ಲಾಲ್ ಬಾಗ್ ಭೇಟಿ ನೀಡುವವರಿಗೆ ಕಹಿ ಸುದ್ದಿ: ಪ್ರವೇಶ ಶುಲ್ಕ, ಪಾರ್ಕಿಂಗ್ ಫೀ ಹೆಚ್ಚಳ

| Updated By: Ganapathi Sharma

Updated on: Nov 06, 2024 | 7:37 AM

ಸಸ್ಯಕಾಶಿ ಲಾಲ್ ಬಾಗ್ ಪ್ರವಾಸಿಗರನ್ನು ಕೈಬೀಸಿ ಕರೆಯುವ ಸ್ಥಳ. ಪ್ರತಿದಿನ ಲಕ್ಷಂತರ ಪ್ರಾವಾಸಿಗರು ಲಾಲ್ ಬಾಗ್​​ಗೆ ಬಂದು ಹೋಗುತ್ತಾರೆ. ಆದರೆ ಇನ್ನುಮುಂದೆ ಲಾಲ್ ಬಾಗ್​​ಗೆ ಬರುವವರಿಗೂ ಬೆಲೆ ಏರಿಕೆಯ ಬಿಸಿ ಕಾಡಲಿದೆ. ಪ್ರವೇಶ ಹಾಗೂ ಪಾರ್ಕಿಂಗ್ ಶುಲ್ಕ ಹೆಚ್ಚಾಗಿದೆ. ವಿವರ ಇಲ್ಲಿದೆ.

ಲಾಲ್ ಬಾಗ್ ಭೇಟಿ ನೀಡುವವರಿಗೆ ಕಹಿ ಸುದ್ದಿ: ಪ್ರವೇಶ ಶುಲ್ಕ, ಪಾರ್ಕಿಂಗ್ ಫೀ ಹೆಚ್ಚಳ
ಲಾಲ್ ಬಾಗ್ ಪ್ರವೇಶ ಶುಲ್ಕ, ಪಾರ್ಕಿಂಗ್ ಫೀ ಹೆಚ್ಚಳ
Follow us on

ಬೆಂಗಳೂರು, ನವೆಂಬರ್ 6: ಬೆಂಗಳೂರಿನ ಸಸ್ಯಕಾಶಿ ಲಾಲ್ ಬಾಗ್ ಪ್ರವಾಸಿಗರ ಆಕರ್ಷಣೆಯ ಕೇಂದ್ರ. ‌ಹೀಗಾಗಿ ಬೆಂಗಳೂರು ಅಷ್ಟೇ ಅಲ್ಲದೆ ಬೇರೆ ಬೇರೆ ಭಾಗದಿಂದಲೂ ಪ್ರವಾಸಿಗರು ಬರುತ್ತಾರೆ. ಜೊತೆಗೆ ಇಷ್ಟು ದಿನ ಲಾಲ್ ಬಾಗ್ ಪಾರ್ಕಿಂಗ್ ಶುಲ್ಕ ಕೂಡ ಕಡಿಮೆ ಇತ್ತು. ಹೀಗಾಗಿ ಕುಟುಂಬ ಸಮೇತ ಪ್ರವಾಸಿಗರು ಬಂದು ಪಾರ್ಕ್​​​ನಲ್ಲಿ ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದರು. ಆದರೆ ಈಗ ಪ್ರವೇಶ ಶುಲ್ಕ, ಕಾರ್ ಪಾರ್ಕಿಂಗ್, ಮಕ್ಕಳ‌ ಎಂಟ್ರಿ ಶುಲ್ಕ ಕೂಡ ಜಾಸ್ತಿ ಮಾಡಲಾಗಿದೆ.

ಐದು ವರ್ಷಗಳಿಗೊಮ್ಮೆ ಲಾಲ್ ಬಾಗ್ ತೋಟಗಾರಿಕೆ ಇಲಾಖೆ ಪ್ರವೇಶ ಶುಲ್ಕವನ್ನು ಜಾಸ್ತಿ ಮಾಡುತ್ತದೆ. ಅದರಂತೆ 2018 ರಲ್ಲಿ ಲಾಲ್ ಬಾಗ್​​ನಲ್ಲಿ ಪ್ರವೇಶ ಶುಲ್ಕವನ್ನು 20 ರಿಂದ 30 ರೂ.ಗೆ ಜಾಸ್ತಿ ಮಾಡಲಾಗಿತ್ತು. ಇದೀಗ ಆರು ವರ್ಷದ ಬಳಿಕ ಎಂಟ್ರಿ ಫೀ, ಪಾರ್ಕಿಂಗ್ ಫೀ, ಮಕ್ಕಳ ಎಂಟ್ರಿ ಫೀ ಕೂಡ ಜಾಸ್ತಿಯಾಗಿದೆ.

ಪರಿಷ್ಕೃತ ದರ ಎಷ್ಟು?

ಈವರೆಗೆ ಪ್ರವೇಶ ಶುಲ್ಕ 30 ರೂ. ಇದ್ದು, ಈಗ 50 ರೂ.ಗೆ ಟಿಕೆಟ್ ದರ ಏರಿಕೆ ಮಾಡಲಾಗಿದೆ.‌ ಇನ್ನು, ಕಾರ್ ಪಾರ್ಕಿಂಗ್ ಶುಲ್ಕವನ್ನು 50 ರೂ.ನಿಂದ 60 ರೂ.ಗೆ ಏರಿಕೆ ಮಾಡಲಾಗಿದೆ.‌ ಮಕ್ಕಳ ಪ್ರವೇಶ ಶುಲ್ಕ 20 ರೂ ಇದ್ದುದನ್ನು 30 ರೂ.ಗೆ ಏರಿಕೆ ಮಾಡಲಾಗಿದೆ.‌

ದರ ಏರಿಕೆ ಪ್ರಮಾಣದಲ್ಲೂ ಹೆಚ್ಚಳ

ಆರು ವರ್ಷಗಳ ಹಿಂದೆ ಪ್ರವೇಶ ಶುಲ್ಕವನ್ನು 20 ರೂ.ಗಳಿಂದ 30 ರೂ.ಗೆ ಜಾಸ್ತಿ ಮಾಡಲಾಗಿತ್ತು. ಆದರೆ ಈಗ, 30 ರೂ.ನಿಂದ 50 ರೂ.ಗೆ ಏರಿಕೆ ಮಾಡಲಾಗಿದೆ. ಅಂದರೆ ದರ ಏರಿಕೆಯ ಪ್ರಮಾಣವೂ ಹೆಚ್ಚಳವಾಗಿದೆ. ಇದಕ್ಕೆ ಪ್ರವಾಸಿಗರು‌ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಪಾರ್ಕ್​ಗಳಿಗೆ ಸಾಮಾನ್ಯವಾಗಿ ಬಡವರ್ಗದ ಕುಟುಂಬಗಳೇ ಹೆಚ್ಚಾಗಿ ಬರುತ್ತವೆ. ಒಂದೇ ಕುಟುಂಬದ ಐವರು ಬಂದರೆ ಟಿಕೆಟ್​​ಗೆ 250 ರೂ. ಕೊಟ್ರೆ ಬೇರೆ ಕಡೆ ಏನು ನೋಡಬೇಕು? ಲಾಲ್ ಬಾಗ್ ಸರ್ಕಾರ ವ್ಯಾಪ್ತಿಯಲ್ಲಿದೆ. ಶುಲ್ಕ ಇಷ್ಟೊಂದು ಜಾಸ್ತಿ ಮಾಡಿದರೆ ಸರ್ಕಾರಿ ಜಾಗಗಳಿಗೂ ಖಾಸಗಿ ಜಾಗಗಳಿಗೂ ವ್ಯಾತ್ಯಾಸ ಏನು ಇರುತ್ತದೆ ಎಂದು ಅಂತ ಪ್ರವಾಸಿಗರು ಪ್ರಶ್ನಿಸುತ್ತಿದ್ದಾರೆ.

ಲಾಲ್ ಬಾಗ್ ನಿರ್ದೇಶಕರು ಹೇಳುವುದೇನು?

ಈ ಕುರಿತಾಗಿ ಲಾಲ್ ಬಾಗ್ ನಿರ್ದೇಶಕರು ಪ್ರತಿಕ್ರಿಯಿಸಿದ್ದು, ವರ್ಷದಿಂದ ವರ್ಷಕ್ಕೆ ಪಾರ್ಕ್​ಗಳ ನಿರ್ವಹಣಾ ವೆಚ್ಚ ಜಾಸ್ತಿಯಾಗುತ್ತಲೇ ಇದೆ. ಪ್ರತಿ ಐದು ವರ್ಷಗಳಿಗೊಮ್ಮೆ ನಾವು ಎಂಟ್ರಿ, ಪಾರ್ಕಿಂಗ್ ಫೀಜ್ ಜಾಸ್ತಿ ಮಾಡುತ್ತೇವೆ. ಅದರಂತೆ ಈಗಲೂ ಕೂಡ ಜಾಸ್ತಿ ಮಾಡಿದ್ದೇವೆ.‌ ಪ್ರತಿದಿನ ಲಾಲ್ ಬಾಗ್​ಗೆ 3 ಸಾವಿರಕ್ಕೂ ಹೆಚ್ಚು ಜನರು ಭೇಟಿಕೊಡುತ್ತಾರೆ. ಹೀಗಿವಾಗ ಲಾಲ್ ಬಾಗ್ ನಿರ್ವಹಣೆ ಮಾಡುವ ಹೊಣೆ ನಮ್ಮ ಮೇಲೆ ಇರುತ್ತದೆ. ಅಲ್ಲದೇ ನೂರಾರು ಜನರು ನಮ್ಮಲ್ಲಿ‌ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಶುಲ್ಕ ಜಾಸ್ತಿ ಮಾಡಿದ್ದೇವೆ. ‌ಬೇರೆ ಬೇರೆ ಪ್ರವಾಸಿ ಸ್ಥಳಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಶುಲ್ಕ ಕಡಿಮೆಯೇ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ರಾಯರ ದರ್ಶನ ಪಡೆದ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್

ಒಟ್ಟಿನಲ್ಲಿ ಇಷ್ಟು ದಿನ ಕಡಿಮೆ ಪ್ರವೇಶ ಶುಲ್ಕ ಇದೆ ಎಂದು ಸಾಕಷ್ಟು ಜನರು ಲಾಲ್ ಬಾಗ್​ಗೆ ಬಂದು ವೀಕ್ಷಣೆ ಮಾಡುತ್ತಿದ್ದರು. ಈಗ ಪ್ರವೇಶ ಶುಲ್ಕ ಕೇಳಿ ಶಾಕ್ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಎಷ್ಟು ಇರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:36 am, Wed, 6 November 24