ಮದ್ಯದ ನಶೆಯಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ: ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದ ಯುವಕರು ಜೈಲುಪಾಲು

ಹೊಸ ವರ್ಷದ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಇಬ್ಬರು ಯುವಕರು ಡಿಸೆಂಬರ್ 31 ರಂದು ರಾತ್ರಿ ಕಂಠ ಪೂರ್ತಿ ಕುಡಿದಿದ್ದರು. ಸೀದಾ ಮನೆಗೆ ಹೋಗುವ ಬದಲು ರಸ್ತೆಯಲ್ಲಿ‌‌ ನಿಂತಿದ್ದ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದ್ದರು. ಪ್ರಶ್ನೆ ಮಾಡಿದ್ದ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದರು. ಸಾಲದಕ್ಕೆ ಪೊಲೀಸ್ ಠಾಣೆಯಲ್ಲಿ ಆವಾಜ್ ಹಾಕಿ ಇದೀಗ ಜೈಲು ಸೇರಿದ್ದಾರೆ.

ಮದ್ಯದ ನಶೆಯಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ: ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದ ಯುವಕರು ಜೈಲುಪಾಲು
ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದ ಯುವಕರು ಜೈಲುಪಾಲು
Edited By:

Updated on: Jan 03, 2026 | 4:03 PM

ಬೆಂಗಳೂರು, ಜನವರಿ 3: ಹೊಸ ವರ್ಷ (New Year) ಬರಮಾಡಿಕೊಳ್ಳಲು ಬೆಂಗಳೂರಿನ (Bangalore) ಜನ ತುದಿಗಾಲಲ್ಲಿ ನಿಂತಿದ್ದರು. ಪಾರ್ಟಿ ಪಬ್ಬು ಎಂದು ಎಂಜಾಯ್ ಮಾಡಿದ್ದರು. ರಾತ್ರಿ ಇಡೀ ಕುಣಿದು ಕುಪ್ಪಳಿಸಿದ್ದರು. ಆ ಸಂದರ್ಭದಲ್ಲಿ ಮದ್ಯದ ನಶೆಯಲ್ಲಿದ್ದ ಇಬ್ಬರು ಯುವಕರು ಯಡವಟ್ಟು ಮಾಡಿಕೊಂಡು ಇದೀಗ ಜೈಲು ಪಾಲಾಗಿದ್ದಾರೆ.

ತಮಿಳುನಾಡು ಮೂಲದ 22 ವರ್ಷದ ಅನ್ಶ್ ಮೆಹ್ತಾ ಮತ್ತು ಪರ್ವ್ ರಾತಿ ಬೊಮ್ಮನಹಳ್ಳಿಯಲ್ಲಿ ಮನೆ ಮಾಡಿಕೊಂಡಿದ್ದು, ಖಾಸಗಿ ಕಂಪನಿ ಉದ್ಯೋಗಿಗಳು. 31 ರಂದು ಸಂಜೆ ಪಾರ್ಟಿಗೆ ಹೋಗಿದ್ದ ಆಸಾಮಿಗಳು ಕುಣಿದು ಕುಪ್ಪಳಿಸಿದ್ದಾರೆ. ಹೀಗೆ ಜಾಲಿ ಮಾಡುತ್ತಾ ಮನೆ ಸೇರಿಕೊಂಡಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ಈ ಕಿಡಿಗೇಡಿಗಳು ಜನವರಿ 1 ರಂದು ಮುಂಜಾನೆ 1.40 ರ ಸುಮಾರಿಗೆ ‘ಇಂಡಿಯನ್ ಎಕ್ಸ್​ಪ್ರೆ’ಸ್ ಬಳಿ ಇರುವ ಸೂಜಿ ಪಬ್ ಬಳಿ‌ ಕ್ಯಾಬ್​ಗಾಗಿ ಕಾಯುತ್ತಿದ್ದ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.

ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆ

ಯುವತಿಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಬೀಟ್ ಪೊಲೀಸ್ ಸಿಬ್ಬಂದಿ ರವಿ ಪ್ರಶ್ನಿಸಿದ್ದರು. ಆದರೂ ಸುಮ್ಮನಾಗದ ಕಿಡಿಗೇಡಿಗಳು ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆ ಮಾಡಿದ್ದು ರಿಫ್ಲೆಕ್ಟರ್ ಜಾಕೆಟ್ ಹರಿದಿದ್ದರು. ನಂತರ ಇತರೆ ಸಿಬ್ಬಂದಿ ಸಹಾಯದೊಂದಿಗೆ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು, ತಕ್ಷಣ ವಿಧಾನಸೌಧ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಅಷ್ಟಕ್ಕೂ ಸುಮ್ಮನಾಗದ ಯುವಕರು ಪೊಲೀಸ್ ಠಾಣೆಯಲ್ಲಿಯೂ ಇನ್ಸ್​​ಪೆಕ್ಟರ್​​ಗೆ ಆವಾಜ್ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಠಾಣೆಯಲ್ಲಿ ಕೂರಿಸಿಕೊಂಡ ಪೊಲೀಸರು ಎಫ್ಐಆರ್ ದಾಖಲಿಸಿ ಇಬ್ಬರನ್ನೂ ಜೈಲಿಗೆ ಅಟ್ಟಿದ್ದಾರೆ‌.

ಇದನ್ನೂ ಓದಿ: ರಾತ್ರಿ ಗಂಡನಿಲ್ಲದ ವೇಳೆ ಪ್ರೇಮಿಯನ್ನು ಮನೆಗೆ ಕರೆದು ಗುಪ್ತಾಂಗ ಕತ್ತರಿಸಿದ ಮಹಿಳೆ!

ತಾನಾಯ್ತು ತಮ್ಮ ಕೆಲಸ ಆಯ್ತು ಅಂತಾ ಹೋಗಿದ್ದಿದ್ದರೆ‌ ಯುವಕರು ಜೈಲಿಗೆ ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ. ಆದ್ರೆ ಮದ್ಯದ ನಶೆಯಲ್ಲಿ ಮಾಡಬಾರದ್ದನ್ನು ಮಾಡಿ ಈಗ ಕಂಬಿ ಎಣಿಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ