ಜಿಬಿಎ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಿಜೆಪಿ ಮುಖಂಡನ ಕಾಲು ಮುರಿತ: 6 ಅಡಿ ಆಳದ ಚರಂಡಿಗೆ ಬಿದ್ದ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ

ಸಂಜಯನಗರದಲ್ಲಿ ತೆರೆದ ಚರಂಡಿಗೆ ಬಿದ್ದು ಬಿಜೆಪಿ ಮುಖಂಡ ಬೇಳೂರು ರಾಘವೇಂದ್ರ ಶೆಟ್ಟಿ ಕಾಲು ಮುರಿದುಕೊಂಡಿದ್ದಾರೆ. GBA ಸಿಬ್ಬಂದಿ ಹೂಳು ಎತ್ತಿದ ನಂತರ ಚೇಂಬರ್ ಮುಚ್ಚದೇ ನಿರ್ಲಕ್ಷ್ಯ ತೋರಿದ್ದೇ ದುರ್ಘಟನೆಗೆ ಕಾರಣ. ಈ ಘಟನೆ ಮಹಾನಗರ ಪಾಲಿಕೆ ಆಡಳಿತದ ಬೇಜವಾಬ್ದಾರಿತನವನ್ನು ಎತ್ತಿ ತೋರಿಸಿದ್ದು, ಸಾರ್ವಜನಿಕ ಸುರಕ್ಷತೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ.

ಜಿಬಿಎ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಿಜೆಪಿ ಮುಖಂಡನ ಕಾಲು ಮುರಿತ: 6 ಅಡಿ ಆಳದ ಚರಂಡಿಗೆ ಬಿದ್ದ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ
ಸಂಜಯನಗರ GBA ನಿರ್ಲಕ್ಷ್ಯ

Updated on: Jul 18, 2026 | 1:18 PM

ಬೆಂಗಳೂರು, ಜು.18: ರಾಜಧಾನಿಯ ಸಂಜಯನಗರದಲ್ಲಿ ಮಹಾನಗರ ಜಂಟಿ ಆಡಳಿತ (ಜಿಬಿಎ) ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಮತ್ತೊಂದು ಸಾರ್ವಜನಿಕ ಅವಘಡ ಸಂಭವಿಸಿದೆ. ಚರಂಡಿಯ ಹೂಳು ಎತ್ತಿದ ಬಳಿಕ ಚೇಂಬರ್ ಅನ್ನು ಮುಚ್ಚದೇ ಹಾಗೇ ಬಿಟ್ಟಿದ್ದರಿಂದಾಗಿ, ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ಕರ್ನಾಟಕ ರಾಜ್ಯ ಕರಕುಶಲ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಬೇಳೂರು ರಾಘವೇಂದ್ರ ಶೆಟ್ಟಿ ಅವರು ಆರು ಅಡಿ ಆಳದ ಚರಂಡಿಗೆ ಬಿದ್ದು ಕಾಲು ಮುರಿದುಕೊಂಡಿದ್ದಾರೆ. ನಿನ್ನೆ ರಾತ್ರಿ ಸಂಜಯನಗರದ ಡಾಲರ್ಸ್ ಕಾಲೋನಿ ಬಳಿ ಈ ಆಘಾತಕಾರಿ ಘಟನೆ ನಡೆದಿದ್ದು, ರಾಘವೇಂದ್ರ ಶೆಟ್ಟಿ ಅವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜಿಬಿಎ ಸಿಬ್ಬಂದಿಗಳು ಇತ್ತೀಚೆಗೆ ಚರಂಡಿಯ ಹೂಳು ಎತ್ತಿ ಸ್ವಚ್ಛಗೊಳಿಸಿದ್ದರು. ಆದರೆ, ನಿಯಮದ ಪ್ರಕಾರ ಚೇಂಬರ್ ಅನ್ನು ಸರಿಯಾಗಿ ಮುಚ್ಚದೇ ಉದಾಸೀನತೆ ತೋರಿದ್ದರು. ನಿನ್ನೆ ರಾತ್ರಿ ಡಾಲರ್ಸ್ ಕಾಲೋನಿ ಮುಖ್ಯರಸ್ತೆಯ ಫುಟ್‌ಪಾತ್ ಮೇಲೆ ಬೇಳೂರು ರಾಘವೇಂದ್ರ ಶೆಟ್ಟಿ ಅವರು ನಡೆದುಕೊಂಡು ಹೋಗುತ್ತಿದ್ದಾಗ, ಕತ್ತಲಲ್ಲಿ ತೆರೆದಿದ್ದ ಚರಂಡಿ ಕಾಣದೇ ನೇರವಾಗಿ ಒಳಗೆ ಬಿದ್ದಿದ್ದಾರೆ.

ಸುಮಾರು 6 ಅಡಿ ಆಳದ ಚರಂಡಿಗೆ ಬಿದ್ದ ರಭಸಕ್ಕೆ ರಾಘವೇಂದ್ರ ಶೆಟ್ಟಿ ಅವರ ಕಾಲಿನ ಮೂಳೆ ಮುರಿದಿದ್ದು, ತೀವ್ರ ರಕ್ತಸ್ರಾವವಾಗಿದೆ. ತಕ್ಷಣವೇ ಅವರನ್ನು ಸ್ಥಳೀಯರು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರು ತುರ್ತು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಬಿಎ ಅಧಿಕಾರಿಗಳ ಜೀವವಿರೋಧಿ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬೇಳೂರು ರಾಘವೇಂದ್ರ ಶೆಟ್ಟಿ ಅವರು ಸಂಜಯನಗರ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ.

ಸಾರ್ವಜನಿಕರ ಪ್ರಾಣಕ್ಕೆ ಕುತ್ತು ತರುತ್ತಿರುವ ಜಿಬಿಎ ಕಮಿಷನರ್, ಸಂಬಂಧಪಟ್ಟ ಇಲಾಖೆಯ ಮುಖ್ಯ ಎಂಜಿನಿಯರ್, ಕಾಮಗಾರಿ ನಡೆಸಿದ ಕಂಟ್ರಾಕ್ಟರ್ ಹಾಗೂ ನಿರ್ಲಕ್ಷ್ಯಕ್ಕೆ ಕಾರಣರಾದ ನಗರಾಭಿವೃದ್ಧಿ ಸಚಿವರ ಮೇಲೂ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: “ಬಟ್ಟೆ ಗಂಟು ಬಿಚ್ಚಿದರೆ ರಕ್ತ ವಾಂತಿ ಮಾಡಿ ಸಾಯ್ತೀಯಾ” ಎಂದು ಹೆದರಿಸಿ ಬಂಗಾರ, ನಗದು ದೋಚಿದ ಬೆಂಗಳೂರಿನ ನಕಲಿ ಸ್ವಾಮೀಜಿ

ಸಾರ್ವಜನಿಕರ ತೀವ್ರ ಆಕ್ರೋಶ:

ರಾಜಧಾನಿಯ ಫುಟ್‌ಪಾತ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಜಿಬಿಎ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ. ಸಾರ್ವಜನಿಕರು ಓಡಾಡುವ ಫುಟ್‌ಪಾತ್‌ಗಳ ಮೇಲೆ ಬೀದಿ ವ್ಯಾಪಾರಿಗಳು ಅಕ್ರಮವಾಗಿ ಜಾಗ ಆಕ್ರಮಿಸಿಕೊಳ್ಳುತ್ತಿದ್ದಾರೆ, ಮತ್ತೊಂದೆಡೆ ಅಧಿಕಾರಿಗಳು ಇಂತಹ ಅಪಾಯಕಾರಿ ಚರಂಡಿಗಳನ್ನು ತೆರೆದಿಟ್ಟು ಪಾದಚಾರಿಗಳ ಪ್ರಾಣದ ಜೊತೆ ಆಟವಾಡುತ್ತಿದ್ದಾರೆ. ಕೂಡಲೇ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಿ, ಇಡೀ ನಗರದಾದ್ಯಂತ ಫುಟ್‌ಪಾತ್‌ಗಳನ್ನು ದುರಸ್ತಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ: ವಿಕಾಸ್ ಟಿವಿ9 ಕನ್ನಡ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us