ಬೆಂಗಳೂರು, ಜೂ.07: ನಗರದ ವಿಕ್ಟೋರಿಯಾ ಲೇಔಟ್(Victoria Layout)ನಲ್ಲಿರುವ ಎಟಿಎಂ ನಲ್ಲಿ ಹಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗನ್ನು ಪೊಲೀಸರು ಬಂಧಿಸಿದ್ದಾರೆ. ಮುರಳಿ ಮೋಹನ್, ಪೋತಾಲು ಸಾಹಿ ತೇಜ ಹಾಗೂ ಎರೆ ಕಾಲ ವೆಂಕಟೇಶ್ ಎಂಬುವವರು ಬಂಧಿತರು. ಆರೋಪಿ ಮುರುಳಿ ಈ ಹಿಂದೆ ಎಟಿಎಂಗಳಿಗೆ ಹಣ ಹಾಕುವ ಸೆಕ್ಯೂರಿಟಿ ವ್ಯಾಲ್ಯೂ ಇಂಡಿಯಾ ಲಿಮಿಟೆಡ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ 2022 ರಲ್ಲಿ ಕೆಲಸ ಬಿಟ್ಟಿದ್ದ. ಸದ್ಯ ಅದೇ ಏಜೆನ್ಸಿಯಲ್ಲಿ ಎರೆ ಕಾಲು ವೆಂಕಟೇಶ ಕೆಲಸ ಮಾಡುತ್ತಿದ್ದ.
ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಮುರುಳಿ ಹಾಗೂ ಎರೆ ಕಾಲ ವೆಂಕಟೇಶ್ ನಡುವೆ ಪರಿಚಯವಾಗಿತ್ತು. ಅಲ್ಲದೇ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಅಕ್ಕ-ಪಕ್ಕದ ಹಳ್ಳಿಯವರು. ಇತ್ತ ಕೆಲಸ ಬಿಟ್ಟು ಊರಿಗೆ ಹೋಗಿದ್ದ ಮುರುಳಿ, ಮೈತುಂಬ ಸಾಲ ಮಾಡಿಕೊಂಡಿದ್ದ. ನಂತರ ಸಾಲ ತೀರಿಸಲು ಹಣ ಮಾಡುವ ನಿರ್ಧಾರ ಮಾಡಿದ ಆತ, ಪ್ಲ್ಯಾನ್ ಒಂದನ್ನು ಮಾಡುತ್ತಾನೆ.
ಇದನ್ನೂ ಓದಿ:ಕಳ್ಳತನ ಮಾಡಲು ಹೋಗಿ ಎಸಿ ಕೆಳಗೆ ನಿದ್ರೆಗೆ ಜಾರಿದ ಕಳ್ಳ
ಎಟಿಎಂ ಗೆ ಹಣ ಹಾಕಲು 12 ಸಂಖ್ಯೆಯ ಪಿನ್ ನಂಬರ್ ಕಸ್ಟೋಡಿಯನ್ಗಳಿಗೆ ನೀಡಲಾಗಿರುತ್ತದೆ. ಇಬ್ಬರು ವ್ಯಕ್ತಿಗಳಿಗೆ ತಲಾ ಆರು ನಂಬರ್ ಪಾಸ್ ವರ್ಡ್ ಕೊಡುತ್ತಾರೆ. ಒಮ್ಮೆ ಕಸ್ಟೋಡಿಯನ್ ಬರದಿದ್ದಾಗ ಮೊದಲ ಪಾಸ್ವರ್ಡ್ನ್ನು ಪಡೆದಿದ್ದ. ಅದೇ ನಂಬರ್ನ್ನು ತನ್ನ ಬಳಿ ಬರೆದಿಟ್ಟುಕೊಂಡು ಕೆಲಸ ಬಿಟ್ಟಿದ್ದ. ಇದಾದ ಬಳಿಕ ಕೊನೆಯ 6 ಪಾಸ್ ವರ್ಡ್ ಎರೆ ಕಾಲ ವೆಂಕಟೇಶ್ಗೆ ಗೊತ್ತಿರುತ್ತದೆ. ಹಾಗಾಗಿ ಆತನನ್ನ ಸಂಪರ್ಕ ಮಾಡಿದ್ದ ಮುರುಳಿ, ಆತನಿಗೂ ಈ ಕೃತ್ಯದ ಬಗ್ಗೆ ಹೇಳುತ್ತಾನೆ. ಹಣದ ಅವಶ್ಯಕತೆ ಇದ್ದ ಆತ, ಇದಕ್ಕೆ ಒಪ್ಪಿ ಪಾಸ್ ವರ್ಡ್ ನೀಡುತ್ತಾನೆ.
ಇದಾದ ನಂತರ ಮೇ.31 ರಂದು ಮುರುಳಿ ಮತ್ತು ಪೋತಾಲು ಸಾಹಿ ತೇಜ ಬೆಂಗಳೂರಿಗೆ ಬಂದಿದ್ದರು. ಎರೆ ಕಾಲ ವೆಂಕಟೇಶ್ ಊರಿನಲ್ಲೇ ಉಳಿದುಕೊಂಡಿದ್ದ. ಮಧ್ಯರಾತ್ರಿ ಎಟಿಎಂಗೆ ತೆರಳಿ ಪಾಸ್ ವರ್ಡ್ ಬಳಸಿ ಬಾಕ್ಸ್ನಲ್ಲಿ ಇದ್ದ 20 ಲಕ್ಷ ಹಣ ಕದ್ದು ಪರಾರಿಯಾಗಿದ್ದಾರೆ. ಬಳಿಕ ಬೆಂಗಳೂರಲ್ಲೇ ಎರಡು ದಿನ ಉಳಿದುಕೊಂಡು, ಆಂಧ್ರಗೆ ತೆರಳುವಾಗ ಇಬ್ಬರನ್ನು ಪೊಲೀಸರು ಲಾಕ್ ಮಾಡಿ ಹಣವನ್ನು ವಶಕ್ಕೆ ಪಡೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ