ಬೆಂಗಳೂರು, ಡಿಸೆಂಬರ್ 13: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗಾಗಲೇ ಅಭಿವೃದ್ಧಿಯ ಹೆಸರಿನಲ್ಲಿ ನೂರಾರು ಮರಗಳ ಮಾರಣಹೋಮ ಮಾಡಲಾಗಿದೆ. ಇದರಿಂದ ಈ ವರ್ಷ ಬೆಂಗಳೂರಿನಲ್ಲಿ ಜನರು ಬಿಸಿಲ ಬೇಗೆಯಲ್ಲಿ ತತ್ತರಿಸಿ ಹೋಗುವಂತಾಗಿತ್ತು. ಇದೀಗ ಮತ್ತೆ ನಗರದಲ್ಲಿರುವ ಸಾವಿರಾರು ಮರಗಳನ್ನು ಕಡಿಯಲು ಸಿದ್ಧತೆ ಆಗಿದೆ ಎಂಬ ಆರೋಪ ಕೇಳಿಬಂದಿದೆ.
ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗಾಗಿ ಬರೋಬ್ಬರಿ 11,137 ಮರಗಳನ್ನು ಕಡಿಯಲು ಮತ್ತು ಸ್ಥಳಾಂತರಿಸಲು ತಿರ್ಮಾನ ಮಾಡಲಾಗಿದೆ. 1ನೇ ಕಾರಿಡಾರ್ ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ 32.15 ಕಿಲೋ ಮೀಟರ್ ಮಾರ್ಗದಲ್ಲಿ 21 ನಿಲ್ದಾಣಗಳಿರಲಿವೆ. 2ನೇ ಕಾರಿಡಾರ್ ಹೊಸಹಳ್ಳಿಯಿಂದ ಕಡಬಗೆರೆಯ ವರೆಗೆ 12.50 ಕಿಲೋ ಮೀಟರ್ ಇದ್ದು, 9 ನಿಲ್ದಾಣಗಳು ಇರಲಿವೆ. ಒಟ್ಟು 44.65 ಕಿ.ಮೀ ಉದ್ದವಿರುವ ಎರಡು ಮೆಟ್ರೋ ಮಾರ್ಗ ಇರಲಿವೆ. 15,611 ಕೋಟಿ ರೂ. ವೆಚ್ಚದಲ್ಲಿ ಎರಡು ಮಾರ್ಗದ ಕಾಮಗಾರಿ ನಡೆಯಲಿದೆ.
ಅಷ್ಟೊಂದು ಮರಗಳನ್ನು ಕಡಿಯುವುದಿಲ್ಲ. 11,137 ಮರಗಳು ಮೂರನೇ ಹಂತದ ಕಾಮಗಾರಿ ಜಾಗದಲ್ಲಿ ಬರುತ್ತವೆ ಎಂಬುದಷ್ಟೇ ಮಾಹಿತಿ. ಅದರ ಅರ್ಥ ಅವುಗಳನ್ನೆಲ್ಲ ಕಡಿಯುತ್ತೇವೆ ಎಂದಲ್ಲ. ಲೆಕ್ಕ ಹಾಕಲಾಗಿರುವುದರಲ್ಲಿ ಸಣ್ಣದಾದ ಗಿಡದಿಂದ ಹಿಡಿದು ದೊಡ್ಡ ಮರದವರೆಗೆ ಲೆಕ್ಕ ಹಾಕಲಾಗಿರುತ್ತದೆ ಎಂದು ಬಿಎಂಆರ್ಸಿಎಲ್ ಹಿರಿಯ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಸ್ಪಷ್ಟನೆ ನೀಡಿದ್ದಾರೆ.
ಮತ್ತೊಂದೆಡೆ, ಈ ಎರಡು ಮಾರ್ಗಗಳಲ್ಲೂ ಮರಗಳನ್ನು ಕಡಿಯಲು ಈಗಾಗಲೇ ಬಿಎಂಆರ್ಸಿಎಲ್ ಸಿದ್ಧತೆ ಮಾಡಿಕೊಂಡಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ. ಮರಗಳನ್ನು ಕಡಿಯುವ ಮುನ್ನ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕು. ಏಕಾಏಕಿ ಮರಗಳನ್ನು ಕಡಿಯಲು ಮುಂದಾಗಬಾರದು. ಮರಗಳನ್ನು ಸ್ಥಳಾಂತರಿಸಲು ಮುಂದಾಗಬೇಕು. ಮೆಟ್ರೋಕ್ಕಾಗಿ ಕಡಿಯುವ ಮರಗಳ ಬದಲಿಗೆ ಬೇರೆಡೆ ಗಿಡಗಳನ್ನು ನೆಡಲು ಬೆಂಗಳೂರಿನಲ್ಲಿ ಜಾಗವಿಲ್ಲ ಎಂದು ಪರಿಸರ ಹೋರಾಟಗಾರ ವಿಜಯ್ ನಿಶಾಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್: ಹೊಸ ವರ್ಷದಿಂದ ಮೆಟ್ರೋ ಟಿಕೆಟ್ ದರ ಹೆಚ್ಚಳ ಬಹುತೇಕ ಖಚಿತ
ಒಟ್ಟಿನಲ್ಲಿ ಮೂರನೇ ಹಂತದ ನಮ್ಮ ಮೆಟ್ರೋ ಕಾಮಗಾರಿಗಾಗಿ ಬರೋಬ್ಬರಿ 11 ಸಾವಿರ ಮರಗಳನ್ನು ಕಡಿಯಲು ಮೆಟ್ರೋ ಮುಂದಾಗಿದೆ ಎಂಬುದು ಪರಿಸರ ಹೋರಾಟಗಾರರ ಆರೋಪ, ಆಕ್ರೋಶ. ಆದರೆ ನಮ್ಮ ಮೆಟ್ರೋ ಮಾತ್ರ, ಅಷ್ಟು ಮರಗಳನ್ನು ಕಡಿಯುವುದಿಲ್ಲ ಎನ್ನುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ