AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangalore Metro: ನಮ್ಮ ಮೆಟ್ರೋಗೆ ಸಿಎಜಿ ಶಾಕಿಂಗ್ ರಿಪೋರ್ಟ್: ನಿರೀಕ್ಷಿತ ಪ್ರಯಾಣಿಕರೇ ಬರುತ್ತಿಲ್ಲ, ಆರ್ಥಿಕ ನಷ್ಟದಲ್ಲಿ ಬಿಎಮ್​​​​ಆರ್​​​​​ಸಿಎಲ್​​

ಭಾರತೀಯ ಸಿಎಜಿ ವರದಿಯ ಪ್ರಕಾರ, ಬೆಂಗಳೂರು ನಮ್ಮ ಮೆಟ್ರೋ ನಿರೀಕ್ಷಿತ ಪ್ರಯಾಣಿಕರ ಸಂಖ್ಯೆಯನ್ನು ತಲುಪಿಲ್ಲ, ಇದರಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಯೆಲ್ಲೋ ಲೈನ್ ಸೇರಿದಂತೆ ಒಟ್ಟಾರೆ ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿದೆ. ಕೊನೆಯ ಹಂತದ ಸಂಪರ್ಕ ಕೊರತೆ ಹಾಗೂ ರೈಲುಗಳ ಅಭಾವ ಇದಕ್ಕೆ ಕಾರಣ. ಆದಾಯ ಹೆಚ್ಚಿಸಲು ಸಂಚಾರ ಅವಧಿ ವಿಸ್ತರಣೆ, ಬೋಗಿಗಳ ಹೆಚ್ಚಳ ಮತ್ತು ಬಿಎಂಟಿಸಿ ಫೀಡರ್ ಬಸ್ ವ್ಯವಸ್ಥೆಯನ್ನು ಬಲಪಡಿಸಲು ತಜ್ಞರು ಸಲಹೆ ನೀಡಿದ್ದಾರೆ.

Bangalore Metro: ನಮ್ಮ ಮೆಟ್ರೋಗೆ ಸಿಎಜಿ ಶಾಕಿಂಗ್ ರಿಪೋರ್ಟ್: ನಿರೀಕ್ಷಿತ ಪ್ರಯಾಣಿಕರೇ ಬರುತ್ತಿಲ್ಲ, ಆರ್ಥಿಕ ನಷ್ಟದಲ್ಲಿ ಬಿಎಮ್​​​​ಆರ್​​​​​ಸಿಎಲ್​​
ನಮ್ಮ ಮೆಟ್ರೋ
ಕಿರಣ್​ ಸೂರ್ಯ
| Edited By: |

Updated on:Oct 29, 2026 | 10:24 AM

Share

ಬೆಂಗಳೂರು, ಅ.29: ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಬಿಎಂಆರ್‌ಸಿಎಲ್ ಅಧಿಕಾರಿಗಳು ಅಂದುಕೊಂಡಷ್ಟು ಪ್ರಯಾಣಿಕರು ಸಂಚಾರ ಮಾಡುತ್ತಿಲ್ಲ ಎಂಬ ಆಘಾತಕಾರಿ ಅಂಶ ಭಾರತೀಯ ಸಿಎಜಿ ವರದಿಯಿಂದ ಬಹಿರಂಗವಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರು ಮೆಟ್ರೋ ಬಳಸದೇ ಇರುವುದರಿಂದ ನಮ್ಮ ಮೆಟ್ರೋ ಸಂಸ್ಥೆಯು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹಾಗೂ ಆದಾಯ ಹೆಚ್ಚಿಸಲು ಸಂಚಾರ ಅವಧಿ ವಿಸ್ತರಣೆ, ಬೋಗಿಗಳ ಹೆಚ್ಚಳ ಹಾಗೂ ಬಿಎಂಟಿಸಿ ಫೀಡರ್ ಬಸ್ ವ್ಯವಸ್ಥೆಯನ್ನು ಬಲಪಡಿಸಲು ಸಾರಿಗೆ ತಜ್ಞರು ಮಹತ್ವದ ಸಲಹೆಗಳನ್ನು ನೀಡಿದ್ದಾರೆ.

ನಿರೀಕ್ಷೆ ತಲುಪದ ಯೆಲ್ಲೋ ಲೈನ್ ಮತ್ತು ಪ್ರಯಾಣಿಕರ ಅಂಕಿ-ಅಂಶ:

ವರದಿಯ ಪ್ರಕಾರ, ನಮ್ಮ ಮೆಟ್ರೋದಲ್ಲಿ ನಿತ್ಯವೂ ಕೋಟಿ ಕೋಟಿ ಆದಾಯ ಹಾಗೂ ಲಕ್ಷಾಂತರ ಪ್ರಯಾಣಿಕರ ನಿರೀಕ್ಷೆಯಿಟ್ಟುಕೊಳ್ಳಲಾಗಿತ್ತು. ಆದರೆ ಪ್ರಸ್ತುತ ಪರಿಸ್ಥಿತಿ ಭಿನ್ನವಾಗಿದೆ. ನಮ್ಮ ಮೆಟ್ರೋದಲ್ಲಿ ಪ್ರಸ್ತುತ ದಿನಪ್ರತಿ ಸರಾಸರಿ 10.50 ಲಕ್ಷ ಪ್ರಯಾಣಿಕರು ಮಾತ್ರ ಸಂಚಾರ ಮಾಡುತ್ತಿದ್ದಾರೆ. ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರವರೆಗಿನ ‘ಯೆಲ್ಲೋ ಲೈನ್’ ಕಾರ್ಯಾರಂಭಗೊಂಡ ನಂತರ ಪರ್ಪಲ್, ಗ್ರೀನ್ ಹಾಗೂ ಯೆಲ್ಲೋ ಮೂರೂ ಮಾರ್ಗಗಳು ಸೇರಿ ದಿನಕ್ಕೆ 12.5 ಲಕ್ಷ ಪ್ರಯಾಣಿಕರು ಸಂಚರಿಸಲಿದ್ದಾರೆ ಎಂದು ಅಂದಾಜಿಸಲಾಗಿತ್ತು.

ಸೆಪ್ಟೆಂಬರ್ ತಿಂಗಳಲ್ಲಿ ದಾಖಲಾದ 11.45 ಲಕ್ಷ ಪ್ರಯಾಣಿಕರ ಸಂಖ್ಯೆಯನ್ನು ಹೊರತುಪಡಿಸಿದರೆ, ಉಳಿದ ಅವಧಿಯಲ್ಲಿ ನಿರೀಕ್ಷಿತ ಗಡಿಯನ್ನು ಮೆಟ್ರೋ ದಾಟಲು ಸಾಧ್ಯವಾಗಿಲ್ಲ. ‘ಲಾಸ್ಟ್ ಮೈಲ್ ಕನೆಕ್ಟಿವಿಟಿ’ (ಕೊನೆಯ ಹಂತದ ಸಂಪರ್ಕ ವ್ಯವಸ್ಥೆ) ಕೊರತೆ ಹಾಗೂ ಅಗತ್ಯಕ್ಕೆ ತಕ್ಕಷ್ಟು ಟ್ರೇನ್ ಶಾರ್ಟೇಜ್ (ರೈಲುಗಳ ಅಭಾವ) ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಬಿಗ್ ಗುಡ್‌ನ್ಯೂಸ್: ನಮ್ಮ ಮೆಟ್ರೋ ಪಿಂಕ್ ಲೈನ್ ಎಲಿವೇಟೆಡ್ ಮಾರ್ಗಕ್ಕೆ CMRS ಅನುಮತಿ

ನಮ್ಮ ಮೆಟ್ರೋ ಸುಧಾರಣೆಗೆ ತಜ್ಞರ ಸಲಹೆ

ಮೆಟ್ರೋ ರೈಲನ್ನು ನಷ್ಟದಿಂದ ಹೊರತಂದು, ಪ್ರಯಾಣಿಕರ ಸಂಖ್ಯೆ ಹೆಚ್ಚಿಸಲು ಬಿಎಂಆರ್‌ಸಿಎಲ್‌ಗೆ ಪ್ರಯಾಣಿಕರಾದ ಇರ್ಫಾನ್, ಮಂಜುನಾಥ್ ಹಾಗೂ ಸಾರಿಗೆ ತಜ್ಞರು ಹಲವು ಪ್ರಮುಖ ಸುಧಾರಣೆಗಳನ್ನು ಕೋರಿದ್ದಾರೆ. ಪ್ರಸ್ತುತ ಬೆಳಿಗ್ಗೆ 5:00 ರಿಂದ ರಾತ್ರಿ 11:30 ರವರೆಗೆ ಮಾತ್ರ ಮೆಟ್ರೋ ಕಾರ್ಯಾಚರಿಸುತ್ತಿದೆ. ದೆಹಲಿ ಮೆಟ್ರೋ ಮಾದರಿಯಲ್ಲಿ ಬೆಳಿಗ್ಗೆ ಅತ್ಯಂತ ಬೇಗನೆ ಸೇವೆ ಆರಂಭಿಸಿ, ರಾತ್ರಿ 12:00 ರ ನಂತರವೂ ರೈಲು ಸಂಚಾರ ಮುಂದುವರಿಸಬೇಕು. ಇದರಿಂದ ತಡರಾತ್ರಿ ಪ್ರಯಾಣಿಕರಿಗೆ ಅನುಕೂಲವಾಗಿ ಆದಾಯವೂ ಹೆಚ್ಚಲಿದೆ.

ಪ್ರಸ್ತುತ 6 ಬೋಗಿ ರೈಲುಗಳಿದ್ದು, ವಿಪರೀತ ದಟ್ಟಣೆ ನಿಯಂತ್ರಿಸಲು ದೆಹಲಿ ಹಾಗೂ ಕೋಲ್ಕತ್ತಾ ಮಾದರಿಯಲ್ಲಿ 8 ರಿಂದ 9 ಬೋಗಿಗಳ ರೈಲುಗಳನ್ನು ಓಡಿಸಬೇಕು. ಮುಂಬರುವ ಹೊಸ ಮಾರ್ಗಗಳಲ್ಲಿ 8-9 ಬೋಗಿಗಳಿಗೆ ತಕ್ಕಂತೆ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲು ಯೋಜಿಸಬೇಕು. ಮೆಟ್ರೋ ನಿಲ್ದಾಣಗಳಿಂದ ಐಟಿಪಿಎಲ್ , ಎಲೆಕ್ಟ್ರಾನಿಕ್ ಸಿಟಿ ಹಾಗೂ ಮುಂತಾದ ಪ್ರಮುಖ ಬಡಾವಣೆಗಳಿಗೆ ತಲುಪಲು ಬಿಎಂಟಿಸಿ ಫೀಡರ್ ಬಸ್‌ಗಳ ಶಾರ್ಟ್ ರೂಟ್ ಸಂಪರ್ಕ ಕಲ್ಪಿಸಬೇಕು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:20 am, Thu, 29 October 26

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More