
ಬೆಂಗಳೂರು, ಫೆಬ್ರವರಿ 7: ರಕ್ಷಣಾ ಸಚಿವಾಲಯ ಆಯೋಜಿಸುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಮತ್ತು ರಾಜ್ಯ ಸರ್ಕಾರ ಆಯೋಜಿಸುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ದಿನಗಣನೆ ಆರಂಭವಾಗಿದೆ. ಈ ಎರಡು ಕಾರ್ಯಕ್ರಮಗಳ ಕಾರಣ ಬೆಂಗಳೂರಿಗೆ ಬೇರೆ ರಾಜ್ಯಗಳ, ವಿದೇಶಗಳ ಜನ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಪರಿಣಾಮವಾಗಿ ನಗರದಾದ್ಯಂತ ಹೋಟೆಲ್ ಬುಕಿಂಗ್‌ಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ದೇವನಹಳ್ಳಿ ಮತ್ತು ಆಂಧ್ರಪ್ರದೇಶದ ಅನಂತಪುರದಂತಹ ಬೆಂಗಳೂರಿಗೆ ಸಮೀಪದ ಪ್ರದೇಶಗಳಲ್ಲಿಯೂ ಹೋಟೆಲ್, ಲಾಡ್ಜ್ ಕಾಯ್ದಿರಿಸಲಾಗುತ್ತಿದೆ.
ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ, ಹೋಟೆಲ್ ರೂಮ್ಗಳ ದರ ಬೆಂಗಳೂರು-ಚೆನ್ನೈ ವಿಮಾನ ಟಿಕೆಟ್ ಬೆಲೆಯನ್ನೂ ಮೀರಿದೆ! ಇದು ಕೆಲವು ಅತಿಥಿಗಳು ನಗರಗಳ ನಡುವೆ ವಿಮಾನ ಪ್ರಯಾಣವನ್ನೇ ಉತ್ತಮ ಆಯ್ಕೆಯಾಗಿ ಪರಿಗಣಿಸಲು ಪ್ರೇರೇಪಿಸಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಹೋಟೆಲ್ ರೂಂ ದರಗಳು ಗಣನೀಯ ಮಟ್ಟದಲ್ಲಿ ಏರಿಕೆ ಕಂಡಿವೆ. ಅನೇಕ ಹೋಟೆಲ್, ಲಾಡ್ಜ್ಗಳ ರೂಂ ಈಗಾಗಲೇ ಸಂಪೂರ್ಣವಾಗಿ ಕಾಯ್ದಿರಿಸಲಾಗಿವೆ. ಹೆಚ್ಚಾದ ಬೇಡಿಕೆಯನ್ನು ಬಂಡವಾಳ ಮಾಡಿಕೊಂಡು, ಹೋಟೆಲ್ ಮಾಲೀಕರು ಕೊಠಡಿ ಬೆಲೆಗಳನ್ನು ಗಮನಾರ್ಹವಾಗಿ ಹೆಚ್ಚಿಸಿದ್ದಾರೆ. ಕೆಲವು ಹೋಟೆಲ್‌ಗಳು ತಮ್ಮ ಸಾಮಾನ್ಯ ಬೆಲೆಗಳಿಗಿಂತ ಶೇಕಡಾ 15 ರಷ್ಟು ದರಗಳನ್ನು ಹೆಚ್ಚಿಸಿವೆ.
ಸ್ಟಾರ್-ರೇಟೆಡ್ ಹೋಟೆಲ್‌ಗಳಲ್ಲಿನ ಕೊಠಡಿಗಳ ಬೆಲೆ ಈಗ 15,000 ರೂ. ವರಗೆ ಏರಿಕೆಯಾಗಿವೆ. ಇದು ಇನ್ನೂ ಶೇ 10 ರಿಂದ 15 ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹೋಟೆಲ್ ಮಾಲೀಕರ ಸಂಘದ ಸದಸ್ಯರೊಬ್ಬರು ತಿಳಿಸಿರುವುದಾಗಿ ಕೆಲವು ಪತ್ರಿಕಾ ವರದಿಗಳು ಉಲ್ಲೇಖಿಸಿವೆ.
ಬೆಲೆ ಏರಿಕೆ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ದೇವನಹಳ್ಳಿ, ಚಿಕ್ಕಬಳ್ಳಾಪುರ ಮತ್ತು ನೆರೆಯ ಆಂಧ್ರಪ್ರದೇಶದ ಕೆಲವು ಪ್ರದೇಶಗಳಲ್ಲಿಯೂ ಹೋಟೆಲ್ ಕೊಠಡಿಗಳ ದರ ಏರಿಕೆಯಾಗಿದೆ. ಹೋಟೆಲ್ ಕೊಠಡಿಗಳ ಬೇಡಿಕೆ ಬೆಂಗಳೂರಿನ ನಗರ ಮಿತಿಯನ್ನು ಮೀರಿ ವಿಸ್ತರಿಸಿದೆ ಎಂದು ಬೆಂಗಳೂರು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಸಂಘದ ಕಾರ್ಯದರ್ಶಿ ವೀರೇಂದ್ರ ಕಾಮತ್ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಉಲ್ಲೇಖಿಸಿದೆ. ಚಿಕ್ಕಬಳ್ಳಾಪುರ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಕೂಡ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.
ಇದನ್ನೂ ಓದಿ: ಏರ್ ಶೋ: ಬೆಂಗಳೂರಿನಲ್ಲಿ ಐದು ದಿನಗಳ ಕಾಲ ರೂಮ್, ಕ್ಯಾಬ್ ಸಿಗೋದು ಕಷ್ಟ!
ಯಲಹಂಕ ವಾಯುಪಡೆ ನಿಲ್ದಾಣ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿನ ರೆಸ್ಟೋರೆಂಟ್‌ಗಳು ಸಹ ಸಿದ್ಧತೆ ಮಾಡಿಕೊಳ್ಳುತ್ತಿವೆ. ಕಾರ್ಯಕ್ರಮಕ್ಕೆ ಬರುವವರನ್ನು ಆಕರ್ಷಿಸಲು ವಿಶೇಷ ಕೊಡುಗೆಗಳು, ಕಸ್ಟಮೈಸ್ ಮಾಡಿದ ಮೆನುಗಳು ಮತ್ತು ಪ್ರಚಾರ ಪ್ಯಾಕೇಜ್‌ಗಳನ್ನು ಪರಿಚಯಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ