ಬೆಂಗಳೂರು ಟು ಲಂಡನ್ ಕಾರು ಪಯಣ: 85 ದಿನ, 27 ದೇಶ, 25,000 ಕಿ.ಮೀ; ಕನ್ನಡಿಗ ಕೇಶವ್ ಪ್ರಸಾದ್ ಸಾಹಸಯಾತ್ರೆ

ಬೆಂಗಳೂರಿನ ಕೇಶವ್ ಪ್ರಸಾದ್ ತಮ್ಮ ಸ್ವಂತ ಕಾರಿನಲ್ಲಿ ಬೆಂಗಳೂರಿನಿಂದ ಲಂಡನ್‌ಗೆ ಪ್ರಯಾಣಿಸಿ, ಮರಳಿ ಬೆಂಗಳೂರಿಗೆ ಆಗಮಿಸುವ ಮೂಲಕ ಅಸಾಮಾನ್ಯ ಸಾಹಸ ಮೆರೆದಿದ್ದಾರೆ. 85 ದಿನಗಳಲ್ಲಿ 27 ದೇಶಗಳನ್ನು ಹಾದು, 25,000 ಕಿ.ಮೀ ದೂರ ಕ್ರಮಿಸಿದ್ದು, ಈ ಐತಿಹಾಸಿಕ ರಸ್ತೆ ಪಯಣ ಆಗಸ್ಟ್ 25ಕ್ಕೆ ಮುಕ್ತಾಯಗೊಂಡಿದೆ. ಸವಾಲುಗಳ ನಡುವೆಯೂ ಮಾನವೀಯತೆ ಹಾಗೂ ಹೊಸ ದೃಷ್ಟಿಕೋನ ನೀಡಿದ ಈ ಯಾತ್ರೆಗೆ 25 ಲಕ್ಷ ರೂ. ವೆಚ್ಚವಾಗಿದೆ.

ಬೆಂಗಳೂರು ಟು ಲಂಡನ್ ಕಾರು ಪಯಣ: 85 ದಿನ, 27 ದೇಶ, 25,000 ಕಿ.ಮೀ; ಕನ್ನಡಿಗ ಕೇಶವ್ ಪ್ರಸಾದ್ ಸಾಹಸಯಾತ್ರೆ
ಕೇಶವ್ ಪ್ರಸಾದ್ ಸಾಹಸ ಯಾತ್ರೆ
Image Credit source: Google

Updated on: Sep 30, 2026 | 12:15 PM

ಮುಖ್ಯಾಂಶಗಳು

  • ಬೆಂಗಳೂರು ಟು ಲಂಡನ್ ಕಾರು ಪಯಣ
  • ದೀರ್ಘ ರಸ್ತೆ ಪ್ರಯಾಣ ಮಾಡ ಬಯಸುವವರಿಗೆ ಕೇಶವ್ ಪ್ರಸಾದ್ ಸಲಹೆಗಳು
  • ಖರ್ಚು ಎಷ್ಟು? ಪೂರ್ವ ತಯಾರಿ ಹೇಗಿತ್ತು?

ಬೆಂಗಳೂರು, ಸೆ.30: ಸ್ವಂತ ಕಾರಿನಲ್ಲಿ ದೇಶ-ವಿದೇಶ ಸುತ್ತಿ ಬರುವುದು ಹಲವರ ಕನಸು. ಆದರೆ ಬೆಂಗಳೂರಿನ ವೆಲ್ನೆಸ್ ಕನ್ಸಲ್ಟೆಂಟ್ ಕೇಶವ್ ಪ್ರಸಾದ್ ಈ ಕನಸನ್ನು ಸಾಕಾರಗೊಳಿಸಿ, ಕನ್ನಡಿಗರು ಹೆಮ್ಮೆಪಡುವಂತಹ ಸಾಹಸ ಮೆರೆದಿದ್ದಾರೆ. ತಮ್ಮ ಸ್ವಂತ ಕಾರಿನಲ್ಲೇ ಬೆಂಗಳೂರಿನಿಂದ ಲಂಡನ್‌ಗೆ ಪ್ರಯಾಣಿಸಿ, ಮರಳಿ ಬೆಂಗಳೂರಿಗೆ ಆಗಮಿಸುವ ಮೂಲಕ ಬರೋಬ್ಬರಿ 85 ದಿನಗಳಲ್ಲಿ 27 ದೇಶಗಳನ್ನು ಹಾದು 25,000 ಕಿಲೋಮೀಟರ್ ಸುದೀರ್ಘ ರಸ್ತೆ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಜೂನ್ 5 ರಂದು ಬೆಂಗಳೂರಿನಿಂದ ಆರಂಭವಾದ ಈ ಐತಿಹಾಸಿಕ ರಸ್ತೆ ಪಯಣವು ಆಗಸ್ಟ್ 25 ರಂದು ಮುಕ್ತಾಯಗೊಂಡಿದೆ. ಈ ಸಾಹಸಯಾತ್ರೆ ಕೇವಲ ದೂರವನ್ನು ಕ್ರಮಿಸುವುದು ಮಾತ್ರವಾಗಿರಲಿಲ್ಲ, ಬದಲಿಗೆ ಜೀವನವನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸಿದ ಅಪರೂಪದ ಅನುಭವವಾಗಿತ್ತು ಎಂದು ಕೇಶವ್ ಪ್ರಸಾದ್ ಹಂಚಿಕೊಂಡಿದ್ದಾರೆ.

ಸುದೀರ್ಘ ಪ್ರಯಾಣದ ವೇಳೆ ಹಲವು ಕಡೆಗಳಲ್ಲಿ ಸಂಚಾರ ದಟ್ಟಣೆ, ಹವಾಮಾನ ವೈಪರೀತ್ಯ ಹಾಗೂ ರಸ್ತೆಗಳ ಪರಿಸ್ಥಿತಿ ಅನಿರೀಕ್ಷಿತ ಸವಾಲುಗಳನ್ನು ತಂದೊಡ್ಡಿದ್ದವು. ಆರಂಭದಲ್ಲಿ ಕೆಲವು ಸಹಪಯಣಿಗರೊಂದಿಗೆ ಹೊರಟಿದ್ದ ಪ್ರಸಾದ್, ನಂತರ ಏಕಾಂಗಿಯಾಗಿ ಲಂಡನ್ ಕಡೆಗೆ ಪಯಣ ಬೆಳೆಸಿದರು. ಈ ವೇಳೆ ವಿವಿಧ ದೇಶಗಳ ಜನರ ಮಾನವೀಯತೆ ಮತ್ತು ಆತಿಥ್ಯ ಅವರಿಗೆ ರೋಮಾಂಚಕಾರಿ ಅನುಭವ ನೀಡಿದೆ. ರಾತ್ರಿ ವೇಳೆಯಲ್ಲಿ ಕಾರು ಕೆಟ್ಟು ನಿಂತಾಗ, ಅಲ್ಲಿನ ಟ್ರಕ್ ಚಾಲಕನೊಬ್ಬ ಗ್ಯಾರೇಜ್‌ವರೆಗೆ ಮಾರ್ಗದರ್ಶನ ನೀಡಿ ನೆರವಾಗಿದ್ದ.

ಕಾರಿನ ಸಣ್ಣಪುಟ್ಟ ರಿಪೇರಿ ಮಾಡಿದ ಮೆಕ್ಯಾನಿಕ್, “ಇದು ನಮ್ಮ ದೇಶದ ಕಡೆಯಿಂದ ನಿಮಗೆ ನೀಡುತ್ತಿರುವ ಕೊಡುಗೆ” ಎಂದು ಹಣ ಪಡೆಯಲು ನಿರಾಕರಿಸಿದ್ದ. 45-48 ಡಿಗ್ರಿ ಸೆಲ್ಸಿಯಸ್ ತೀವ್ರ ಉರಿಬಿಸಿಲಿನಲ್ಲಿ ಪಯಣಿಸುತ್ತಿದ್ದಾಗ, ಹೋಟೆಲ್ ಮಾಲೀಕನೊಬ್ಬ ಸ್ವತಃ ಕ ಕರೆದು ಉಚಿತವಾಗಿ ರುಚಿಕರವಾದ ಊಟ ಉಪಹಾರ ನೀಡಿ ಸತ್ಕರಿಸಿದ್ದ.

ಖರ್ಚು ಎಷ್ಟು? ಪೂರ್ವ ತಯಾರಿ ಹೇಗಿತ್ತು?

ಈ ಸಂಪೂರ್ಣ ಸಾಹಸಯಾತ್ರೆಗೆ ವಸತಿ, ಇಂಧನ ಹಾಗೂ ಆಹಾರ ಸೇರಿದಂತೆ ಒಟ್ಟು ಸುಮಾರು 25 ಲಕ್ಷ ರೂಪಾಯಿ ವೆಚ್ಚವಾಗಿದೆ. ಐಷಾರಾಮಿ ಹೋಟೆಲ್‌ಗಳ ಬದಲಿಗೆ 3-4 ಸ್ಟಾರ್ ಹೋಟೆಲ್ ಹಾಗೂ ಹಾಸ್ಟೆಲ್‌ಗಳಲ್ಲಿ ವಾಸ್ತವ್ಯ ಹೂಡಲಾಗಿತ್ತು. ಭಾರತದಿಂದಲೇ ಒಯ್ಯಲಾಗಿದ್ದ ಆಹಾರ ಪದಾರ್ಥಗಳು ಕಷ್ಟದ ಸಮಯದಲ್ಲಿ ನೆರವಾಗಿದ್ದವು. ಭಾರತ ಮತ್ತು ಕಜಕಿಸ್ತಾನ್ ಹೊರತುಪಡಿಸಿ, ಅವರು ಹಾದುಹೋದ ಬಹುತೇಕ ದೇಶಗಳಲ್ಲಿ ಲೀಟರ್ ಪೆಟ್ರೋಲ್/ಡೀಸೆಲ್ ಬೆಲೆ 1,200 ರೂಪಾಯಿಗೂ ಅಧಿಕವಾಗಿತ್ತು. ಪ್ರಯಾಣಕ್ಕೆ ಹೊರಡುವ ಒಂದು ವಾರ ಮುಂಚಿತವಾಗಿ ಕಾರಿನ ಸಂಪೂರ್ಣ ಸರ್ವಿಸಿಂಗ್ ಮಾಡಿಸಲಾಗಿತ್ತು. ಪಂಕ್ಚರ್ ಹಾಕುವುದು ಸೇರಿದಂತೆ ಸಣ್ಣಪುಟ್ಟ ರಿಪೇರಿ ಕೆಲಸಗಳ ತರಬೇತಿಯನ್ನು ಕೇಶವ್ ಪ್ರಸಾದ್ ಪಡೆದುಕೊಂಡಿದ್ದರು.

ಇದನ್ನೂ ಓದಿ: ಗಾಂಧಿ ಜಯಂತಿ 2026: ಸಾಮಾನ್ಯ ವಕೀಲ ‘ಮಹಾತ್ಮ ಗಾಂಧಿ’ಯಾಗಿದ್ದು ಹೇಗೆ? ಅಹಿಂಸೆಯ ಅಸ್ತ್ರದಿಂದ ಜಗತ್ತನ್ನೇ ಗೆದ್ದ ಮೋಹನ್‌ದಾಸ್

ದೀರ್ಘ ರಸ್ತೆ ಪ್ರಯಾಣ ಮಾಡ ಬಯಸುವವರಿಗೆ ಕೇಶವ್ ಪ್ರಸಾದ್ ಸಲಹೆಗಳು

“ಇದು ಸರಳ ವಿಹಾರ ಪ್ರವಾಸವಲ್ಲ, ಇದೊಂದು ಜವಾಬ್ದಾರಿಯುತ ಸಾಹಸಯಾತ್ರೆ . ಚಾಲನೆಯಲ್ಲಿ ತೀವ್ರ ಆಸಕ್ತಿ ಮತ್ತು ತಾಳ್ಮೆ ಇದ್ದರೆ ಮಾತ್ರ ಇದನ್ನು ಸಾಧಿಸಲು ಸಾಧ್ಯ” ಎನ್ನುವ ಕೇಶವ್, ಪ್ರಮುಖ 3 ಸಂಗತಿಗಳನ್ನು ಉಲ್ಲೇಖಿಸಿದ್ದಾರೆ.

ದೈಹಿಕ ಮತ್ತು ಮಾನಸಿಕ ಫಿಟ್‌ನೆಸ್: ಸುದೀರ್ಘ ಚಾಲನೆ, ಕಡಿಮೆ ಆಮ್ಲಜನಕವಿರುವ ಎತ್ತರದ ಪ್ರದೇಶಗಳು ಹಾಗೂ ವಿಪರೀತ ಚಳಿಗೆ ದೇಹ ಒಗ್ಗಿಕೊಳ್ಳಬೇಕು.

ಆರ್ಥಿಕ ಸಿದ್ಧತೆ: ಅನಿರೀಕ್ಷಿತ ವೆಚ್ಚಗಳನ್ನು ಸರಿದೂಗಿಸಲು ಸೂಕ್ತ ಹಣಕಾಸಿನ ಬ್ಯಾಕಪ್ ಇರಬೇಕು.

ಕುಟುಂಬದ ಬೆಂಬಲ: ಸುದೀರ್ಘ ದಿನಗಳ ಕಾಲ ದೂರವಿರಲು ಕುಟುಂಬ ಮತ್ತು ಸ್ನೇಹಿತರ ಪೂರ್ಣ ಬೆಂಬಲ ಅಗತ್ಯ.

ಕೇವಲ ಹಗಲಿನಲ್ಲಿ ಮಾತ್ರ ಚಾಲನೆ ಮಾಡುವುದು, ಪ್ರತಿ 2 ಗಂಟೆಗೊಮ್ಮೆ ಸಣ್ಣ ವಿರಾಮ ತೆಗೆದುಕೊಳ್ಳುವುದು ಹಾಗೂ ರಾತ್ರಿ ವೇಳೆ ಕಡ್ಡಾಯವಾಗಿ ಸುರಕ್ಷಿತ ಪಾರ್ಕಿಂಗ್ ಸ್ಥಳಗಳಲ್ಲೇ ವಾಸ್ತವ್ಯ ಹೂಡುವುದು ಅವರ ಮುಖ್ಯ ಸೂತ್ರವಾಗಿತ್ತು.

ಲಾಂಗ್ ಡ್ರೈವ್ ಸಾಹಸ ಕೈಗೊಳ್ಳುವ ಮುನ್ನ ನೆನಪಿಡಬೇಕಾದ ಮುಖ್ಯಾಂಶಗಳು:

ಪ್ರಯಾಣಕ್ಕೆ ಅಗತ್ಯವಿರುವ ವೀಸಾ ಹಾಗೂ ರಾಯಭಾರ ಕಚೇರಿಯ ದಾಖಲೆಗಳ ಪ್ರಕ್ರಿಯೆಯನ್ನು ಕನಿಷ್ಠ 1 ವರ್ಷ ಮುಂಚಿತವಾಗಿಯೇ ಆರಂಭಿಸಿ.

ವಾಹನದ ಬೇಸಿಕ್ ರಿಪೇರಿ ಮತ್ತು ಪಂಕ್ಚರ್ ಹಾಕುವುದನ್ನು ಕಡ್ಡಾಯವಾಗಿ ಕಲಿಯಿರಿ.

ಅಗತ್ಯ ಬಿಡಿಭಾಗಗಳು ಮತ್ತು ಏರ್ ಪಂಪ್ ಕೊಂಡೊಯ್ಯುವುದನ್ನು ಮರೆಯಬೇಡಿ.

ಅನಿರೀಕ್ಷಿತ ಆಪತ್ಕಾಲೀನ ವೆಚ್ಚಗಳಿಗೆ ಪ್ರತ್ಯೇಕ ನಿಧಿ ಕಾಯ್ದಿರಿಸಿ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us