
ಬೆಂಗಳೂರು, ಸೆ.04: ಭಾನುವಾರ ಬೆಳಿಗ್ಗೆ 5,000 ಕ್ಕೂ ಹೆಚ್ಚು ಮಂದಿ ಒಟ್ಟಿಗೆ ಕೂತು ಚಿತ್ರಕಲೆ ಪ್ರದರ್ಶಿಸಿದ್ದಾರೆ. ತಮ್ಮ ನೆಚ್ಚಿನ ಚಿತ್ರ ಬಿಡಿಸಿ, ಬಣ್ಣ ತುಂಬಿ ಖುಷಿ ಪಟ್ಟಿದ್ದಾರೆ. ಕೋರಮಂಗಲದ ಸೇಂಟ್ ಜಾನ್ಸ್ ಆಡಿಟೋರಿಯಂನಲ್ಲಿ 15 ನೇ ಆವೃತ್ತಿಯ ಕಲರ್‌ಥಾನ್(Colorothon) ಆಯೋಜಿಸಲಾಗಿದ್ದು ಯಾವ ವಯಸ್ಸಿನ ಮಿತಿ ಇಲ್ಲದೆ ಹಿರಿಯರಿಂದ-ಕಿರಿಯರವರೆಗೂ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಡ್ರಾಯಿಂಗ್, ಕಲರಿಂಗ್, ಸ್ಕೆಚಿಂಗ್, ಪೈಟಿಂಗ್ ಮಾಡಿ ಸಂಭ್ರಮಿಸಿದ್ದಾರೆ. ಅದರಲ್ಲೂ ವಿಶೇಷವೆಂದರೆ ಈ ಬಾರಿಯ ಕಲರ್ಥಾನ್ನಲ್ಲಿ 93 ವರ್ಷದ ಹಿರಿಯರು ಕೂಡ ಭಾಗಿಯಾಗಿದ್ದರು.
ಅಮೀರ್ ಖಾನ್ ನಟಿಸಿರುವ ಬಾಲಿವುಡ್ನ ‘ತಾರೆ ಜಮೀನ್ ಪರ್’ ಚಿತ್ರದಿಂದ ಪ್ರೇರಿತರಾದ ಕಿಶೋರ್ ಜೋಸೆಫ್ ಅವರು ವಿವಿಧ ವಯೋಮಾನದವರನ್ನು ಒಂದೇ ಸೂರಿನಡಿ ತಂದು ಕಲೆಯ ಮೂಲಕ ಎಲ್ಲರಿಗೂ ಕೆಲ ಎಂಬ ಸಂದೇಶವನ್ನು ಸಾರಿದ್ದಾರೆ. ಕಲರ್‌ಥಾನ್ ಆರಂಭವಾಗಿದ್ದು 2014ರಲ್ಲಿ. ಭಾನುವಾರ ಆಯೋಜಿಸಲಾಗಿದ್ದ 15 ನೇ ಆವೃತ್ತಿಯ ಕಲರ್ಥಾನ್ನಲ್ಲಿ ಹಿರಿಯರಿಂದ-ಕಿರಿಯರವರೆಗೂ ಎಲ್ಲಾ ವಯಸ್ಸಿನವರು ಭಾಗಿಯಾಗಿದ್ದರು. ತಮ್ಮ ಸೃಜನಶೀಲ ಕೌಶಲ್ಯಗಳನ್ನು ಚಿತ್ರದ ಮೂಲಕ ಪ್ರದರ್ಶಿಸಿದರು.
ಇದನ್ನೂ ಓದಿ: Drawing Day 2023: ಭಾಷೆಯನ್ನೂ ಮೀರಿ, ಭಾವನೆಗಳಿಗೆ ಬಣ್ಣ ನೀಡೋ ಚಿತ್ರಕಲೆ ದಿನವನ್ನು ಆಚರಿಸಿ, ಕಲಾವಿದರಿಗೆ ಪ್ರೋತ್ಸಾಹಿಸಿ
ಇದು ಎಲ್ಲರನ್ನೂ ಒಳಗೊಂಡ ಕಾರ್ಯಕ್ರಮವಾಗಿದೆ. ಪೆನ್ಸಿಲ್ ಹಿಡಿಯಬಲ್ಲ ಯಾರಾದರೂ ಕಲೆಯ ಹಬ್ಬದಲ್ಲಿ ಭಾಗವಹಿಸಬಹುದು. 3 ವರ್ಷದಿಂದ 90 ವರ್ಷದೊಳಗಿನ ವಯೋಮಾನದವರು ಕಲರ್ಥಾನ್ನಲ್ಲಿ ಭಾಗಿಯಾಗಿ ಹೊಸ ಬೆಂಚ್ ಮಾರ್ಕ್ ಸೃಷ್ಟಿಸಿದ್ದಾರೆ ಎಂದು ಕಲರ್‌ಥಾನ್ ಸಂಸ್ಥಾಪಕ ಜೋಸೆಫ್ ತಿಳಿಸಿದರು.
‘ತಾರೆ ಜಮೀನ್ ಪರ್’ ಸಿನಿಮಾ ವೀಕ್ಷಿಸಿದಾಗ, ಕಲರ್‌ಥಾನ್ ಕಾರ್ಯಕ್ರಮ ಮಾಡಬೇಕೆಂಬ ಆಸೆ ಹುಟ್ಟಿತು. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಕುಟುಂಬದೊಂದಿಗೆ ಇರಲು ಸಮಯವನ್ನು ಹೆಚ್ಚಾಗಿ ಕೊಡುವುದಿಲ್ಲ. ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬಕ್ಕಾಗಿ ಸಮಯವನ್ನು ಕೊಟ್ಟರೂ ಸಹ, ವಿವಿಧ ರೀತಿಯಲ್ಲಿ ಅದನ್ನು ಕಳೆಯುತ್ತಾರೆ. ಆದರೆ ಯಾರೂ ಕೂಡ ಸೃಜನಾತ್ಮಕವಾಗಿ ಏನನ್ನೂ ಮಾಡುತ್ತಿಲ್ಲ. ಇದನ್ನೇ ನಾನು ಬದಲಾಯಿಸಲು ಬಯಸುತ್ತೇನೆ. ಇಲ್ಲಿಯವರೆಗೆ, ಕಲರ್‌ಥಾನ್ ಚಿತ್ರಕಲೆ ಉತ್ಸವದಲ್ಲಿ ದೇಶಾದ್ಯಂತ 1,65,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ನವದೆಹಲಿ, ಲಕ್ನೋ, ಚೆನ್ನೈ, ಹೈದರಾಬಾದ್, ಮುಂಬೈ, ಗುವಾಹಟಿ ಮತ್ತು ಬೆಂಗಳೂರಿನಲ್ಲಿ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಜೋಸೆಫ್ ಹೇಳಿದರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ