ ಮಾಡಿಕೊಳ್ಳುವುದು
- ಮುಷ್ಕರದ ಸಮಯದಲ್ಲಿ ಸಾರಿಗೆ ನೌಕರರು ಮತ್ತು ಅವರ ಕುಟುಂಬಸ್ಥರ ಮೇಲೆ ದಾಖಲಾಗಿರುವ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು
- ಸಾರಿಗೆ ಸಂಸ್ಥೆಯಲ್ಲಿ ನಿವೃತ್ತಿಗೊಂಡಿರುವ ನೌಕರರಿಗೆ ನೀಡಬೇಕಾಗಿರುವ ಬಾಕಿ ಹಣವನ್ನು ಕೂಡಲೇ ನೀಡುವುದು
- ಅವರಿಗೆ ಸರಿಯಾದ ರೀತಿ ಪಿಂಚಣೆ ಸೌಲಭ್ಯವನ್ನು ಒದಗಿಸುವುದು
ಇದನ್ನೂ ಓದಿ: ಚಿಕ್ಕಬಳ್ಳಾಪುರ ಜನತೆಗೆ ಯುಗಾದಿ ಕೊಡುಗೆ: ಬಿಎಂಟಿಸಿ ಬಸ್ ಸಂಚಾರಕ್ಕೆ ಅಸ್ತು ಎಂದ ಕೆಎಸ್ಆರ್ಟಿಸಿ
ಸಾರಿಗೆ ನೌಕರರ ಒಕ್ಕೂಟದಲ್ಲೇ ಭಿನ್ನಮತ
ಸಾರಿಗೆ ನೌಕರರು ವೇತನವನ್ನು ಶೇ 25ರಷ್ಟು ಹೆಚ್ಚಳ ಮಾಡಬೇಕೆಂದು ಪಟ್ಟು ಹಿಡಿದಿದ್ದು, ಸರ್ಕಾರ ಶೇ. 15ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಸರ್ಕಾರದ ಈ ನಿರ್ಧಾರವನ್ನು ಸಾರಿಗೆ ನೌಕರರು ಒಪ್ಪುತ್ತಿಲ್ಲ. ಇದು ನೌಕರರನ್ನು ಆರ್ಥಿಕವಾಗಿ ಮತ್ತಷ್ಟು ತುಳಿಯುವ ಕೆಲಸವಾಗಿದೆ. ಮಾರ್ಚ್ 24ರಂದು ರಾಜ್ಯದಲ್ಲಿ ಸಾರಿಗೆ ಸೇವೆ ಬಂದ್ ಆಗಲಿದೆ. ಬೆಲೆ ಏರಿಕೆಯಂತಹ ಸಂದರ್ಭದಲ್ಲಿ ನಮಗೆ ಸಿಗುವ ವೇತನದಲ್ಲಿ ಬದುಕಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಮ್ಮ ಬೇಡಿಕೆ ಈಡೇರದ ಹೊರತು ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಹೇಳಿದ್ದರು. ಈ ಮೂಲಕ ಸಾರಿಗೆ ನೌಕರರ ಒಕ್ಕೂಟದ ನಡುವೆ ಭಿನ್ನಮತ ಸ್ಫೋಟವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:34 pm, Thu, 23 March 23