ಬಕ್ರೀದ್ ಆಚರಣೆ: ಬೆಂಗಳೂರಿನ ಕೆಲವು ಕಡೆ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ
ಬಕ್ರೀದ್ ಹಬ್ಬ ಹಿನ್ನೆಲೆಯಲ್ಲಿ ಸೋಮವಾರ ಜೂನ್ 17 ರಂದು ನಗರದ ವಿವಿಧ ಪ್ರದೇಶಗಳಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬೆಳಗ್ಗೆ 6 ಗಂಟೆಯಿಂದಲೇ ಮೈಸೂರು ರಸ್ತೆಯ ಬಿಬಿ ಜಂಕ್ಷನ್ ಬಳಿಯಿರುವ ಮಸೀದಿ ಮತ್ತು ಚಾಮರಾಜಪೇಟೆಯ ಬಿಬಿಎಂಪಿ ಆಟದ ಮೈದಾನದಲ್ಲಿ ಸಾಮೂಹಿಕ ಪಾರ್ಥನೆ ಸಲ್ಲಿಸಿದರು. ಇದರಿಂದ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು.
ಬೆಂಗಳೂರು, ಜೂನ್ 17: ಬಕ್ರೀದ್ (Bakrid) ಹಬ್ಬ ಹಿನ್ನೆಲೆಯಲ್ಲಿ ಸೋಮವಾರ ಜೂನ್ 17 ರಂದು ನಗರದ ವಿವಿಧ ಪ್ರದೇಶಗಳಲ್ಲಿ ಮುಸ್ಲಿಮರು (Muslim) ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬೆಳಗ್ಗೆ 6 ಗಂಟೆಯಿಂದಲೇ ಮೈಸೂರು ರಸ್ತೆಯ ಬಿಬಿ ಜಂಕ್ಷನ್ ಬಳಿಯಿರುವ ಮಸೀದಿ ಮತ್ತು ಚಾಮರಾಜಪೇಟೆಯ ಬಿಬಿಎಂಪಿ ಆಟದ ಮೈದಾನದಲ್ಲಿ ಸಾಮೂಹಿಕ ಪಾರ್ಥನೆ ಸಲ್ಲಿಸಿದರು. ಹಾಗೆ, ಬನ್ನೇರುಘಟ್ಟ ಮುಖ್ಯ ರಸ್ತೆ ಗುರಪ್ಪನ ಪಾಳ್ಯ ಜಂಕ್ಷನಲ್ಲಿ ಸಾಮೂಹಿಕ ಪಾರ್ಥನೆ ಸಲ್ಲಿಸಿದರು.
ಮೈಸೂರು ರಸ್ತೆಯ ಬಿಬಿ ಜಂಕ್ಷನ್ ಬಳಿಯಿರುವ ಮಸೀದಿಯಲ್ಲಿ ಪ್ರಾರ್ಥನೆಗೆ ನೂರಾರು ಮುಸ್ಲಿಮರು ಆಗಮಿಸಿದ್ದಾರೆ. ಇದರಿಂದ ಮೈಸೂರು ರಸ್ತೆಯಲ್ಲಿ ಕೆಲಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ನಾಯಂಡಹಳ್ಳಿಯಿಂದ ಟೌನ್ಹಾಲ್ ವರೆಗೂ ಸಂಚಾರ ದಟ್ಟಣೆ ಉಂಟಾಗಿತ್ತು. ಇದರಿಂದ ಮೈಸೂರು, ಕೆಂಗೇರಿ, ನಾಯಂಡಹಳ್ಳಿ ಕಡೆಯಿಂದ ವಿಧಾನಸೌಧ, ಕಬ್ಬನ್ ಪಾರ್ಕ್, ಕಡೆ ಬರುವ ವಾಹನ ಸವಾರರಿಗೆ ತೊಂದರೆ ಉಂಟಾಗಿತ್ತು.
ಈ ಸಂಬಂಧ ಬೆಂಗಳೂರು ಸಂಚಾರಿ ಪೊಲೀಸರು ಈಗಾಗಲೆ ಮಾರ್ಗಬದಲಾವಣೆಯನ್ನು ಸೂಚಿಸಿದ್ದಾರೆ. ಟೌನ್ಹಾಲ್ ಕಡೆಯಿಂದ ಮೈಸೂರು ಅಥವಾ ಮೈಸೂರು ಕಡೆಯಿಂದ ಟೌನ್ಹಾಲ್ ಕಡೆಗೆ ಹೋಗುವ ವಾಹನಗಳು ಬಿಜಿಎಸ್ ಪ್ಲೈಓವರ್ ಕೆಳ ಸರ್ವಿಸ್ ರಸ್ತೆಯನ್ನು ಬಳಸಿಕೊಂಡು ವೆಟರ್ನರಿ ಜಂಕ್ಷನಲ್ಲಿ ಬಲತಿರುವು ಪಡೆದು ಗೂಡ್ಸ್ ಶೆಡ್ ರಸ್ತೆ ಮೂಲಕ ಅಥವಾ ಸಿರಸಿ ಜಂಕ್ಷನಲ್ಲಿ ಬಲ ತಿರುವು ಪಡೆದುಕೊಂಡು ಜೆಜೆ ನಗರ-ಟ್ಯಾಂಕ್ಬಂಡ್-ಬನ್ನಿಮಿಲ್ ಜಂಕ್ಷನ್-ಹುಣಸೇಮರ ಮೂಲಕ ಸಾಗುವಂತೆ ಸೂಚಿಸಲಾಗಿದೆ.
ಇದನ್ನೂ ನೋಡಿ: ಮುಸ್ಲಿಂ ಟೋಪಿ ಧರಿಸಿ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ
ಚಾಮರಾಜಪೇಟೆಯ ಈದ್ಗ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು. ಈ ಪ್ರಾರ್ಥನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಪಾಲ್ಗೊಂಡಿದ್ದರು. ಇದರಿಂದ ಮೈದಾನದ ಸುತ್ತ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಹೀಗಾಗಿ, ಬಸವನಗುಡಿ ಮತ್ತು ಚಾಮರಾಜಪೇಟೆ ಕಡೆಯಿಂದ ಮೆಜೆಸ್ಟಿಕ್ ಕಡೆಗೆ ಹೋಗುವವರೆಗೆ ತೊಂದರೆ ಉಂಟಾಯಿತು. ಪೊಲೀಸರು ಮಾರ್ಗ ಬದಲಾವಣೆ ಸೂಚಿಸಿದ್ದರೂ, ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಮಾರ್ಗ ಬದಲಾವಣೆ ತಿಳಿಯದ ಕೆಲ ಸವಾರರು ಇದೇ ಮಾರ್ಗದಲ್ಲಿ ಬಂದು ಫಜೀತಿ ಅನುಭವಿಸುವಂತಾಯಿತು.
ಬನ್ನೇರುಘಟ್ಟ ಮುಖ್ಯ ರಸ್ತೆ ಗುರಪ್ಪನಪಾಳ್ಯ ಜಂಕ್ಷನಲ್ಲಿ ಮುಸ್ಲಿಮರು ಪಾರ್ಥನೆ ಸಲ್ಲಿಸಿದರು. ಇದರಿಂದ ಆನೇಕಲ್, ಡೈರಿ ಜಂಕ್ಷನ್ ಕಡೆ ಸಂಚರಿಸುವ ವಾಹನ ಸವಾರರು ಪರದಾಡುವಂತಾಯಿತು. ಮಾರ್ಗ ಬದಲಾವಣೆಯನ್ನು ತಿಳಿಯದೆ ಸವಾರರು ಈ ಮಾರ್ಗದಲ್ಲಿ ಬಂದಿದ್ದರಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಬೆಂಗಳೂರು ಸಂಚಾರಿ ಪೊಲೀಸರು ಮಾರ್ಗ ಬದಲಾವಣೆನ್ನು ತಿಳಿಸಿದ್ದರು. ಇನ್ನು ಉಳಿದಂತೆ ನಗರಕ್ಕೆ ಪ್ರವೇಶಿಸುವ ವಿವಿಧ ಮಾರ್ಗಗಳಲ್ಲಿ ಯಾವುದೆ ಸಂಚಾರ ದಟ್ಟಣೆ ಉಂಟಾಗಿಲ್ಲ ಎಂದು ಸಂಚಾರಿ ಪೊಲೀಸ್ ಹಿರಿಯ ಅಧಿಕಾರಿಗಳು ತಿಳಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:42 am, Mon, 17 June 24