AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಂಧಿ ಜಯಂತಿ 2026: ಸಾಮಾನ್ಯ ವಕೀಲ ‘ಮಹಾತ್ಮ ಗಾಂಧಿ’ಯಾಗಿದ್ದು ಹೇಗೆ? ಅಹಿಂಸೆಯ ಅಸ್ತ್ರದಿಂದ ಜಗತ್ತನ್ನೇ ಗೆದ್ದ ಮೋಹನ್‌ದಾಸ್

Gandhi Jayanti history and significance: ಅಕ್ಟೋಬರ್ 2, 2026 ರಂದು ಮಹಾತ್ಮ ಗಾಂಧಿಯವರ 157ನೇ ಜನ್ಮದಿನವನ್ನು (ಗಾಂಧಿ ಜಯಂತಿ) ಆಚರಿಸಲಾಗುತ್ತಿದೆ. ಸತ್ಯ, ಅಹಿಂಸೆ, ಸರಳತೆ ಮತ್ತು ಸ್ವಚ್ಛತೆಯ ತತ್ವಗಳನ್ನು ಪ್ರತಿಪಾದಿಸಿದ ಗಾಂಧೀಜಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಾರಥಿಯಾಗಿದ್ದರು. ಅವರ ಅಹಿಂಸಾತ್ಮಕ ಹೋರಾಟಗಳು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟವು. ಈ ದಿನವನ್ನು ಜಾಗತಿಕವಾಗಿ 'ಅಂತರರಾಷ್ಟ್ರೀಯ ಅಹಿಂಸಾ ದಿನ'ವೆಂದು ಗುರುತಿಸಲಾಗಿದೆ, ಅವರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ.

ಗಾಂಧಿ ಜಯಂತಿ 2026: ಸಾಮಾನ್ಯ ವಕೀಲ 'ಮಹಾತ್ಮ ಗಾಂಧಿ'ಯಾಗಿದ್ದು ಹೇಗೆ? ಅಹಿಂಸೆಯ ಅಸ್ತ್ರದಿಂದ ಜಗತ್ತನ್ನೇ ಗೆದ್ದ ಮೋಹನ್‌ದಾಸ್
ಗಾಂಧಿ ಜಯಂತಿ 2026
ಅಕ್ಷಯ್​ ಪಲ್ಲಮಜಲು​​
|

Updated on:Sep 30, 2026 | 9:39 AM

Share

ಮುಖ್ಯಾಂಶಗಳು

  • ಮಹಾತ್ಮ ಗಾಂಧೀಜಿಯವರ 157ನೇ ಜನ್ಮದಿನೋತ್ಸವ
  • ಅಹಿಂಸೆ, ಸತ್ಯ, ಸರಳತೆ ಹಾಗೂ ಸ್ವಚ್ಛತೆಯ ತತ್ವಗಳನ್ನು ಸಾರುವ ಈ ದಿನ
  • ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಮೈಲಿಗಲ್ಲುಗಳು

ದೆಹಲಿ, ಸೆ.30: ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಸಾರಥಿ, ಸತ್ಯ ಹಾಗೂ ಅಹಿಂಸೆಯ ಹರಿಕಾರ ಮಹಾತ್ಮ ಗಾಂಧೀಜಿಯವರ 157ನೇ ಜನ್ಮದಿನೋತ್ಸವವನ್ನು (ಗಾಂಧಿ ಜಯಂತಿ) ಶುಕ್ರವಾರ, ಅಕ್ಟೋಬರ್ 2, 2026 ರಂದು ದೇಶಾದ್ಯಂತ ಅತ್ಯಂತ ಸಡಗರ ಹಾಗೂ ಗೌರವಪೂರ್ವಕವಾಗಿ ಆಚರಿಸಲಾಗುತ್ತಿದೆ. ರಾಷ್ಟ್ರಪಿತ ಗಾಂಧೀಜಿಯವರು ಪ್ರತಿಪಾದಿಸಿದ ಅಹಿಂಸೆ, ಸತ್ಯ, ಸರಳತೆ ಹಾಗೂ ಸ್ವಚ್ಛತೆಯ ತತ್ವಗಳನ್ನು ಸಾರುವ ಈ ದಿನವು ಕೇವಲ ಭಾರತಕ್ಕಷ್ಟೇ ಅಲ್ಲದೆ ಜಾಗತಿಕ ಮಟ್ಟದಲ್ಲೂ ‘ಅಂತರರಾಷ್ಟ್ರೀಯ ಅಹಿಂಸಾ ದಿನ’ವಾಗಿ ಮಹತ್ವ ಪಡೆದುಕೊಂಡಿದೆ.

ಮಹಾತ್ಮ ಗಾಂಧಿ ಜೀವನ:

1869 ರ ಅಕ್ಟೋಬರ್ 2 ರಂದು ಗುಜರಾತ್‌ನ ಪೋರ್‌ಬಂದರ್‌ನಲ್ಲಿ ಜನಿಸಿದ ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ (ಬಾಪು) ಲಂಡನ್‌ನಲ್ಲಿ ಕಾನೂನು ಶಿಕ್ಷಣ ಪೂರ್ಣಗೊಳಿಸಿದರು. ನಂತರ ವೃತ್ತಿ ನಿಮಿತ್ತ ದಕ್ಷಿಣ ಆಫ್ರಿಕಾಕ್ಕೆ ತೆರಳಿದ ಗಾಂಧೀಜಿಯವರು, ಅಲ್ಲಿ ಎದುರಿಸಿದ ಜನಾಂಗೀಯ ತಾರತಮ್ಯ ಮತ್ತು ಅಪಮಾನಗಳ ವಿರುದ್ಧ ಅಹಿಂಸಾತ್ಮಕ ಪ್ರತಿಭಟನೆಯನ್ನು ನಡೆಸಿ ‘ಸತ್ಯಾಗ್ರಹ’ ಎಂಬ ಶಕ್ತಿಯುತ ಅಸ್ತ್ರವನ್ನು ರೂಪಿಸಿಕೊಂಡರು.ಭಾರತಕ್ಕೆ ಮರಳಿದ ನಂತರ, ದೇಶದ ಸ್ವಾತಂತ್ರ್ಯ ಚಳವಳಿಯ ಮುಂಚೂಣಿ ನಾಯಕರಾಗಿ ಕೋಟ್ಯಂತರ ಜನಸಾಮಾನ್ಯರನ್ನು ಬ್ರಿಟಿಷ್ ಆಡಳಿತದ ವಿರುದ್ಧ ಸಂಘಟಿಸಿದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಮೈಲಿಗಲ್ಲುಗಳು:

ಚಂಪಾರಣ್ ಸತ್ಯಾಗ್ರಹ (1917) ಬಿಹಾರದ ನೀಲಿ (ಇಂಡಿಗೋ) ಬೆಳೆಗಾರರ ಮೇಲಿನ ಶೋಷಣೆಯ ವಿರುದ್ಧ ಗಾಂಧೀಜಿಯವರು ಭಾರತದಲ್ಲಿ ನಡೆಸಿದ ಮೊದಲ ಪ್ರಮುಖ ಅಹಿಂಸಾತ್ಮಕ ಚಳವಳಿ.

ಅಸಹಕಾರ ಚಳವಳಿ (1920) ಬ್ರಿಟಿಷ್ ಸಂಸ್ಥೆಗಳು, ಶಾಲೆಗಳು ಹಾಗೂ ಸರಕುಗಳನ್ನು ಬಹಿಷ್ಕರಿಸುವ ಮೂಲಕ ದೇಶಾದ್ಯಂತ ಜನಸಾಮಾನ್ಯರನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕುವಂತೆ ಮಾಡಿದ ಬೃಹತ್ ಚಳವಳಿ.

ದಂಡಿ ಯಾತ್ರೆ (ಉಪ್ಪಿನ ಸತ್ಯಾಗ್ರಹ) (1930) ಸಬರಮತಿ ಆಶ್ರಮದಿಂದ ದಂಡಿಯವರೆಗೆ 240 ಮೈಲಿ ಕಾಲ್ನಡಿಗೆಯಲ್ಲಿ ಸಾಗಿ ಬ್ರಿಟಿಷರ ಉಪ್ಪಿನ ಕಾಯ್ದೆಯನ್ನು ಮುರಿಯುವ ಮೂಲಕ ಜಾಗತಿಕ ಗಮನ ಸೆಳೆದ ಐತಿಹಾಸಿಕ ಸತ್ಯಾಗ್ರಹ.

ಕ್ವಿಟ್ ಇಂಡಿಯಾ (ಭಾರತ ಬಿಟ್ಟು ತೊಲಗಿ) ಚಳವಳಿ (1942) ಬ್ರಿಟಿಷರು ತಕ್ಷಣವೇ ಭಾರತವನ್ನು ತೊರೆಯಬೇಕೆಂದು ಆಗ್ರಹಿಸಿ ಗಾಂಧೀಜಿ ನೀಡಿದ ‘ಮಾಡೂ ಇಲ್ಲವೇ ಮಡಿ’ ಕರೆಯೊಂದಿಗೆ ಆರಂಭವಾದ ಅಂತಿಮ ಹಂತದ ಹೋರಾಟ.

ಗಾಂಧೀಜಿಯವರ 4 ಪ್ರಮುಖ ಜೀವನ ತತ್ವಗಳು:

ಸತ್ಯ (Satya): ಗಾಂಧೀಜಿಯವರ ದೃಷ್ಟಿಯಲ್ಲಿ ಸತ್ಯವೇ ಭಗವಂತ. ವೈಯಕ್ತಿಕ ನಡೆ ನುಡಿ ಹಾಗೂ ಸಾರ್ವಜನಿಕ ಜೀವನದಲ್ಲಿ ಸತ್ಯಕ್ಕೆ ಅತ್ಯುನ್ನತ ಸ್ಥಾನ ನೀಡಿದ್ದರು.

ಅಹಿಂಸೆ (Ahimsa): ದ್ವೇಷ ಹಾಗೂ ಹಿಂಸೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಶಸ್ತ್ರಾಸ್ತ್ರಗಳಿಲ್ಲದೆ ಮನ ಪರಿವರ್ತನೆಯ ಮೂಲಕ ಬದಲಾವಣೆ ತರುವುದೇ ಅಹಿಂಸೆ.

ಸರಳತೆ (Simplicity): ಸ್ವಾವಲಂಬನೆ ಹಾಗೂ ಸರಳ ಜೀವನಕ್ಕೆ ಒತ್ತು ನೀಡಿದ ಅವರು, ಖಾದಿ ನೂಲುವ ಮೂಲಕ ದೇಶೀಯ ಉದ್ಯೋಗ ಮತ್ತು ಸ್ವದೇಶಿ ತತ್ವವನ್ನು ಸಾರಿದರು.

ಸಮಾಜ ಸೇವೆ (Service): ದಲಿತರು, ಶೋಷಿತರು ಹಾಗೂ ಬಡವರ ಸೇವೆ ಮಾಡುವುದೇ ನಿಜವಾದ ಪೂಜೆ ಎಂದು ನಂಬಿದ್ದರು.

ಅಂತರರಾಷ್ಟ್ರೀಯ ಅಹಿಂಸಾ ದಿನ ಹಾಗೂ ಜಾಗತಿಕ ಪ್ರಭಾವ:

ಯುಎನ್ ನಿರ್ಧಾರ (2007): ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2007 ರ ಜೂನ್ 15 ರಂದು ಅಂಗೀಕರಿಸಿದ ನಿರ್ಣಯದಂತೆ, ಗಾಂಧೀಜಿಯವರ ಜನ್ಮದಿನವಾದ ಅಕ್ಟೋಬರ್ 2 ರಂದು ‘ಅಂತರರಾಷ್ಟ್ರೀಯ ಅಹಿಂಸಾ ದಿನ’ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ.

ಜಾಗತಿಕ ನಾಯಕರಿಗೆ ಪ್ರೇರಣೆ: ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ನೆಲ್ಸನ್ ಮಂಡೇಲಾ, ದಲೈ ಲಾಮಾ ಮುಂತಾದ ಜಾಗತಿಕ ನಾಯಕರು ಗಾಂಧೀಜಿಯವರ ಅಹಿಂಸಾ ಮಾರ್ಗವನ್ನು ಅನುಸರಿಸಿ ತಮ್ಮ ದೇಶಗಳಲ್ಲಿ ನಾಗರಿಕ ಹಕ್ಕುಗಳ ಹೋರಾಟ ನಡೆಸಿದರು.

ಇದನ್ನೂ ಓದಿ: ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಭಾರತದ ಬಿಲ್ಲುಗಾರ್ತಿಯರು!

ಸ್ವಚ್ಛತಾ ಆಂದೋಲನ :

ಗಾಂಧಿ ಜಯಂತಿಯಂದು ದೆಹಲಿಯ ರಾಜ್‌ಘಾಟ್ ಸ್ಮಾರಕಕ್ಕೆ ರಾಷ್ಟ್ರಪತಿ, ಪ್ರಧಾನಮಂತ್ರಿ ಸೇರಿದಂತೆ ಹಲವು ಗಣ್ಯರು ತೆರಳಿ ಪುಷ್ಪನಮನ ಸಲ್ಲಿಸುತ್ತಾರೆ. ಶಾಲಾ-ಕಾಲೇಜುಗಳಲ್ಲಿ ಪ್ರಬಂಧ, ಭಾಷಣ, ರಸಪ್ರಶ್ನೆ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಗಾಂಧೀಜಿಯವರು “ಸ್ವಚ್ಛತೆಯೇ ದೇವತಾ ಕಾರ್ಯ” ಎಂದು ನಂಬಿದ್ದರಿಂದ, ಭಾರತ ಸರ್ಕಾರವು ಗಾಂಧಿ ಜಯಂತಿಯ ಸಂದರ್ಭದಲ್ಲಿ ‘ಸ್ವಚ್ಛತಾ ಹೈ ಸೇವಾ’ (Swachhata Hi Seva) ಕಾರ್ಯಕ್ರಮಗಳನ್ನು ಆಯೋಜಿಸಿ ಸಾರ್ವಜನಿಕ ಸ್ಥಳಗಳ ನೈರ್ಮಲ್ಯ ಹಾಗೂ ಸಮುದಾಯ ಸೇವೆಗೆ ಹೆಚ್ಚಿನ ಒತ್ತು ನೀಡುತ್ತದೆ.

ಭಾರತಕ್ಕೆ ಆಗಮನ ಹಾಗೂ ‘ಮಹಾತ್ಮ’ ಬಿರುದು

1915ರಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ಗಾಂಧೀಜಿ, ತಮ್ಮ ರಾಜಕೀಯ ಗುರು ಗೋಪಾಲಕೃಷ್ಣ ಗೋಖಲೆಯವರ ಸಲಹೆಯಂತೆ ಇಡೀ ಭಾರತವನ್ನು ಪ್ರವಾಸ ಮಾಡಿ ಜನಸಾಮಾನ್ಯರ ಕಷ್ಟ-ನಷ್ಟಗಳನ್ನು ಅರಿತುಕೊಂಡರು. 1915ರಲ್ಲಿ ಗಾಂಧೀಜಿಯವರ ಆಧ್ಯಾತ್ಮಿಕ ಹಾಗೂ ನೈತಿಕ ಹೋರಾಟವನ್ನು ಮೆಚ್ಚಿ ವಿಶ್ವಕವಿ ರವೀಂದ್ರನಾಥ ಠಾಗೋರ್ ಅವರು ಮೋಹನ್‌ದಾಸ್ ಅವರಿಗೆ “ಮಹಾತ್ಮ” (ಮಹಾನ್ ಆತ್ಮ) ಎಂಬ ಗೌರವಪೂರ್ವಕ ಬಿರುದನ್ನು ನೀಡಿದರು. (ಬದಲಾಗಿ ಗಾಂಧೀಜಿಯವರು ಠಾಗೋರರನ್ನು ‘ಗುರುದೇವ್’ ಎಂದು ಕರೆದರು). 1944ರಲ್ಲಿ ಸಿಂಗಾಪುರ ರೇಡಿಯೋ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಗಾಂಧೀಜಿಯವರನ್ನು ಮೊದಲ ಬಾರಿಗೆ “ರಾಷ್ಟ್ರಪಿತ” ಎಂದು ಸಂಭೋದಿಸಿದರು.

ಸಾಮಾನ್ಯವಾಗಿ ಕೇಳಲ್ಪಡುವ ಪ್ರಶ್ನೆಗಳು

ಪ್ರಶ್ನೆ: ಗಾಂಧಿ ಜಯಂತಿ ಆಚರಣೆ ಮಾಡುವುದು ಏಕೆ?

ಉತ್ತರ: ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಸಾರಥಿ, ಸತ್ಯ ಹಾಗೂ ಅಹಿಂಸೆಯ ಹರಿಕಾರ ಆಗಿರುವ ಕಾರಣ ಗೌರವಪೂರ್ವಕವಾಗಿ ಆಚರಿಸಲಾಗುತ್ತಿದೆ.

ಪ್ರಶ್ನೆ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಮೈಲಿಗಲ್ಲುಗಳು ಯಾವುವು?

ಉತ್ತರ: ಚಂಪಾರಣ್ ಸತ್ಯಾಗ್ರಹ, ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ (ಭಾರತ ಬಿಟ್ಟು ತೊಲಗಿ) ಚಳವಳಿ

ಪ್ರಶ್ನೆ: ಅಂತರರಾಷ್ಟ್ರೀಯ ಅಹಿಂಸಾ ದಿನ ಎಂದು ಯಾಕೆ ಆರಚರಣೆ ಮಾಡಲಾಗುತ್ತದೆ?

ಉತ್ತರ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2007 ರ ಜೂನ್ 15 ರಂದು ಅಂಗೀಕರಿಸಿದ ನಿರ್ಣಯದಂತೆ, ಗಾಂಧೀಜಿಯವರ ಜನ್ಮದಿನವಾದ ಅಕ್ಟೋಬರ್ 2 ರಂದು ‘ಅಂತರರಾಷ್ಟ್ರೀಯ ಅಹಿಂಸಾ ದಿನ’ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ.

ಪ್ರಶ್ನೆ: ‘ಮಹಾತ್ಮ’ ಬಿರುದು ನೀಡಿದ್ದು ಯಾರು?

ಉತ್ತರ: 1915ರಲ್ಲಿ ಗಾಂಧೀಜಿಯವರ ಆಧ್ಯಾತ್ಮಿಕ ಹಾಗೂ ನೈತಿಕ ಹೋರಾಟವನ್ನು ಮೆಚ್ಚಿ ವಿಶ್ವಕವಿ ರವೀಂದ್ರನಾಥ ಠಾಗೋರ್ ಅವರು ಮೋಹನ್‌ದಾಸ್ ಅವರಿಗೆ “ಮಹಾತ್ಮ” (ಮಹಾನ್ ಆತ್ಮ) ಎಂಬ ಗೌರವಪೂರ್ವಕ ಬಿರುದನ್ನು ನೀಡಿದರು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:37 am, Wed, 30 September 26

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More