ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವ ಸಂಪುಟ ವಿಸ್ತರಣೆ (Karnataka Cabinet Expansion) ಸಾಧ್ಯತೆಯ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನಾಕಾಂಕ್ಷಿಗಳು ಪ್ರಯತ್ನ ಚುರುಕುಗೊಳಿಸಿದ್ದಾರೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ (MP Renukacharya) ಅವರ ನಿವಾಸಕ್ಕೆ ಭೇಟಿ ನೀಡಿದ್ದ ಕೆಲವು ಶಾಸಕರು ತಮ್ಮ ಆಕಾಂಕ್ಷೆಯನ್ನು ತೆರೆದಿಟ್ಟರು. ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ದೆಹಲಿಗೆ ತೆರಳುವುದಾಗಿ ರೇಣುಕಾಚಾರ್ಯ ಹೇಳಿರುವ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಹಲವು ಆಕಾಂಕ್ಷಿ ಶಾಸಕರು ಭೇಟಿ ನೀಡಿ ಮಾತುಕತೆ ನಡೆಸಿದರು.
ಸಿಎಂ ಭೇಟಿ ಮಾಡಿದ ಆನಂದ್ಸಿಂಗ್
ಜಿಲ್ಲಾ ಉಸ್ತುವಾರಿ ಅಧಿಕಾರ ಕೈತಪ್ಪಿದ ಹಿನ್ನೆಲೆಯಲ್ಲಿ ಮುನಿಸಿಕೊಂಡಿದ್ದಾರೆ ಎನ್ನಲಾದ ಸಚಿವ ಆನಂದ್ ಸಿಂಗ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಚರ್ಚಿಸಿದರು. ಇತ್ತೀಚಿಗಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವನ್ನು ಆನಂದ್ ಸಿಂಗ್ ಭೇಟಿ ಮಾಡಿ ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದರು. ಇದೀಗ ಮುಖ್ಯಮಂತ್ರಿಯನ್ನು ಭೇಟಿ ಮಾಡಿರುವ ಆನಂದ್ ಸಿಂಗ್ ಅವರು ಕೆಲ ಸಮಯ ಚರ್ಚಿಸಿದರು. ವಿಜಯನಗರ ಜಿಲ್ಲೆಯ ಉಸ್ತುವಾರಿ ಸ್ಥಾನ ಕೊಡದಿದ್ದ ಕಾರಣಕ್ಕೆ ಆನಂದ್ ಸಿಂಗ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಉಸ್ತುವಾರಿ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ನನಗೆ ಯಾವುದೇ ಬೇಸರವಿಲ್ಲ ಎಂದು ಆನಂದ್ ಸಿಂಗ್ ಈ ಹಿಂದೆ ಪ್ರತಿಕ್ರಿಯಿಸಿದರು.
ಈ ನಡುವೆ ಸಚಿವ ಸ್ಥಾನದ ಆಕಾಂಕ್ಷಿಗಳಾದ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಅರವಿಂದ್ ಬೆಲ್ಲದ್ ಸಹ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದರು.
ನನ್ನ ವಿರುದ್ಧ ವರಿಷ್ಠರಿಗೆ ದೂರು: ರೇಣುಕಾಚಾರ್ಯ
ನನ್ನ ವಿರುದ್ಧ ಕೆಲವರು ಪಕ್ಷದ ವರಿಷ್ಠರಿಗೆ ದೂರು ಕೊಟ್ಟಿದ್ದಾರೆ ಎಂದು ಹೊನ್ನಾಳಿ ಕ್ಷೇತ್ರದ ಬಿಜೆಪಿ (BJP) ಶಾಸಕ ರೇಣುಕಾಚಾರ್ಯ (Renukacharya) ಹೇಳಿದರು. ಇತ್ತೀಚೆಗಷ್ಟೇ ಬಿಜೆಪಿ ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ (Arun Singh) ಫೋನ್ ಮಾಡಿದ್ದರು. ಬಹಿರಂಗವಾಗಿ ಹೇಳಿಕೆ ನೀಡುವುದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ, ಹೀಗಾಗಿ ಬಹಿರಂಗ ಹೇಳಿಕೆ ಕೊಡಬೇಡಿ ಎಂದು ಹೇಳಿದ್ದರು. ನನ್ನನ್ನು ದೆಹಲಿಗೆ ಕರೆದಿದ್ದಾರೆ. ಹೀಗಾಗಿ ಫೆ 8ರಂದು ದೆಹಲಿಗೆ ತೆರಳುತ್ತೇನೆ. ಫೆ 8, 9 ಹಾಗೂ 10ರಂದು ದೆಹಲಿಯಲ್ಲೇ ಇರುತ್ತೇನೆ. ನಾನು ದೆಹಲಿಗೆ ಹೋಗುವ ಬಗ್ಗೆ ಯತ್ನಾಳ್ ಜೊತೆ ಚರ್ಚಿಸಿಲ್ಲ. ಈ ಬಗ್ಗೆ ನಂತರ ಅವರ ಜೊತೆಗೆ ಮಾತನಾಡುತ್ತೇನೆ ಎಂದರು.
ಸಂಪುಟ ವಿಸ್ತರಣೆ ಬಗ್ಗೆ ನನ್ನ ಅಭಿಪ್ರಾಯವನ್ನು ಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಗಮನ ಸೆಳೆದಿದ್ದೇನೆ. ನನ್ನ ಮನವಿಗೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನನ್ನ ವಿರುದ್ಧ ದೂರು ನೀಡಿದವರಂತೆ ನಾನು ರೆಡಿಮೇಡ್ ಫುಡ್ ರೀತಿ ದಿಢೀರ್ ಮೇಲೆ ಬಂದವನಲ್ಲ. ಹಾದಿಬೀದಿಯಲ್ಲಿ ಹೋರಾಟ ಮಾಡಿಯೇ ಶಾಸಕನಾದವನು ಎಂದು ತಮ್ಮ ವಿರುದ್ಧ ದೂರು ನೀಡಿದ ಸ್ವಪಕ್ಷದ ಶಾಸಕರ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಸಚಿವರ ವಿರುದ್ಧ ವರಿಷ್ಠರಿಗೆ, ಸಿಎಂಗೆ ದೂರು ಕೊಟ್ಟಿರುವುದು ನಿಜ: ರೇಣುಕಾಚಾರ್ಯ
ಇದನ್ನೂ ಓದಿ: ನಾವು ಯಾವತ್ತಿದ್ದರೂ ವಲಸಿಗರೇ, ನಮ್ಮನ್ನು ವಲಸಿಗರು ಅಂತಾನೇ ಕರೆಯುತ್ತಾರೆ: ಸಚಿವ ಸಂಪುಟ ಸಭೆಯಲ್ಲಿ ಮುನಿರತ್ನ ಖೇದ
Published On - 3:09 pm, Thu, 3 February 22