ಬೆಂಗಳೂರಿನ ಮಹಿಳೆಯರೇ ಎಚ್ಚರ: ಮತ್ತೆ ನಗರದಲ್ಲಿ ಸರಗಳ್ಳರು ಹಾವಳಿ!

ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸರಗಳ್ಳತನ ಹೆಚ್ಚಾಗಿದೆ. ಬೈಕ್‌ನಲ್ಲಿ ಬಂದ ಹೆಲ್ಮೆಟ್‌ಧಾರಿ ಖದೀಮರು ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮಾಂಗಲ್ಯ ಸರ ಕಿತ್ತು ಪರಾರಿಯಾಗುತ್ತಿದ್ದಾರೆ. ಬಾಗಲಗುಂಟೆಯಲ್ಲಿ ಇಂದ್ರಾವತಿ ಎಂಬುವವರು 50 ಗ್ರಾಂ ಮಾಂಗಲ್ಯ ಕಳೆದುಕೊಂಡಿದ್ದು, ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಸಾರ್ವಜನಿಕರು ಎಚ್ಚರದಿಂದಿರುವಂತೆ ಸೂಚಿಸಲಾಗಿದೆ.

ಬೆಂಗಳೂರಿನ ಮಹಿಳೆಯರೇ ಎಚ್ಚರ: ಮತ್ತೆ ನಗರದಲ್ಲಿ ಸರಗಳ್ಳರು ಹಾವಳಿ!
ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ

Updated on: Feb 21, 2026 | 6:58 PM

ಬೆಂಗಳೂರು, ಫೆ.21: ರಾಜಧಾನಿಯಲ್ಲಿ (Bangalore chain snatching) ಬಂಗಾರದ ಬೆಲೆ ಗಗನಕ್ಕೇರುತ್ತಿದ್ದಂತೆ, ಇತ್ತ ಸರಗಳ್ಳರ ಹಾವಳಿಯೂ ಮಿತಿಮೀರಿದೆ. ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಬರುವ ಖದೀಮರು, ರಸ್ತೆಯಲ್ಲಿ ಒಂಟಿಯಾಗಿ ಹೋಗುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮಾಂಗಲ್ಯ ಸರ ಕಿತ್ತು ಪರಾರಿಯಾಗುತ್ತಿರುವ ಘಟನೆಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಆಗ್ಗಾಗೆ ಎಚ್ಚರಿಕೆ ನೀಡುತ್ತಿದ್ದಾರೆ. ಇದೀಗ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿಡಿಯೋ ಸ್ಟಾಪ್ ನಿವಾಸಿ ಇಂದ್ರಾವತಿ ಎಂಬುವವರೇ ಈ ಕೃತ್ಯಕ್ಕೆ ಬಲಿಯಾದ ಮಹಿಳೆ. ರಾತ್ರಿ ಸುಮಾರು 8:30ರ ವೇಳೆಗೆ ಇಂದ್ರಾವತಿ ಅವರು ದಿನಸಿ ಅಂಗಡಿಯಿಂದ ಸಾಮಾನು ತರಲು ಒಂಟಿಯಾಗಿ ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ಹೊಂಚು ಹಾಕಿದ್ದ ಇಬ್ಬರು ಕಿರಾತಕರು ಬೈಕ್‌ನಲ್ಲಿ ಬಂದು, ಮೊದಲು ಇವರನ್ನು ದಾಟಿ ಮುಂದೆ ಹೋಗಿದ್ದಾರೆ. ಬಳಿಕ ಯಾರು ಇಲ್ಲದನ್ನು ಖಚಿತಪಡಿಸಿಕೊಂಡು ವಾಪಸ್ ತಿರುಗಿ ಬಂದು, ಇಂದ್ರಾವತಿ ಅವರ ಕುತ್ತಿಗೆಯಲ್ಲಿದ್ದ 50 ಗ್ರಾಂ ತೂಕದ ಮಾಂಗಲ್ಯ ಸರವನ್ನು ಬಲವಂತವಾಗಿ ಕಿತ್ತು ವೇಗವಾಗಿ ಅಲ್ಲಿಂದ ಪರಾರಿಯಾಗಿದ್ದಾರೆ.

ಈ ಇಡೀ ಘಟನೆಯ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಹೆಲ್ಮೆಟ್ ಧರಿಸಿದ್ದರಿಂದ ಆರೋಪಿಗಳ ಗುರುತು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿದೆ. ಇಂದ್ರಾವತಿ ಅವರು ಗಾಬರಿಯಿಂದ ಕಿರುಚಾಡಿದರೂ, ಆರೋಪಿಗಳು ಕ್ಷಣಾರ್ಧದಲ್ಲಿ ಕಣ್ಮರೆಯಾಗಿದ್ದಾರೆ. ಬೈಕ್‌ನಲ್ಲಿ ಬಂದವರು ಏಕಾಏಕಿ ಸರಕ್ಕೆ ಕೈ ಹಾಕಿದರು. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲೇ ಸರ ಕಿತ್ತುಕೊಂಡು ವೇಗವಾಗಿ ಹೊರಟು ಹೋದರು ಎಂದು ಇಂದ್ರಾವತಿ ಹೇಳಿದ್ದಾರೆ.

ಇದನ್ನೂ ಓದಿ: ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ! ಎಲ್ಲವೂ ಸುಟ್ಟು ಭಸ್ಮ

ನಗರದಲ್ಲಿ ಸರಗಳ್ಳರು ಮತ್ತೆ ಸಕ್ರಿಯರಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ. ಬಂಗಾರದ ಬೆಲೆ ಏರಿಕೆಯಾಗಿರುವ ಈ ಸಂದರ್ಭದಲ್ಲಿ ಹಳೇ ಖದೀಮರೇ ಮತ್ತೆ ಆಕ್ಟಿವ್ ಆಗಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ವರದಿ:  ಮಂಜುನಾಥ್

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us