
ಬೆಂಗಳೂರು, ಫೆಬ್ರವರಿ 12: ನಮ್ಮ ಮೆಟ್ರೋ (Namma Metro) ಪ್ರಯಾಣ ದರ ಏರಿಕೆ ವಿಚಾರ ದೇಶಾದ್ಯಂತ ಚರ್ಚೆಯಾಗುತ್ತಿದೆ. ದರ ಏರಿಕೆಯಿಂದ ರೋಸಿ ಹೋಗಿರುವ ಮೆಟ್ರೋ ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕತ್ತಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನಮ್ಮ ಮೆಟ್ರೋ ದರ ಏರಿಕೆಯ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟನೆ ನೀಡಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯರ ಈ ಹೇಳಿಕೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿರುವ ತೇಜಸ್ವಿ ಸೂರ್ಯ ನಮ್ಮ ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಪ್ರಕ್ರಿಯೆಯನ್ನು ಆರಂಭಿಸಿದ್ದೇ ರಾಜ್ಯ ಸರ್ಕಾರ ಎಂದು ಆರೋಪಿಸಿದ್ದಾರೆ.
2023 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪ್ರತಿಯೊಂದು ಇಲಾಖೆಗಳಲ್ಲಿಯೂ ಬೆಲೆ ಏರಿಕೆ ಸಾಮಾನ್ಯವಾಗಿದೆ. ಬಿಎಂಟಿಸಿ ಪ್ರಯಾಣ ದರ, ವಿದ್ಯುತ್ ಬಿಲ್, ಆಸ್ತಿ ತೆರಿಗೆ, ಅಬಕಾರಿ ಸುಂಕ ಹೀಗೆ ಪ್ರತಿಯೊಂದರ ಬೆಲೆ ಏರಿಕೆಯಾಗಿದೆ ಎಂದರು.
ಪ್ರಸ್ತುತ ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಕುರಿತು ದರ ನಿಗದಿ ಸಮಿತಿ ರಚಿಸಲು ಮತ್ತು ಇದರ ಸಂಪೂರ್ಣ ಪ್ರಕ್ರಿಯೆಯನ್ನು ಪ್ರಾರಂಭಿಸಲು BMRCL ಗೆ ರಾಜ್ಯ ಸರ್ಕಾರ ಸಲಹೆ ನೀಡಿದ್ದು, ಸಮಿತಿಯಲ್ಲಿನ ರಾಜ್ಯ ಪ್ರತಿನಿಧಿಗಳ ಪ್ರಯಾಣದ ದರ ಏರಿಕೆಯ ಒತ್ತಾಯದ ಮೇರೆಗೆ ಪರಿಷ್ಕೃತ ದರದ ವರದಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ನಮ್ಮ ಮೆಟ್ರೋ ದರ ಏರಿಕೆ ಮಾಡಿದ್ಯಾರು? ಎಳೆ ಎಳೆಯಾಗಿ ಬಿಚ್ಚಿಟ್ಟ ಸಿದ್ದರಾಮಯ್ಯ
ಪ್ರಯಾಣದ ದರ ಏರಿಕೆಯಿಂದ ಬೆಂಗಳೂರಿನ ಜನತೆಗೆ ಉಂಟಾಗುವ ತೊಂದರೆಗಳ ಅರಿತು ಬಿಜೆಪಿ ದರ ಏರಿಕೆಯನ್ನು ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಸಮಸ್ಯೆ ಬಗ್ಗೆ ನಿಮಗೆ ನಿಜಾವದ ಕಾಳಜಿ ಇದ್ದರೆ ಪರಿಷ್ಕೃತ ದರಗಳ ಏರಿಕೆಯನ್ನು ಮರು ಪರಿಶೀಲಿಸಿ ನ್ಯಾಯಸಮ್ಮತ ದರ ನಿಗದಿಪಡಿಸಬೇಕು. ದರ ಕಡಿಮೆ ಮಾಡಲು ನಿಮ್ಮನ್ನು ಯಾವ ಕಾನೂನು ಅಡ್ಡಿಪಡಿಸುವುದಲ್ಲ ಎಂದರು.
ಮುಖ್ಯಮಂತ್ರಿಗಳಿಗೆ ಈ ಸಮಸ್ಯೆ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಪರಿಷ್ಕೃತ ದರಗಳ ಏರಿಕೆಯನ್ನು ಮರು ಪರಿಶೀಲಿಸಿ ನ್ಯಾಯಸಮ್ಮತ ದರ ನಿಗದಿಪಡಿಸಲು ನೆರವಾಗಬೇಕು. ಬೆಂಗಳೂರಿನ ಸಂಸದರು ಹಾಗೂ ದರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ತೊಡಗಿರುವ ಕೇಂದ್ರ ಸರ್ಕಾರದ ಅಧಿಕಾರಿಗಳು ಬೆಂಗಳೂರಿನ ಜನರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯದಲ್ಲಿ ತಮಗೆ ಸಲಹೆ ಮತ್ತು ಸಹಕಾರ ನೀಡಲು ಸಿದ್ದರಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:03 am, Wed, 12 February 25