
ಬೆಂಗಳೂರು, ಮಾರ್ಚ್ 31: ಏಪ್ರಿಲ್ 1 ರಿಂದ ಬೆಂಗಳೂರು ನಿವಾಸಿಗಳಿಗೆ ಡಬಲ್ ಡಬಲ್ ಶಾಕ್ ಎದುರಾಗಲಿದೆ. ಹಾಲು, ವಿದ್ಯುತ್ ದರ ಏರಿಕೆ ಜಾರಿಗೆ ಬರಲಿದೆ. ಅದರೊಂದಿಗೆ, ಕಸಕ್ಕೂ ತೆರಿಗೆ (Garbage Tax) ಪಾವತಿ ಮಾಡಬೇಕಾಗಿ ಬರಲಿದೆ. ಮನೆ, ಅಂಗಡಿ ಮುಂಗಟ್ಟಿನ ಕಸಕ್ಕೂ ತೆರಿಗೆ ಪಾವತಿ ಮಾಡಬೇಕು ಎಂದು ಬೆಂಗಳೂರು ಮಹಾನಗರ ಪಾಲಿಕೆ (BBMP) ಸೂಚಿಸಿದೆ. ಈ ವಿಚಾರವಾಗಿ ಬಿಬಿಎಂಪಿ ಬಜೆಟ್ನಲ್ಲೂ ಘೋಷಣೆ ಮಾಡಲಾಗಿದೆ. ಈ ಮೂಲಕ 600 ಕೋಟಿ ರೂಪಾಯಿ ಆದಾಯ ಸಂಗ್ರಹಕ್ಕೆ ಬಿಬಿಎಂಪಿ ಗುರಿ ಹಾಕಿಕೊಂಡಿದೆ.
ಅಂಗಡಿ-ಮುಂಗಟ್ಟುಗಳಲ್ಲಿ ಪ್ರತಿ ಕೆಜಿ ಕಸಕ್ಕೆ 12 ರೂಪಾಯಿ ತೆರಿಗೆ ವಸೂಲಿಗೆ ಪಾಲಿಕೆ ಸಜ್ಜಾಗಿದೆ. ಪ್ರತಿ ತಿಂಗಳು ಕಸ ಸಂಗ್ರಹ ಹಾಗೂ ವಿಲೇವಾರಿ ವೆಚ್ಚ ಹೆಚ್ಚಾಗುತ್ತಿದ್ದು, ಈ ಕಾರಣದಿಂದ ತೆರಿಗೆ ವಿಧಿಸಲಾಗುತ್ತಿದೆ ಎಂದು ಬಿಬಿಎಂಪಿ ಹೇಳಿದೆ. ಕಟ್ಟಡದ ವಿಸ್ತೀರ್ಣದ ಆಧಾರತದ ಮೇಲೆ ಕಸದ ಶುಲ್ಕ ನಿಗದಿಪಡಿಸಲಾಗುತ್ತದೆ. ಆಸ್ತಿ ತೆರಿಗೆ ಜೊತೆಯೇ ಕಸ ತೆರಿಗೆಯನ್ನೂ ಪಾಲಿಕೆ ಸಂಗ್ರಹ ಮಾಡಲಿದೆ.
ಕಟ್ಟಡದ ವಿಸ್ತೀರ್ಣದ ಮೇಲೆ ತೆರಿಗೆ ನಿಗದಿಪಡಿಸಲಾಗುತ್ತದೆ. ಬಿಬಿಎಂಪಿ ಮೂಲಗಳ ಪ್ರಕಾರ, 600 ಚದರ ಅಡಿವರೆಗಿನ ಕಟ್ಟಡಗಳಿಗೆ ತಿಂಗಳಿಗೆ 10 ರೂ. ತೆರಿಗೆ ವಿಧಿಸಿಲಾಗುತ್ತದೆ. 600 ಚದರ ಅಡಿಯಿಂದ 1000 ಚದರ ಅಡಿವರೆಗಿನ ಕಟ್ಟಡಗಳಿಗೆ ತಿಂಗಳಿಗೆ 50 ರೂ. ತೆರಿಗೆ ನಿಗದಿಪಡಿಸಲಾಗುತ್ತದೆ. ಸಾವಿರದಿಂದ 2 ಸಾವಿರ ಚದರ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 100 ರೂ, 2 ಸಾವಿರದಿಂದ 3 ಸಾವಿರ ಚದರ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 150 ರೂ, 3 ಸಾವಿರ ದಿಂದ 4 ಸಾವಿರ ಚದರ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 200 ರೂ. ಹಾಗೂ 4 ಸಾವಿರ ಚದರ ಅಡಿಗಳ ಮೇಲ್ಪಟ್ಟ ಕಟ್ಟಡಗಳಿಗೆ ತಿಂಗಳಿಗೆ 400 ರೂ. ಕಸ ತೆರಿಗೆ ವಿಧಿಸಲಾಗುತ್ತದೆ.
ಇದನ್ನೂ ಓದಿ: ಬೆಂಗಳೂರು: ಮನೆ ಕಸಕ್ಕೂ ಕಟ್ಟಬೇಕು ತೆರಿಗೆ? ವಾರ್ಷಿಕ 600 ಕೋಟಿ ರೂ. ಸಂಗ್ರಹಕ್ಕೆ ಯೋಚನೆ
ಬೆಂಗಳೂರಿನಲ್ಲಿ ‘ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆ (BSWML)’ ಪ್ರತೀ ಮನೆ ಬಾಗಿಲಿಗೆ ತೆರಳಿ ತ್ಯಾಜ್ಯ ಸಂಗ್ರಹಿಸುವುದು ಮತ್ತು ವಿಲೇವಾರಿ ಮಾಡುತ್ತದೆ. ಹೀಗಾಗಿ ಈ ಶುಲ್ಕ ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ತಿಳಿಸಿತ್ತು.