ಬೆಂಗಳೂರು, ಡಿಸೆಂಬರ್ 08: ನಮ್ಮ ಮೆಟ್ರೋ (Namma Metro) ದಲ್ಲಿ ಈ ಹಿಂದೆ ಎರಡ್ಮೂರು ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಇದೀಗ ಮತ್ತೊಬ್ಬ ಯುವತಿಗೆ ಲೈಂಗಿಕ ಕಿರುಕುಳ ಆರೋಪ ಮಾಡಲಾಗಿದೆ. ನಿನ್ನೆ ಬೆಳಗ್ಗೆ 9.40ರ ಸುಮಾರಿಗೆ ಬೆಂಗಳೂರಿನ ರಾಜಾಜಿನಗರದಲ್ಲಿ ಮೆಟ್ರೋ ಹತ್ತಿದ್ದ 22 ವರ್ಷದ ಯುವತಿಯ ಮೈಕೈ ಮುಟ್ಟಿದ್ದು, ಯುವತಿ ಕೂಗುತ್ತಿದ್ದಂತೆ ಮುಂದಿನ ನಿಲ್ದಾಣದಲ್ಲಿ ಪರಾರಿಯಾಗಲು ಯತ್ನಿಸಿದ ಆರೋಪಿ ಲೋಕೇಶ್ನನ್ನು ಮೆಟ್ರೋ ಭದ್ರತಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿಯನ್ನು ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಲಾಗಿದೆ.
ತನಿಖೆಯ ವೇಳೆ ಆರೋಪಿ ಲೋಕೇಶ್ನ ಕರಾಳ ಇತಿಹಾಸ ಬಯಲಾಗಿದ್ದು, ಈತನ ಮೇಲೆ ಈ ಹಿಂದೆ ಕೂಡ ಕೆಲ ಕೇಸ್ ಗಳಿತ್ತು. ಈ ಹಿಂದೆ ಬಿಎಂಟಿಸಿ ಬಸ್ನಲ್ಲಿ ಯುವತಿಯ ಮೊಬೈಲ್ ಕಳ್ಳತನ ಮಾಡಲು ಹೋಗಿ ಸಿಕ್ಕಿಕೊಂಡಿದ್ದ. ತನಿಖೆಯ ವೇಳೆ ಲೊಕೇಶ್ ಕಳ್ಳತನವನ್ನು ಕಾಯಕ ಮಾಡಿರುವ ವಿಷಯ ಬಯಲಾಗಿದೆ. ಆರೋಪಿ ಬಳಿಯಿಂದ 20 ಮೊಬೈಲ್ ಫೋನ್, ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಿಎಂಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌವ್ಹಾಣ್ ಪ್ರತಿಕ್ರಿಯಿಸಿದ್ದು, ನಿನ್ನೆ ಬೆಳಿಗ್ಗೆ 9.40 ಕ್ಕೆ ಯುವತಿ ರಾಜಾಜಿನಗರದಿಂದ ಪ್ರಯಾಣ ಬೆಳೆಸಿದ್ದಾರೆ. ರೈಲು ಮೆಜೆಸ್ಟಿಕ್ ನಿಲ್ದಾಣಕ್ಕೆ ಬರುವ ಸಂದರ್ಭದಲ್ಲಿ ಯುವತಿಗೆ ಒಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ. ಆಕೆ ಮೆಟ್ರೋ ಸ್ಟೇಷನ್ನಲ್ಲಿರುವ ಭದ್ರತಾ ಸಿಬ್ಬಂದಿಯನ್ನು ಸಹಾಯಕ್ಕೆ ಕರೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಮೆಟ್ರೋ ರೈಲಿನಲ್ಲಿ ಕಾಲೇಜು ಯುವತಿಗೆ ಲೈಂಗಿಕ ಕಿರುಕುಳ: ಕಿಡಿಗೇಡಿ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ತಕ್ಷಣ ಸ್ಟೇಷನ್ನಲ್ಲಿದ್ದ ಅಧಿಕಾರಿಗಳು ಕಿರುಕುಳ ನೀಡಿದವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಮ್ಮ ಮೆಟ್ರೋಗೆ ಮಹಿಳಾ ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಮಹಿಳಾ ಪ್ರಯಾಣಿಕರಿಗೆ ತೊಂದರೆ ಮಾಡಿದರೆ ಅವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ನ. 20 ರಂದು ಜನರಿಂದ ತುಂಬಿ ತುಳುಕುತ್ತಿದ್ದ ಮೆಟ್ರೋ ನಿಲ್ದಾಣದಲ್ಲಿ ದುಷ್ಕರ್ಮಿ ಕಾಲೇಜು ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಯುವತಿಯ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು, ಕೂಡಲೇ ತಪ್ಪಿತಸ್ಥನ ವಿರುದ್ಧ ಕ್ರಮಕೈಗೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಆದರೆ ಘಟನೆ ಕುರಿತು ಯಾರೂ ದೂರು ನೀಡಿರಲಿಲ್ಲ.
ಇದನ್ನೂ ಓದಿ: Namma Metro: ಮೆಟ್ರೋದಲ್ಲಿ ಸಿಕ್ಕ ಚಿನ್ನದುಂಗುರವನ್ನು ಮಾಲೀಕರಿಗೆ ಒಪ್ಪಿಸಿದ ಹೋಂಗಾರ್ಡ್ಸ್, ಪ್ರಾಮಾಣಿಕತೆಗೆ ಮೆಚ್ಚುಗೆ
ಸೆ.9ರಂದು ಕೂಡ ನಗರದ ಕಾಲೇಜೊಂದರ 20 ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ಕುರಿತಾಗಿ ದೂರು ನೀಡಿದ್ದರು. ಕಳೆದ ಕೆಲವು ದಿನಗಳ ಹಿಂದೆ ಪ್ರಯಾಣಿಕರೊಬ್ಬರ ಪರ್ಸ್ ಕೂಡ ಕಳವು ಮಾಡಲಾಗಿತ್ತು.
ಪದೇ ಪದೇ ಈ ರೀತಿ ಘಟನೆಗಳು ನಗರದಲ್ಲಿ ನಡೆಯುತ್ತಿರುವುದರಿಂದ ಹೆಣ್ಣು ಮಕ್ಕಳು ಎಷ್ಟು ಸೇಫ್ ಎಂಬ
ಪ್ರಶ್ನೆ ಕಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತಾಗಿ ಕಠಿಣ ಕ್ರಮಕೈಗೊಳ್ಳಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:01 am, Fri, 8 December 23