Bangalore Rains: ಬೆಂಗಳೂರು ನಗರದ ಹಲವೆಡೆ ಧಾರಾಕಾರ ಮಳೆ, ಅಂಡರ್ಪಾಸ್ಗಳಲ್ಲಿ ಸಂಚರಿಸಬೇಡಿ; ಸಂಚಾರ ಪೊಲೀಸರ ಮನವಿ
ರಾಜ್ಯ ರಾಜಧಾನಿ ಬೆಂಗಳೂರು ನಗರದ ಹಲವೆಡೆ ಸೋಮವಾರ ಸಂಜೆಯೂ ಭಾರೀ ಮಳೆ ಸುರಿದಿದೆ. ಅಂಡರ್ಪಾಸ್ಗಳಲ್ಲಿ ಸಂಚರಿಸಬೇಡಿ ಎಂದು ಬೆಂಗಳೂರು ಸಂಚಾರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದ ಹಲವೆಡೆ ಸೋಮವಾರ ಸಂಜೆಯೂ ಭಾರೀ ಮಳೆ (Bangalore Rains) ಸುರಿದಿದೆ. ನಗರದ ಮಲ್ಲೇಶ್ವರಂ, ಮೆಜೆಸ್ಟಿಕ್, ಕಾರ್ಪರೇಷನ್, ಗಿರಿನಗರ, ಶಾಂತಿನಗರ, ರಿಚ್ಮಂಡ್ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಗಾಳಿ ಸಹಿತ ಧಾರಕಾರ ಮಳೆ ಸುರಿದಿದೆ. ಈ ಮಧ್ಯೆ, ಅಂಡರ್ಪಾಸ್ಗಳಲ್ಲಿ ಸಂಚರಿಸಬೇಡಿ ಎಂದು ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಭಾನುವಾರ ಸಂಜೆ ಸುರಿದಿದ್ದ ಭಾರೀ ಮಳೆಯಿಂದಾಗಿ ಕೆಆರ್ ಸರ್ಕಲ್ ಅಂಡರ್ಪಾಸ್ನಲ್ಲಿ ಕೃತಕ ನೆರೆ ಸೃಷ್ಟಿಯಾಗಿ ಅದರಲ್ಲಿ ಕಾರು ಸಿಲುಕಿದ ಪರಿಣಾಮ ಯುವತಿಯೊಬ್ಬರು ಮೃತಪಟ್ಟಿದ್ದರು.
ಮಳೆಯ ಕಾರಣ ಸಾರ್ವಜನಿಕರು ವಿಧಾನಸೌಧದ ಸುತ್ತಲಿನ 6 ಕಿಮೀ ವ್ಯಾಪ್ತಿಯಲ್ಲಿರುವ ಅಂಡರ್ಪಾಸ್ಗಳಲ್ಲಿ ಸಂಚರಿಸಬಾರದು ಎಂದು ಬೆಂಗಳೂರು ನಗರ ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದಾರೆ. ಹಲವೆಡೆ ಅಂಡರ್ಪಾಸ್ಗಳ ಮೂಲಕ ಸಂಚರಿಸದಂತೆ ಬಿಬಿಎಂಪಿ ಸಿಬ್ಬಂದಿ ಬ್ಯಾರಿಕೇಡ್ ಅಳವಡಿಸಿದ್ದಾರೆ.
Due to rains in the CBD area we request all road users to avoid underpasses and use alternative roads.
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) May 22, 2023
ಕೆಆರ್ ಸರ್ಕಲ್ ಅಂಡರ್ಪಾಸ್ನಲ್ಲಿ ಕಾರು ಮುಳುಗಡೆಯಾಗಿ ಟೆಕ್ಕಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಕಾರು ಚಾಲಕನನ್ನು ಪೊಲೀಸರು ಸೋಮವಾರ ಮಧ್ಯಾಹ್ನ ಬಂಧಿಸಿದ್ದಾರೆ.
ಕಬ್ಬನ್ಪಾರ್ಕ್ನಲ್ಲಿ ಧರೆಗುರುಳಿದ 40ಕ್ಕೂ ಹೆಚ್ಚು ಮರಗಳು
ಬೆಂಗಳೂರಿನಲ್ಲಿ 2 ದಿನಗಳಿಂದ ಸುರಿದ ಮಳೆಯಿಂದಾಗಿ ಕಬ್ಬನ್ಪಾರ್ಕ್ನಲ್ಲಿ 40ಕ್ಕೂ ಹೆಚ್ಚು ಮರಗಳು ಉರುಳಿ ಬಿದ್ದಿವೆ. ಕಬ್ಬನ್ ಉದ್ಯಾನವನದಲ್ಲಿ ಒಟ್ಟು 2 ಸಾವಿರಕ್ಕೂ ಹೆಚ್ಚು ಮರಗಳಿವೆ. ರಸ್ತೆಯ ಮೇಲೆ ಬಿದ್ದಿದ್ದ ಎಲ್ಲ ಮರಗಳನ್ನು ತೆರವುಗೊಳಿಸಿದ್ದೇವೆ. ಇನ್ನೆರಡು ದಿನ ಭಾರಿ ಮಳೆಯ ಮುನ್ಸೂಚನೆ ಇದೆ ಎಂದು ಕಬ್ಬನ್ ಪಾರ್ಕ್ ತೋಟಗಾರಿಕೆ ಉಪನಿರ್ದೇಶಕ ಬಾಲಕೃಷ್ಣ ಹೇಳಿದ್ದಾರೆ.
ಇದನ್ನೂ ಓದಿ: Bangalore Rain: ಬೆಂಗಳೂರು ಮಳೆ ದುರಂತ, ಮಾನವೀಯತೆ ಮರೆತ ಸೇಂಟ್ ಮಾರ್ಥಾಸ್ ಆಸ್ಪತ್ರೆ, ಇನ್ಫೋಸಿಸ್ ಉದ್ಯೋಗಿ ಬಲಿ
ಪ್ರವಾಸಿಗರು ಮುನ್ನೆಚ್ಚರಿಕಾ ಕ್ರಮವಾಗಿ ಪಾರ್ಕ್ಗೆ ಭೇಟಿ ನೀಡದಿರುವುದು ಒಳಿತು. ಒಂದು ವೇಳೆ ಪಾರ್ಕ್ಗೆ ಭೇಟಿ ನೀಡಿದರೆ ಮರಗಳ ಕೆಳಗೆ ನಿಲ್ಲಬೇಡಿ ಎಂದು ಅವರು ಸಲಹೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:21 pm, Mon, 22 May 23