ಡ್ರಗ್​​ ಸೇವನೆ ತಪಾಸಣೆ: ವಿವಿಧ ಶಿಕ್ಷಣ ಸಂಸ್ಥೆಗಳ 31 ವಿದ್ಯಾರ್ಥಿಗಳ ರಿಪೋರ್ಟ್​​ ಪಾಸಿಟಿವ್​

ಬೆಂಗಳೂರಿನ ಶಿಕ್ಷಣ ಸಂಸ್ಥೆಗಳಲ್ಲಿ ಕರ್ನಾಟಕ ಪೊಲೀಸ್‌ 'ಸನ್ಮಿತ್ರ' ಅಭಿಯಾನದಡಿ ನಡೆದ ಡ್ರಗ್ ತಪಾಸಣೆಯಲ್ಲಿ 31 ವಿದ್ಯಾರ್ಥಿಗಳು ಮಾದಕವಸ್ತು ಸೇವಿಸಿರುವುದು ದೃಢಪಟ್ಟಿದೆ. 1,200ಕ್ಕೂ ಹೆಚ್ಚು ಸ್ಯಾಂಪಲ್‌ಗಳನ್ನು ಸಂಗ್ರಹಿಸಿ, 585 ಮಾದರಿಯ ರ‍್ಯಾಂಡಮ್ ಪರೀಕ್ಷೆ ನಡೆಸಿದಾಗ ಈ ಮಾಹಿತಿ ಹೊರಬಿದ್ದಿದೆ. ಪಾಸಿಟಿವ್ ಬಂದ ವಿದ್ಯಾರ್ಥಿಗಳ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು. ಕೌನ್ಸೆಲಿಂಗ್ ಮತ್ತು ವೈದ್ಯಕೀಯ ನೆರವು ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಡ್ರಗ್​​ ಸೇವನೆ ತಪಾಸಣೆ: ವಿವಿಧ ಶಿಕ್ಷಣ ಸಂಸ್ಥೆಗಳ 31 ವಿದ್ಯಾರ್ಥಿಗಳ ರಿಪೋರ್ಟ್​​ ಪಾಸಿಟಿವ್​
ಆ್ಯಂಟಿ ಡ್ರಗ್​​ ಸ್ಕ್ರೀನಿಂಗ್​
Image Credit source: Google

Updated on: Mar 05, 2026 | 6:53 PM

ಬೆಂಗಳೂರು, ಮಾರ್ಚ್​ 05: ಡ್ರಗ್‌ ರಹಿತ ಸಮಾಜ ನಿರ್ಮಾಣಕ್ಕಾಗಿ ಕರ್ನಾಟಕ ಪೊಲೀಸ್ ಆರಂಭಿಸಿರುವ ‘ಸನ್ಮಿತ್ರ’ ಉಪಕ್ರಮದ ಭಾಗವಾಗಿ ಪಶ್ಚಿಮ ಬೆಂಗಳೂರು ವಿಭಾಗದ ಶಿಕ್ಷಣ ಸಂಸ್ಥೆಗಳಲ್ಲಿ ನಡೆಸಿದ ಡ್ರಗ್ ತಪಾಸಣೆಯಲ್ಲಿ 31 ವಿದ್ಯಾರ್ಥಿಗಳು ಡ್ರಗ್ ಸೇವನೆ ಮಾಡಿದಿರುವುದು ಪತ್ತೆಯಾಗಿದೆ. ಅಧಿಕಾರಿಗಳ ಪ್ರಕಾರ, 1,200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೂತ್ರದ ಸ್ಯಾಂಪಲ್​ ನೀಡಿದ್ದಾರೆ. ಅವುಗಳಲ್ಲಿ 585 ಸ್ಯಾಂಪಲ್​​ಗಳನ್ನು ರ‍್ಯಾಂಡಮ್ ಆಗಿ​ ಪರೀಕ್ಷಿಸಲಾಗಿದ್ದು, 31 ವಿದ್ಯಾರ್ಥಿಗಳ ವರದಿ ಪಾಸಿಟಿವ್ ಎಂದು ದೃಢಪಟ್ಟಿವೆ.

ಡ್ರಗ್ ಸೇವನೆ ಪತ್ತೆಯಾದ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ತಜ್ಞರಿಂದ ಕೌನ್ಸೆಲಿಂಗ್ ಹಾಗೂ ಅಗತ್ಯ ವೈದ್ಯಕೀಯ ನೆರವು ನೀಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಹೆಸರು ಮತ್ತು ಕುಟುಂಬದ ವಿವರಗಳನ್ನು ಸಂಪೂರ್ಣವಾಗಿ ಗೌಪ್ಯವಾಗಿರಿಸಲಾಗುತ್ತದೆ . ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳಿಂದ ಬಂದಿರುವ ವಿದ್ಯಾರ್ಥಿಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇತರ ಕಾಲೇಜುಗಳಲ್ಲೂ ಈ ಅಭಿಯಾನ ಮುಂದುವರಿಯಲಿದೆ. ಪೋಷಕರನ್ನೂ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಒಳಗೊಳ್ಳಿಸಲಾಗುತ್ತದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್. ತಿಳಿಸಿದ್ದಾರೆ.

ಇದನ್ನೂ ಓದಿ: ಅಪಾರ್ಟ್​ಮೆಂಟೇ ಡ್ರಗ್ಸ್ ಸ್ಟೋರ್, ದೇವರ ಫೋಟೊಗಳ ಫ್ರೇಮ್​ನಲ್ಲಿಟ್ಟು ಮಾರಾಟ 

ವಿದ್ಯಾರ್ಥಿಗಳು ಡ್ರಗ್ಸ್​​ ದಾಸರಾಗದಂತೆ ತಡೆಯುವುದು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಕಾರ್ಯಾಚರಣೆಗಾಗಿ ಶಿಕ್ಷಣ ಸಂಸ್ಥೆಗಳ ಮ್ಯಾನೇಜ್​​ಮೆಂಟ್​​ಗಳಿಂದ ಅನುಮತಿ ಮತ್ತು ‘ನೋ ಆಬ್ಜೆಕ್ಷನ್ ಸರ್ಟಿಫಿಕೇಟ್’ ಪಡೆದು ಆರು ಶಿಕ್ಷಣ ಸಂಸ್ಥೆಗಳು ಹಾಗೂ ಎರಡು ವಸತಿನಿಲಯಗಳಲ್ಲಿ N-MASS (Narcotics Monitoring, Assistance and Screening System) ತಪಾಸಣೆ ನಡೆಸಲಾಗಿದೆ. ಪರೀಕ್ಷಾ ಪ್ರಕ್ರಿಯೆಯನ್ನು ಪುಣ್ಯ ಆಸ್ಪತ್ರೆ, ಪದ್ಮದೇವಯ್ಯ ಆಸ್ಪತ್ರೆ, KADE ಆಸ್ಪತ್ರೆ, ಶರಾವತಿ ಆಸ್ಪತ್ರೆ, ಶ್ರೀ ಲಕ್ಷ್ಮೀ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಕಾಂಗರೂ ಕೇರ್ ಆಸ್ಪತ್ರೆಗಳ ವೈದ್ಯರು, ತಾಂತ್ರಿಕ ಸಿಬ್ಬಂದಿ ಹಾಗೂ ಇತರರ ಸಹಾಯದಿಂದ ನಡೆಸಿರುವ ಬಗ್ಗೆ ಅಧಿಕಾರಿಗಳು ತಿಳಿಸಿರೋದಾಗಿ ದಿ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:50 pm, Thu, 5 March 26

Follow Us