ಮಸೀದಿಗಳಲ್ಲಿ ಬೆಳಗ್ಗೆ 5 ಗಂಟೆಗೆ ಆಜಾನ್ ಕೂಗದಿರಲು ನಿರ್ಧಾರ: ಸರ್ಕಾರದ ನಿಯಮ ಪಾಲಿಸುವಂತೆ ಮೌಲಾನಾ ಮಕ್ಸೂದ್ ಸೂಚನೆ

| Updated By: ಗಂಗಾಧರ​ ಬ. ಸಾಬೋಜಿ

Updated on: May 14, 2022 | 12:32 PM

ಸರ್ಕಾರದ ನಿಯಮ ಪಾಲಿಸುವಂತೆ ಮೌಲಾನಾ ಮಕ್ಸೂದ್ ತಿಳಿಸಿದ್ದು, ಪೊಲೀಸರಿಂದ ಅನುಮತಿ ಪಡೆದು ಬೆಳಗ್ಗೆ 6 ಗಂಟೆಯ ಬಳಿಕ ಅಜಾನ್​ ಕೂಗಲು ಸೂಚನೆ ನೀಡಿದ್ದಾರೆ. 

ಮಸೀದಿಗಳಲ್ಲಿ ಬೆಳಗ್ಗೆ 5 ಗಂಟೆಗೆ ಆಜಾನ್ ಕೂಗದಿರಲು ನಿರ್ಧಾರ: ಸರ್ಕಾರದ ನಿಯಮ ಪಾಲಿಸುವಂತೆ ಮೌಲಾನಾ ಮಕ್ಸೂದ್ ಸೂಚನೆ
ಪ್ರಾತಿನಿಧಿಕ ಚಿತ್ರ
Image Credit source: asianetnews.com
Follow us on

ಬೆಂಗಳೂರು:  ಮಸೀದಿಗಳಲ್ಲಿ ಬೆಳಗ್ಗೆ 5 ಗಂಟೆಗೆ ಆಜಾನ್ (Azan) ಕೂಗದಿರಲು ನಗರದಲ್ಲಿ ನಿನ್ನೆ ನಡೆದ ಮುಸ್ಲಿಂ ಮುಖಂಡರ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಬೆಳಗ್ಗೆ 5 ಗಂಟೆಗೆ ಧ್ವನಿವರ್ಧಕಗಳಲ್ಲಿ ಆಜಾನ್ ಕೂಗದಂತೆ ಎಲ್ಲಾ ಮಸೀದಿ ಮುಸ್ಲಿಂ ಮುಖಂಡರಿಗೆ ಸೂಚನೆ ನೀಡಲಾಗಿದೆ ಎಂದು
ಟಿವಿ 9ಗೆ ಇಮಾಮ್‌ ಮೌಲಾನಾ ಮಕ್ಸೂದ್‌ ಇಮ್ರಾನ್‌ ರಶಾದಿ ಹೇಳಿಕೆ ನೀಡಿದ್ದಾರೆ. ಬೆಳಗ್ಗೆ 5 ಗಂಟೆ, 5:15, 5:30ಕ್ಕೆ ಮೈಕ್​​ನಲ್ಲಿ ಆಜಾನ್ ಕೂಗಬಾರದು. ಸರ್ಕಾರದ ನಿಯಮ ಪಾಲಿಸುವಂತೆ ಮೌಲಾನಾ ಮಕ್ಸೂದ್ ತಿಳಿಸಿದ್ದು, ಪೊಲೀಸರಿಂದ ಅನುಮತಿ ಪಡೆದು ಬೆಳಗ್ಗೆ 6 ಗಂಟೆಯ ಬಳಿಕ ಅಜಾನ್​ ಕೂಗಲು ಸೂಚನೆ ನೀಡಿದ್ದಾರೆ.

ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕಗಳ ಬಳಕೆ ನಿಷೇಧ: 

ಮಸೀದಿಗಳಲ್ಲಿ ಆಜಾನ್ ನಿಷೇಧಿಸಬೇಕೆಂದು ಈಗಾಗಲೇ ಹಿಂದೂ ಸಂಘಟನೆ ಕಾರ್ಯಕರ್ತರು ಸರ್ಕಾರಕ್ಕೆ ಮನವಿ ಮಾಡಿದ್ದರು. ಮನವಿಯನ್ನು ಸ್ವೀಕರಿಸಿದ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಇನ್ನು ಮುಂದೆ ಲೌಡ್ಸ್ಪೀಕರ್ (Loud Speaker) ಬಳಸುವವರು 15 ದಿನಗಳ ಒಳಗೆ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ತಿಳಿಸಿದೆ. ಜೊತೆಗೆ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕ ಬಳಸದಂತೆ ಸೂಚನೆ ನೀಡಿದೆ. ಈ ಆದೇಶಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಸರ್ಕಾರದ ಆದೇಶ ಆಜಾನ್ಗೆ ಅನ್ವಯ ಆಗುವುದಿಲ್ಲ ಎಂದಿದ್ದಾರೆ.

ಬೆಳಗ್ಗೆ 5 ಗಂಟೆಗೆ ಕೂಗುವ ಆಜಾನ್ ಅದು ಪ್ರಾರ್ಥನೆ ಅಲ್ಲ. ಬೆಳಗ್ಗೆ 5 ಗಂಟೆಗೆ ಕೂಗುವುದು ಪ್ರಾರ್ಥನೆಗೆ ಕರೆಯುವ ಸಂದೇಶ. ಸುಪ್ರೀಂಕೋರ್ಟ್ ಆದೇಶದಲ್ಲೂ ಆಜಾನ್ ಬಗ್ಗೆ ವಿರೋಧ ಇಲ್ಲ. ಆಜಾನ್ಗೆ ನಾವು ಧ್ವನಿವರ್ಧಕ ಮೂಲಕವೇ ಕರೆಯಬೇಕು. ಸರ್ಕಾರದ ಆದೇಶ ಏನಿದೆ ಅದನ್ನ ಪಾಲನೆ ಮಾಡುತ್ತೇವೆ. ಆದರೆ ಆಜಾನ್ಗೆ ತಡೆಯಿಲ್ಲ ಎಂದು ಮೊಹಮ್ಮದ್ ಷಫಿ ಸಾ-ಆದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಜಾನ್ ವಿರುದ್ಧ ಹನುಮಾನ್ ಚಾಲೀಸಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸುವ ನಿರ್ದೇಶನಗಳ ಭಾಗವಾಗಿ 15 ದಿನಗಳಲ್ಲಿ ಅಧಿಕಾರಿಗಳಿಂದ ಲಿಖಿತ ಅನುಮತಿಯನ್ನು ಪಡೆಯಲು ಧ್ವನಿ-ಉತ್ಪಾದಿಸುವ ಉಪಕರಣಗಳ ಎಲ್ಲಾ ಬಳಕೆದಾರರನ್ನು ಸರ್ಕಾರ ಕೇಳಿದೆ. ಒಂದು ಧ್ವನಿವರ್ಧಕ ಅಥವಾ ಲೌಡ್ ಸ್ಪೀಕರ್ ರಾತ್ರಿಯಲ್ಲಿ (ರಾತ್ರಿ 10.00 ರಿಂದ ಬೆಳಗ್ಗೆ 6.00 ರ ನಡುವೆ) ಸಂವಹನಕ್ಕಾಗಿ ಮುಚ್ಚಿದ ಆವರಣಗಳನ್ನು ಹೊರತುಪಡಿಸಿ ಬೇರೆಲ್ಲೂ ಬಳಸಬಾರದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಅನುಮತಿ ಪಡೆಯದವರು, ಸ್ವಯಂಪ್ರೇರಣೆಯಿಂದ ಧ್ವನಿವರ್ಧಕಗಳು ಮತ್ತು ಧ್ವನಿ-ಉತ್ಪಾದಿಸುವ ಉಪಕರಣಗಳನ್ನು ತೆಗೆದುಹಾಕಬೇಕು. ಇಲ್ಲವೇ ನೀಡಲಾದ ಗಡುವಿನಿಂದ 15 ದಿನಗಳಲ್ಲಿ ಗೊತ್ತುಪಡಿಸಿದ ಪ್ರಾಧಿಕಾರದಿಂದ ಅದನ್ನು ತೆಗೆದುಹಾಕಲಾಗುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಿದೆ. ಅಧಿಸೂಚನೆಯು 2002 ರ ಸರ್ಕಾರಿ ಆದೇಶವನ್ನು ಉಲ್ಲೇಖಿಸಿದ್ದು, ಶಬ್ದ ಮಾಲಿನ್ಯವನ್ನು ಕಡಿಮೆ ಮಾಡುವ ಜವಾಬ್ದಾರಿಯಾಗಿ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.