ನೈಸ್ ರೋಡ್​​ ಸಂಚಾರದ ಬಿಎಂಟಿಸಿ ಬಸ್​ಗಳಿಗೆ ಭಾರೀ ಬೇಡಿಕೆ: ಆದಾಯದ ಇತಿಹಾಸದಲ್ಲೇ ಹೊಸ ದಾಖಲೆ

| Updated By: Ganapathi Sharma

Updated on: Dec 26, 2024 | 8:12 AM

ಬೆಂಗಳೂರಿನ ಬಿಎಂಟಿಸಿ ಸಂಸ್ಥೆಯು ನೈಸ್ ರಸ್ತೆಯಲ್ಲಿ ಆರಂಭಿಸಿರುವ ಬಸ್ ಸೇವೆ ಭಾರಿ ಯಶಸ್ಸು ಕಂಡಿದೆ. ತಿಂಗಳಿಗೆ ಒಂದು ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಸುತ್ತಿರುವ ಈ ಮಾರ್ಗವು, ಐಟಿ/ಬಿಟಿ ಉದ್ಯೋಗಿಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಕಡಿಮೆ ದರದ ಟಿಕೆಟ್ ಮತ್ತು ಸಮಯ ಉಳಿತಾಯದಿಂದಾಗಿ ಜನರು ಈ ಮಾರ್ಗವನ್ನು ಆದ್ಯತೆ ನೀಡುತ್ತಿದ್ದಾರೆ.

ನೈಸ್ ರೋಡ್​​ ಸಂಚಾರದ ಬಿಎಂಟಿಸಿ ಬಸ್​ಗಳಿಗೆ ಭಾರೀ ಬೇಡಿಕೆ: ಆದಾಯದ ಇತಿಹಾಸದಲ್ಲೇ ಹೊಸ ದಾಖಲೆ
ಬಿಎಂಟಿಸಿ ಬಸ್​ (ಸಂಗ್ರಹ ಚಿತ್ರ)
Follow us on

ಬೆಂಗಳೂರು, ಡಿಸೆಂಬರ್ 26: ಬೆಂಗಳೂರಿನ ಪ್ರಮುಖ ಸಂಚಾರ ಜೀವನಾಡಿ ಬಿಎಂಟಿಸಿ. ಪ್ರತಿನಿತ್ಯ ಲಕ್ಷಾಂತರ ಜನ ಬಿಎಂಟಿಸಿ ಬಸ್​​ಗಳಲ್ಲಿ ಸಂಚರಿಸುತ್ತಾರೆ. ಇದೀಗ ಐಟಿಬಿಟಿ ಉದ್ಯೋಗಿಗಳು ಕೂಡ ಬಿಎಂಟಿಸಿ ಬಸ್​​ಗಳಿಗೆ ಫಿದಾ ಆಗಿದ್ದಾರೆ. ನೈಸ್ ರಸ್ತೆಯಲ್ಲಿ ಸಂಚರಿಸುವ ಬಿಎಂಟಿಸಿ ಬಸ್​​ನಲ್ಲಿ ಸಂಚರಿಸುತ್ತಿದ್ದಾರೆ. ಇದರಿಂದಾಗಿ ಬಿಎಂಟಿಸಿಗೆ ಆ ಒಂದು ಮಾರ್ಗದಿಂದಲೇ ಒಂದು ತಿಂಗಳಿಗೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಆದಾಯ ಬರತ್ತಿದ್ದು, ಹೊಸ ದಾಖಲೆ ನಿರ್ಮಿಸಿದೆ.

ಬೆಂಗಳೂರು ಹೊರ ವಲಯದ ಪ್ರಯಾಣಿಕರ ಅನುಕೂಲಕ್ಕಾಗಿ ಒಂದು ವರ್ಷದ ಹಿಂದೆ, ಅಂದರೆ 2023 ಡಿಸೆಂಬರ್ 23 ರಂದು ಪ್ರಯಾಣಿಕರ ಬೇಡಿಕೆ ಮೇರೆಗೆ ನೈಸ್ ರಸ್ತೆಯಲ್ಲಿ ಬಿಎಂಟಿಸಿ ಬಸ್ ಸಂಚಾರ ಆರಂಭಿಸಿತ್ತು. ನೈಸ್ ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್​​ಗೆ, ಮಾದವಾರದಿಂದ ನೈಸ್ ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿಗೆ ಬೆಳಗ್ಗೆ ಆರು ಗಂಟೆಯಿಂದ ರಾತ್ರಿ 6 ಗಂಟೆವರೆಗೆ ಹತ್ತು ನಿಮಿಷಕ್ಕೊಮ್ಮೆ ನಗರದ ಹತ್ತು ವಿವಿಧ ಮಾರ್ಗಗಳಿಂದ 21 ಶೆಡ್ಯೂಲ್ ಗಳಲ್ಲಿ ಬಿಎಂಟಿಸಿ ಬಸ್​​​ಗಳು ಸಂಚರಿಸುತ್ತಿವೆ.

ಪ್ರತಿ ತಿಂಗಳು 3 ಲಕ್ಷ ಜನ ಸಂಚಾರ, ಕೋಟ್ಯಂತರ ಆದಾಯ

ಈ ಬಸ್​​​ಗಳಿಗೆ ಜನರಿಂದ, ಐಟಿ ಬಿಟಿ ಕಂಪನಿಗಳಿಂದ ಭಾರೀ ಬೇಡಿಕೆ ಬಂದಿದ್ದು, ಕಳೆದ ನಾಲ್ಕು ತಿಂಗಳಿಂದ ಪ್ರತಿ ತಿಂಗಳು ಮೂರು ಲಕ್ಷ ಜನ ಈ ಮಾರ್ಗದ ಬಿಎಂಟಿಸಿ ಬಸ್​​ಗಳಲ್ಲಿ ಸಂಚರಿಸುತ್ತಿದ್ದಾರೆ. ಹೀಗಾಗಿ ಬಿಎಂಟಿಸಿಗೆ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದೆ. ನವೆಂಬರ್ ತಿಂಗಳು ಒಂದರಲ್ಲೇ 1,09,73,615 ರೂ. ಆದಾಯ ಬಂದಿದೆ. ಅಂದರೆ, ಪ್ರತಿನಿತ್ಯ 10 ಸಾವಿರ ಜನ ಪ್ರಯಾಣಿಸಿದ್ದಾರೆ.

ದೂರದ ಊರುಗಳಿಂದ ಬೆಂಗಳೂರಿಗೆ ಬರುತ್ತಿದ್ದವರು ಮೆಜೆಸ್ಟಿಕ್‌ ತಲುಪಿ ಅಲ್ಲಿಂದ ಎಲೆಕ್ಟ್ರಾನಿಕ್‌ ಸಿಟಿ ಬಸ್‌ ಹಿಡಿದು ಸಂಚಾರ ನಡೆಸಬೇಕಿತ್ತು. ಇದಕ್ಕೆ ಕನಿಷ್ಠ 2 ಗಂಟೆ ವ್ಯರ್ಥವಾಗುತ್ತಿತ್ತು. ಆದರೆ ನೈಸ್ ಮಾರ್ಗದ ಬಸ್​​ಗಳಿಂದ ಬೆಂಗಳೂರು ನಗರಕ್ಕೆ ತುಮಕೂರು, ಹಾಸನ ಭಾಗಗಳಿಂದ ಬೆಂಗಳೂರಿಗೆ ಆಗಮಿಸುವವರು ಮಾದವಾರದಿಂದಲೇ ನೇರವಾಗಿ ಎಲೆಕ್ಟ್ರಾನಿಕ್‌ ಸಿಟಿ ತಲುಪಲು ಅನುಕೂಲವಾಗಲಿದೆ. ಬಸ್ ಟಿಕೆಟ್ ದರ ಸಹ ಕೇವಲ 65 ರೂಪಾಯಿ ಇದ್ದು, ದುಬಾರಿ ಟೋಲ್ ಕಟ್ಟಿ ಹೋಗುವುದಕ್ಕಿಂತ ಇದು ಸಾವಿರ ಪಾಲು ಅನುಕೂಲವಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಐಟಿ ಬಿಟಿ ಮಂದಿ ಬಿಎಂಟಿಸಿ ಬಸ್​ಗಳನ್ನು ಬಳಸುತ್ತಿದ್ದಾರೆ.

ಇದನ್ನೂ ಓದಿ: ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ

ಒಟ್ಟಿನಲ್ಲಿ ನೈಸ್ ರೋಡ್ ಬಿಎಂಟಿಸಿಯಿಂದ ನಷ್ಟದಲ್ಲಿರೋ ಬಿಎಂಟಿಸಿಗೆ, ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ನೈಸ್ ರೋಡ್​ನಲ್ಲಿ ನಾನ್ ಸ್ಟಾಪ್ ಬಿಎಂಟಿಸಿ ಬಸ್​ಗಳನ್ನು ಓಡಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಚಿಂತನೆ ನಡೆಸುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ