ನಮ್ಮ ಮೆಟ್ರೋ ದರ ಏರಿಕೆ ಖಂಡಿಸಿ ಸಂಸತ್ನಲ್ಲಿ ಗುಡುಗಿದ ಸಂಸದ ತೇಜಸ್ವಿ ಸೂರ್ಯ
ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಶೇ45ರಷ್ಟು ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ ಎಂದು ಬಿಎಂಆರ್ಸಿಎಲ್ ಹೇಳಿದೆ. ಆದ್ರೆ, ವಸೂಲಿ ಮಾಡುತ್ತಿರುವುದು ಅದಕ್ಕಿಂತ ಹೆಚ್ಚು. ಹೀಗಾಗಿ ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ. ಇನ್ನು ಇದೇ ವಿಚಾರವಾಗಿ ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಆರೋಪ-ಪ್ರತ್ಯಾರೋಪ ಜೋರಾಗಿದೆ. ಇದರ ನಡುವೆ ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಸಂಸತ್ ಅಧಿವೇಶನದಲ್ಲಿ ಮೆಟ್ರೋ ದರ ಏರಿಕೆ ಬಗ್ಗೆ ಪ್ರಸ್ತಾಪಿಸಿದ್ದಾರೆ.

ನವದೆಹಲಿ/ಬೆಂಗಳೂರು, (ಫೆಬ್ರವರಿ 11): ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ಪ್ರಯಾಣಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಮೆಟ್ರೋವನ್ನೇ ನಂಬಿಕೊಂಡವರು ಟಿಕೆಟ್ ದರ ಏರಿಕೆ ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಿದ್ದಾರೆ. ಇದನ್ನೇ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ಪ್ರತಿಭಟನೆ ನಡೆಸಿದೆ. ಇನ್ನು ಈ ಬಗ್ಗೆ ಕಾಂಗ್ರೆಸ್ ಸರ್ಕಾರ, ದರ ಏರಿಕೆ ಮಾಡುವುದು ನಮ್ಮ ಕೈಯಲ್ಲಿ ಇಲ್ಲ ಎಂದು ಕೇಂದ್ರದತ್ತ ಬೊಟ್ಟು ಮಾಡಿದೆ. ಹೀಗಾಗಿ ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ಕೆಸರೆರಚಾಟಕ್ಕೆ ಕಾರಣವಾಗಿದೆ. ಇನ್ನು ಈ ಸಂಬಂಧ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಇಂದು (ಫೆಬ್ರವರಿ 11) ಸಂಸತ್ನಲ್ಲಿ ಪ್ರಸ್ತಾಪಿಸಿದ್ದು, ಮೆಟ್ರೋ ದರ ಏರಿಕೆಯು ಬೆಂಗಳೂರಿನ ಮಧ್ಯಮ ವರ್ಗದ ಮೇಲೆ ಬೀರುತ್ತೆ. ಈ ಬಗ್ಗೆ ಪರಿಶೀಲನೆ ಮಾಡಬೇಕೆಂದು ಮನವಿ ಮಾಡಿದರು.
ಇಂದು ಸಂಸತ್ತಿನಲ್ಲಿ ನಡೆದ ಶೂನ್ಯ ವೇಳೆಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ಬೆಂಗಳೂರಿನಲ್ಲಿ ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣದ ಅಲ್ಪ ದೂರದ ಪ್ರಯಾಣ ದರ ಶೇ.100ರಷ್ಟು ಏರಿಕೆಯಾಗಿದೆ. ಈ ರೀತಿಯ ದರ ಏರಿಕೆಯನ್ನು ದೇಶದ ಇತರ ನಗರಗಳ ಮೆಟ್ರೋ ದರಕ್ಕೆ ಹೋಲಿಸಿ ನೋಡಿದರೆ ಬೆಂಗಳೂರು ನಮ್ಮ ಮೆಟ್ರೋ ಅತ್ಯಂತ ದುಬಾರಿಯಾಗಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಪರಿಸರ ಸ್ನೇಹಿಯಾಗಿಸಬೇಕು ಮತ್ತು ಜನಪ್ರಿಯಗೊಳಿಸಬೇಕು. ಆದ್ರೆ ಈ ರೀತಿ ದರ ಏರಿಕೆ ಮಾಡಿರುವುದರಿಂದ ಮಧ್ಯಮ ವರ್ಗದ ಜನರಿಗೆ ಹೊರೆಯಾಗಿದೆ ಎಂದರು.
ಇದನ್ನೂ ಓದಿ: ಮೆಟ್ರೋ ದರ ಏರಿಕೆಗೆ ಕೇಂದ್ರವೇ ಹೊಣೆ ಎಂದ ಕಾಂಗ್ರೆಸ್: ಇತ್ತ ರಾಜ್ಯ ಸರ್ಕಾರದ ಬಿಜೆಪಿ ಪ್ರತಿಭಟನೆ
ಜನಸಾಮಾನ್ಯರ ಪ್ರಯಾಣ ಅನುಭವವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಈ ಮೆಟ್ರೋ ದರ ಏರಿಕೆಯನ್ನು ಪುನರ್ ಪರಿಶೀಲಿಸಬೇಕು. ಭದ್ರತೆ ಹಾಗೂ ವ್ಯವಹಾರಿಕತೆಯನ್ನು ಗಮನದಲ್ಲಿಟ್ಟುಕೊಂಡು ದರ ಪರಿಷ್ಕರಣೆ ಅಗತ್ಯ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಮಂಡಳಿಗೆ ಪರಿಶೀಲಿಸುವಂತೆ ಸ್ಪೀಕರ್ ಮೂಲಕ ತಿಳಿಸಿದರು.
ಇನ್ನು ಬಿಜೆಪಿ ಶಾಸಕರಾದ ಸಿ.ಕೆ.ರಾಮಮೂರ್ತಿ, ರವಿಸುಬ್ರಹ್ಮಣ್ಯ ಅವರ ನಿಯೋಗ ಮೆಟ್ರೋ ಪ್ರಧಾನ ಕಚೇರಿಗೆ ಭೇಟಿ, BMRCL ಎಂಡಿಗೆ ದರ ಇಳಿಕೆ ಮಾಡುವಂತೆ ಮನವಿ ಮಾಡಿದೆ. ರಾಜಕೀಯ ಏನೇ ಇರಲಿ, ಟ್ರಾಫಿಕ್, ವಾಯುಮಾಲಿನ್ಯ, ಸಾರ್ವಜನಿಕ ಸಾರಿಗೆ ಉತ್ತೇಜನಕ್ಕೆಂದು ಮೆಟ್ರೋ ಜಾರಿಗೆ ತಂದಿದ್ದಾರೆ. ಆದ್ರೆ ಈಗ ಬೆಲೆ ಏರಿಕೆ ಮಾಡಿ ಖಾಸಗಿ ವಾಹನಕ್ಕೂ ಸರ್ಕಾರಿ ಸಾರಿಗೆಗೂ ವ್ಯತ್ಯಾಸ ಇಲ್ಲದಂತೆ ಮಾಡುತ್ತಿದ್ದಾರೆ ಎನ್ನುವುದು ಜನರ ಆಕ್ರೋಶ. ಮೆಟ್ರೋಗೆ ಹೆಚ್ಚಿನ ಹಣ ನೀಡೋ ಬದಲು ಬೈಕ್, ಕಾರು ಬಳಸುವುದೇ ಸೂಕ್ತ, ಅದನ್ನೇ ಬಳಸುತ್ತೇವೆ ಎನ್ನುತ್ತಿದ್ದಾರೆ.
ಮೆಟ್ರೋ ಪ್ರಯಾಣ ದರ ದುಪ್ಪಟ್ಟು ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ ಅಖಾಡಕ್ಕೆ ಇಳಿದಿದೆ. ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಸಾಲು ಸಾಲು ಪ್ರತಿಭಟನೆ ನಡೆಸಿದೆ. ಜಯನಗರ ಮೆಟ್ರೋ ನಿಲ್ದಾಣ, ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ, ಮಹಾಲಕ್ಷ್ಮೀ ಲೇಔಟ್ ಮೆಟ್ರೋ ನಿಲ್ದಾಣ, ಕೆಂಗೇರಿ ಮೆಟ್ರೋ ನಿಲ್ದಾಣ, ಮಾದಾವರ ಮೆಟ್ರೋ ನಿಲ್ದಾಣ, ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣದ ಮುಂದೆ ಪ್ರತಿಭಟನೆ ಮಾಡಿ ದರ ಏರಿಕೆಯನ್ನು ಖಂಡಿಸಿದೆ.
ಒಟ್ಟಿನಲ್ಲಿ ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಾಗಿದ್ದರಿಂದ ಮಧ್ಯಮ ವರ್ಗದ ಜನರಿಗೆ ಬಹಳ ಹೊರೆಯಾಗಿದ್ದು, ಜನಾಕ್ರೋಶಕ್ಕೆ ಕಾರಣವಾಗಿದೆ. ದರ ಏರಿಕೆ ಸಂಬಂಧ ಅಭಿಯಾನಗಳು, ಪ್ರತಿಭಟನೆಗಳು ನಡೆಯುತ್ತಿವೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಪುನರ್ ಪರಿಶೀಲನೆ ಮಾಡಿ ದರ ಕಡಿಮೆ ಮಾಡುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.