ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಶಾಸಕರ ವಿರೋಧ: 714 ಕಟ್ಟಡಗಳ ಪಟ್ಟಿ ಸಿದ್ಧ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 23, 2022 | 11:42 AM

ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ಬಿಬಿಎಂಪಿ ಸಿದ್ಧತೆ ಆರಂಭಿಸಿದೆ. ಆದರೆ ಬಿಬಿಎಂಪಿ ನಿರ್ಧಾರಕ್ಕೆ ಜನಪ್ರತಿನಿಧಿಗಳಿಂದಲೇ ವಿರೋಧ ವ್ಯಕ್ತವಾಗಿದೆ

ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಶಾಸಕರ ವಿರೋಧ: 714 ಕಟ್ಟಡಗಳ ಪಟ್ಟಿ ಸಿದ್ಧ
ಬೆಂಗಳೂರಿನಲ್ಲಿ ಮಳೆಯಿಂದ ರಸ್ತೆಯ ಮೇಲೆ ನೀರು ಹರಿಯಿತು.
Follow us on

ಬೆಂಗಳೂರು: ನಗರದಲ್ಲಿ ಸ್ವಲ್ಪವೇ ಮಳೆ ಬಂದರೂ ಮನೆಗಳಿಗೆ ನೀರು ನುಗ್ಗುವ, ರಸ್ತೆಗಳ ಮೇಲೆ ನೀರು ನಿಲ್ಲುವ ಸಮಸ್ಯೆ ಹೆಚ್ಚಾಗುತ್ತಿದೆ. ಹೈರಾಣಾಗುತ್ತಿರುವ ಜನರು ಬಿಬಿಎಂಪಿ ಮತ್ತು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ನಗರದಲ್ಲಿ ರಾಜಕಾಲುವೆ ಒತ್ತುವರಿ (Rajakaluve Encroachment Clearance) ತೆರವುಗೊಳಿಸಿ, ಜನಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂಬ ಒತ್ತಾಯಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿರುವ 714 ಕಟ್ಟಡಗಳ ಪಟ್ಟಿ ಸಿದ್ಧಪಡಿಸಿರುವ ಬಿಬಿಎಂಪಿ ಅಧಿಕಾರಿಗಳು ಶೀಘ್ರದಲ್ಲಿಯೇ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ಸಿದ್ಧತೆ ಆರಂಭಿಸಿದ್ದಾರೆ. ಆದರೆ ಬಿಬಿಎಂಪಿ ನಿರ್ಧಾರಕ್ಕೆ ಜನಪ್ರತಿನಿಧಿಗಳಿಂದಲೇ ವಿರೋಧ ಕೇಳಿಬಂದಿರುವುದು ವಿಪರ್ಯಾಸ.

ರಾಜಕಾಲುವೆ ಒತ್ತುವರಿ ಮಾಡಿರುವ 714 ಕಟ್ಟಡಗಳ ಪಟ್ಟಿ ಸಿದ್ಧಗೊಳಿಸಿ ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದರೂ ಸ್ಥಳೀಯ ಶಾಸಕರು ತೆರವು ಕಾರ್ಯಾಚರಣೆಗೆ ಅವಕಾಶಕೊಡುತ್ತಿಲ್ಲ. ತೆರವು ಕಾರ್ಯ ನಡೆಸದಂತೆ ಅಧಿಕಾರಿಗಳ ಮೇಲೆ ಶಾಸಕರು ಒತ್ತಡ ಹೇರುತ್ತಿದ್ದಾರೆ. ಒತ್ತುವರಿ ತೆರವು ಮಾಡದಂತೆ ಅಧಿಕಾರಿಗಳಿಗೆ ಸರ್ಕಾರವೂ ಮೌಖಿಕ ಸೂಚನೆ ನೀಡಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದೀಗ ನಗರದಲ್ಲಿ ಮಳೆ ಬಿಡುವುಕೊಟ್ಟಿದೆ. ಸಕಾಲದಲ್ಲಿ ಒತ್ತುವರಿ ತೆರವಿಗೆ ಕ್ರಮ ತೆಗೆದುಕೊಳ್ಳದಿದ್ದರೆ ಮುಂದೆ ಮಳೆ ಬಂದಾಗ ಪ್ರವಾಹ ಖಚಿತ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಇದೀಗ ಈ ಸಂಬಂಧ ಅಗತ್ಯ ಮಾಹಿತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ನೀಡಲಾಗಿದೆ. ಅವರು ಹಸಿರು ನಿಶಾನೆ ತೋರಿದರೆ ಈ ವಾರದಿಂದಲೇ ತೆರವು ಕಾರ್ಯಾಚರಣೆ ಆರಂಭವಾಗಲಿದೆ. 2016-17ರಲ್ಲಿ ನಗರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿತ್ತು. ಒಟ್ಟು 2,626 ಕಡೆ ರಾಜಕಾಲುವೆ ಜಾಗ ಕಬಳಿಕೆಯಾಗಿದ್ದು ಈವರೆಗೆ 1890 ಸ್ಥಳಗಳಲ್ಲಿ ತೆರವುಗೊಳಿಸಲಾಗಿದೆ. ಇನ್ನೂ 736 ಒತ್ತುವರಿಗಳ ತೆರವಿಗೆ ಕಾಲ ಕೂಡಿಬಂದಿಲ್ಲ. ಹಿಂದೆ ಒತ್ತುವರಿ ತೆರವು ಮಾಡಿದ ಜಾಗದಲ್ಲಿ ಪ್ರವಾಹ ಆಗುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಳೆ ಪರಿಸ್ಥಿತಿ ಪರಿಶೀಲಿಸಿದ ಬೈರತಿ ಬಸವರಾಜ್

ಬೆಂಗಳೂರಿನಲ್ಲಿ ಮಳೆ ಅಪಾಯ ಎದುರಿಸಲು ಎಂಟು ವಲಯಗಳಿಗೆ ಏಳು ಉಸ್ತುವಾರಿಗಳನ್ನು ನೇಮಿಸಲಾಗಿದೆ. ಮಹಾದೇವಪುರ ವಲಯಕ್ಕೆ ಬೈರತಿ ಬಸವರಾಜ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇಮಕ ಮಾಡಿದ್ದಾರೆ. ಮುಖ್ಯಮಂತ್ರಿ ಸೂಚನೆಯ ಮೇರೆಗೆ ಬೈರತಿ ಬಸವರಾಜ್ ಅವರು ಮಹಾದೇವಪುರ ವಲಯದ ಅಧಿಕಾರಿಗಳ ಸಭೆ‌ಯನ್ನು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಸಿದರು. ಮಹಾದೇವಪುರ ವಲಯದಲ್ಲಿ ಮಳೆಯಿಂದ ಆಗಿರುವ ಅನಾಹುತಗಳ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು.

Published On - 11:42 am, Mon, 23 May 22