ಬೆಂಗಳೂರು: ನೀವು ನಮ್ಮ ಫಲಾನುಭವಿಗಳಲ್ಲ, ನೀವು ನಮ್ಮ ಸರ್ಕಾರದ ಪಾಲುದಾರರು. ನಿಮ್ಮ ಮೇಲೆ ಹೂಡಿಕೆ ಮಾಡಿದರೆ ರಾಜ್ಯಕ್ಕೆ ಆದಾಯ ಹೆಚ್ಚಾಗುತ್ತದೆ. ನಿಮ್ಮ ಮೇಲೆ ಹಣ ತೊಡಗಿಸಿದರೆ ಅಕ್ಷಯ ಪಾತ್ರೆಯಲ್ಲಿ ಹಣ ತೊಡಗಿಸಿದಂಗೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದ್ದಾರೆ. ದೇವರಾಜ ಅರಸು ಅವರು ಹಿಂದುಳಿದ ಆಯೋಗ ಮಾಡಿ ಮೀಸಲಾತಿ ನೀಡಿದ ನಾಯಕ. ಅವರ ಹೆಸರಲ್ಲಿ ಬಹಳ ಜನ ನಾಯಕರಾಗಿದ್ದಾರೆ. ನಾನು ಅವರ ಶಿಷ್ಯ ಹಂಗೆ ಹಿಂಗೆ ಅಂತ ಹೇಳಿಕೊಳ್ಳುತ್ತಾರೆ. ದೇವರಾಜ ಅರಸರಲ್ಲಿನ ಒಂದೇ ಒಂದು ಅಂಶ, ನಿಮ್ಮಲ್ಲಿ ಇದ್ದಿದ್ದರೇ ನಿಮ್ಮನ್ನು ಒಪ್ಪಿಕೊಳ್ಳುತ್ತಿದೆ ಎಂದು ವಿಪಕ್ಷನಾಯಕ ಸಿದ್ದರಾಮಯ್ಯಗೆ ಪರೋಕ್ಷವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಾಂಗ್ ಕೊಟ್ಟಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಕಟ್ಟಡ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ವಿವಿಧ ಅಭಿವೃದ್ಧಿ ನಿಗಮಗಳ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ಡಿಜಿಟಲೈಸ್ ಮಾಡಿದರು. ನೇರವಾಗಿ ರೈತರ ಖಾತೆಗೆ ಹಣ ಸಂದಾಯವಾಗುವಂತೆ ಮಾಡಿದರು. ಸರಳವಾಗಿ ಆಡಳಿತ ನಡೆಸಿದಾಗ ನೇರವಾಗಿ ಫಲಾನುಭವಿಗಳಿಗೆ ಹಣ ತಲುಪುತ್ತದೆ ಎಂದು ಸಿಎಂ ಬೊಮ್ಮಾಯಿ ಮಾಹಿತಿ ನೀಡಿದರು.
ಇದನ್ನೂ ಓದಿ: ಎಸ್ಸಿ ಎಸ್ಟಿ ಜನಾಂಗಕ್ಕೆ ಜನಸಂಖ್ಯೆಗೆ ಅನುಗುವಾಗಿ ಆರ್ಥಿಕ ಸಹಾಯದ ಕಾನೂನು ಮಾಡಿದ್ದು ಕಾಂಗ್ರೆಸ್: ಸಿದ್ದರಾಮಯ್ಯ
ಗಂಗಾ ಕಲ್ಯಾಣ ಯೋಜನೆಯಿಂದ 19 ಸಾವಿರ ಫಲಾನುಭವಿಗಳಿಗೆ ಅನುಕೂಲವಾಗಿದೆ. ಕೇವಲ 5 ತಿಂಗಳಲ್ಲೇ ನಾವು ಈ ಯೋಜನೆ ಅನುಷ್ಠಾನಗೊಳಿಸುತ್ತಿದ್ದೇವೆ. 1 ಲಕ್ಷ ೧೬ ಸಾವಿರ ಜನ ಫಲಾನುಭವಿಗಳಿಗೆ ಸುಮಾರು 900 ಕೋಟಿ ರೂ. ನಾವು ಹಣ ಬಿಡುಗಡೆ ಮಾಡುತ್ತಿದ್ದೇವೆ. ಗಂಗಕಲ್ಯಾಣ, 50 ಕನಕದಾಸ ಹಾಸ್ಟೆಲ್, ಸ್ವಯಂ ಉದ್ಯೋಗದದಿ ಟೈಲರಿಂಗ್ ಮಿಷನ್ಗಳನ್ನು ವಿತರಣೆ ಮಾಡಿದ್ದೇವೆ ಎಂದು ತಿಳಿಸಿದರು.
ವಿದ್ಯಾಸಿರಿ ಯೋಜನೆ ಹಾಗೂ ಹಾಸ್ಟೆಲ್ ಮೂಲಕ ಸುಮಾರು 1 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿದ್ದೇವೆ. ಹಿಂದುಳಿದ ವರ್ಗದ ಮಕ್ಕಳು ವಿದ್ಯಾವಂತರು ಆಗಬೇಕು. ಅವರು ಇತರರಂತೆ ಮುಂದೆ ಬರಬೇಕು. ಹಳ್ಳಿಗಳಲ್ಲಿ ಹಿಂದುಳಿದ ವರ್ಗದವರು ಕಾಯಕ ಸಮಾಜವಾಗಿದ್ದು, ಕಾಯಕ ಅನ್ನೋ ಕಾರ್ಯಕ್ರಮದ ಮೂಲಕ 50 ಸಾವಿರದವರೆಗೂ ಹಣ ನೀಡುತ್ತೇವೆ. ಪೌರ ಕಾರ್ಮಿಕರಿಗೆ ಖಾಯಂ ಮಾಡಿದ್ದೇವೆ. ಲಮಾಣಿ ಜನಾಂಗಕ್ಕೆ ಪ್ರಧಾನಿ ನರೇಂದ್ರ ಮೋದಿಯವರು 50 ಸಾವಿರ ಹಕ್ಕು ಪತ್ರ ನೀಡಿದರು. ಕುರುಬರಹಟ್ಟಿ ಗೊಲ್ಲರ ಹಟ್ಟಿ ಲಮಾಣಿ ಸಮುದಾಯಕ್ಕೆ ಇನ್ನು 10 ದಿನದಲ್ಲಿ 1 ಲಕ್ಷ ಹಕ್ಕುಪತ್ರ ನೀಡುತ್ತೇವೆ ಎಂದು ಭರವಸೆ ನೀಡಿದರು.
ಸಾಕಷ್ಟು ನಿಗಮಗಳನ್ನ ಮಾಡಿದ್ದೇವೆ. 850 ಕೋಟಿ ರೂಪಾಯಿ ಎಲ್ಲ ನಿಗಮಗಳಿಗೆ ಕೊಟ್ಟಿದ್ದೇವೆ. ನಿಮ್ಮ ಆಶೀರ್ವಾದ ಇರಲಿ ಕಾರ್ಯಕ್ರಮಗಳನ್ನು ಮುಂದುವರಿಸುತ್ತೇವೆ. ಇನ್ನಷ್ಟು ಕಾರ್ಯಕ್ರಮಗಳನ್ನು ಮಾಡುತ್ತೇವೆ. ಹೊಲದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ 1 ಸಾವಿರ ರೂಪಾಯಿ ಕೊಡುತ್ತೇವೆ. ವಿದ್ಯಾರ್ಥಿನಿಯರಿಗೆ ಉಚಿತ ಪಾಸ್ ವಿತರಣೆ ಮಾಡಲಿದ್ದೇವೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:40 am, Sat, 11 March 23