
ಬೆಂಗಳೂರು, ಜನವರಿ 14: ಕಳೆದ ಕೆಲ ದಿನಗಳಿಂದ ಹೋಲಿಸಿದರೆ ಇಂದು ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (Bengaluru Air Quality) ಸುಧಾರಿಸುತ್ತಿದೆ. ಅಷ್ಟೇ ಅಲ್ಲ, ಮೈಸೂರು, ವಿಜಯಪುರದಲ್ಲೂ ಏರ್ ಕ್ವಾಲಿಟಿ ಸುಧಾರಿಸಿದಂತೆ ಕಾಣುತ್ತಿದೆ. ನಗರಗಳಲ್ಲಿ ವಾಹನಗಳ ಹೊಗೆ, ಧೂಳು ಮತ್ತು ನಿರ್ಮಾಣ ಚಟುವಟಿಕೆಗಳಿಂದ ವಾಯುಮಾಲಿನ್ಯ ಹೆಚ್ಚಾಗಿರುವುದು ಗಮನಕ್ಕೆ ಬರುತ್ತಿದೆ. ಇದರಿಂದ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಹಾಗೂ ಉಸಿರಾಟ ಸಮಸ್ಯೆ ಇರುವವರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಬೆಂಗಳೂರಿನ ಗಾಳಿಯ ಗುಣಮಟ್ಟ 170 ಇದ್ದು, ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಸ್ವಲ್ಪ ಸುಧಾರಣೆ ಕಂಡಿದೆ. ಕಳೆದ ತಿಂಗಳಿನಲ್ಲಿ ಒಮ್ಮೆ 200ರ ಗಡಿ ದಾಟಿದ್ದ ಏರ್ ಕ್ವಾಲಿಟಿ, ನಗರವಾಸಿಗಳಲ್ಲಿ ಆತಂಕ ಮೂಡಿಸಿತ್ತು. ಸಿಲ್ಕ್ ಬೋರ್ಡ್, ವೈಟ್ಫೀಲ್ಡ್ ಸೇರಿದಂತೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿತ್ತು. ಇದೀಗ ವಾತಾವರಣ ಸಲ್ಪ ಸುಧಾರಣೆ ಕಂಡಿದ್ದರೂ, ಏರ್ ಕ್ವಾಲಿಟಿ ಅನಾರೋಗ್ಯಕಾರಿ ಹಂತದಲ್ಲೇ ಇದೆ. ಇದು ಹೀಗೆ ಮುಂದುವರೆದರೆ ಬೆಂಗಳೂರಿನ ಪರಿಸ್ಥಿತಿ ದೆಹಲಿಯಂತಾಗಬಹುದೆಂದು ತಜ್ಞರು ಎಚ್ಚರಿಸಿದ್ದಾರೆ.
ಇಂದು ಬೆಂಗಳೂರಿನ PM2.5 83 ಮತ್ತು PM10 104 ಇದೆ. PM10 ಎನ್ನುವುದು ನಮಗಿಂತ 7 ಪಟ್ಟು ತೆಳುವಾದ ಧೂಳಿನ ಕಣಗಳಾದರೆ, PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.