ಬೆಂಗಳೂರು ಮೆಟ್ರೋ ರೈಲಿನಲ್ಲಿ ಕಾಲೇಜು ಯುವತಿಗೆ ಲೈಂಗಿಕ ಕಿರುಕುಳ: ಕಿಡಿಗೇಡಿ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಬೆಂಗಳೂರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಾಲೇಜು ಯುವತಿಗೆ ಲೈಂಗಿಕ ಕಿರುಕುಳ ನೀಡಲಾಗಿರುವ ಆರೋಪ ಕೇಳಿ ಬಂದಿದೆ. ಕಾಲೇಜಿಗೆ ಹೋಗಲು ಮೆಟ್ರೋ ಹತ್ತಿದ ಯುವತಿಯ ಮೈಮುಟ್ಟಿ ವ್ಯಕ್ತಿಯೋರ್ವ ಅಸಭ್ಯ ವರ್ತನೆ ತೋರಿದ್ದಾನೆ ಎಂದು ಯುವತಿಯ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರು, ನ.22: ಸಿಲಿಕಾನ್ ಸಿಟಿ ಬೆಂಗಳೂರು ಹೆಣ್ಣು ಮಕ್ಕಳಿಗೆ ಎಷ್ಟು ಸೇಫ್ ಎಂಬ ಪ್ರಶ್ನೆ ಪದೇ ಪದೇ ಹುಟ್ಟಿಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಬೆಂಗಳೂರಿನ ಲುಲು ಮಾಲ್ನಲ್ಲಿ (Lulu Mall) ನಡೆದಿದ್ದ ಲೈಂಗಿಕ ಕಿರುಕುಳ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಲೈಂಗಿಕ ಕಿರುಕುಳ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತುಂಬಿ ತುಳುಕುತ್ತಿದ್ದ ಮೆಟ್ರೋ ರೈಲಿನಲ್ಲಿ (Namma Metro) ವ್ಯಕ್ತಿಯೋರ್ವ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದು ಕಿಡಿಗೇಡಿ ಕೃತ್ಯಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಜನರಿಂದ ತುಂಬಿ ತುಳುಕುತ್ತಿದ್ದ ಮೆಟ್ರೋ ನಿಲ್ದಾಣದಲ್ಲಿ ದುಷ್ಕರ್ಮಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ಯುವತಿಯ ಸ್ನೇಹಿತರು ಸಾಮಾಜಿಕ ಜಾಲತಾಣ ರೆಡಿಟ್ ನಲ್ಲಿ ವಿಚಾರ ಬಹಿರಂಗ ಪಡಿಸಿದ್ದು, ಕೂಡಲೇ ತಪ್ಪಿತಸ್ಥನ ವಿರುದ್ಧ ಕ್ರಮ ಜರುಗಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಆಗಿದ್ದೇನು?
ನ.20ರ ಸೋಮವಾರ ಬೆಳಗ್ಗೆ 8.30ರ ಸುಮಾರಿಗೆ ಮೆಜೆಸ್ಟಿಕ್ ಮೆಟ್ರೋದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಯುವತಿ ಪ್ರತಿ ದಿನ ಕಾಲೇಜಿಗೆ ಬಸ್‌ನಲ್ಲೇ ತೆರಳುತ್ತಿದ್ದಳು. ಆದರೆ, ಸೋಮವಾರ ಬೆಳಿಗ್ಗೆ 8.30ರ ಸುಮಾರಿಗೆ ಮೆಟ್ರೋದಲ್ಲಿ ಪ್ರಯಾಣಿಸಲು ಮೆಜೆಸ್ಟಿಕ್‌ಗೆ ಬಂದಿದ್ದಳು. ಮೆಟ್ರೊ ಏರುವಾಗ ದಟ್ಟಣೆಯಿತ್ತು. ಮೆಟ್ರೋ ಹತ್ತಿದ ನಂತರ ಕೆಂಪು ಅಂಗಿ ಧರಿಸಿದ್ದ ವ್ಯಕ್ತಿಯೊಬ್ಬ ಹಿಂದಿನಿಂದ ಸ್ಪರ್ಶಿಸಿದ್ದಾನೆ. ಆರಂಭದಲ್ಲಿ ಆಕೆಗೆ ಏನಾಗುತ್ತಿದೆ ಎಂಬ ಅರಿವು ಇರಲಿಲ್ಲ. ಅರಿವಾದಾಗ ಸಹಾಯಕ್ಕೆ ಕೋರಿದ್ದರೂ ಮೆಟ್ರೊ ಸಹಪ್ರಯಾಣಿಕರು ನೆರವಿಗೆ ಬಂದಿರಲಿಲ್ಲ’ ಎಂದು ಬರೆದು ಯುವತಿಯ ಸ್ನೇಹಿತರು ಸಾಮಾಜಿಕ ಜಾಲತಾಣ Reddit ನಲ್ಲಿ ವಿಚಾರ ಬಹಿರಂಗ ಪಡಿಸಿದ್ದಾರೆ. ಹಾಗೂ ತಪ್ಪಿತಸ್ಥನ ವಿರುದ್ಧ ಕ್ರಮ ಜರುಗಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಫೆಬ್ರವರಿ ಒಳಗೆ ಬೆಂಗಳೂರು ಮೆಟ್ರೋ ಹಳದಿ ಮಾರ್ಗ ಪೂರ್ಣಗೊಳಿಸಿ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ
ಅಧಿಕಾರಿಗಳು ಹೇಳೋದೇನು?
ಈ ಲೈಂಗಿಕ ದೌರ್ಜನ್ಯ ಕೇಸ್ ಬಗ್ಗೆ BMRCL ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಸೆ.9ರಂದು ನಗರದ ಕಾಲೇಜೊಂದರ 20 ವರ್ಷದ ವಿದ್ಯಾರ್ಥಿನಿ, ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿದ್ದರು. ಕಳೆದ ಕೆಲವು ದಿನಗಳ ಹಿಂದೆ ಪ್ರಯಾಣಿಕರೊಬ್ಬರ ಪರ್ಸ್ ಸಹ ಕಳವು ಮಾಡಲಾಗಿತ್ತು. ಆದರೆ ನ.20ರಂದು ನಡೆದ ಘಟನೆ ಕುರಿತು ಇದುವರೆಗೂ ಯಾರೂ ದೂರು ನೀಡಿಲ್. ನಿನ್ನೆ ರಾತ್ರಿವರೆಗೂ ಯಾವುದೇ ದೂರು ದಾಖಲಾಗಿಲ್ಲ. ದೂರು ನೀಡಿದರೆ ತಕ್ಷಣವೇ ಸಿಸಿ ಟಿವಿ ಕ್ಯಾಮೆರಾ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಹಿಂದೆ ಕೂಡ ಈ ರೀತಿ ಲೈಂಗಿಕ ಕಿರುಕುಳ ನಡೆದಿರುವುದು ಸಾಭೀತಾಗಿದೆ. ಮೆಟ್ರೋದಲ್ಲಿ ತಿಂಡಿ ತಿಂದರೂ, ನೀರು ಕುಡಿದರೂ ಫೈನ್ ಹಾಕುವ ಬಿಎಂಆರ್ಸಿಎಲ್ ಇಂತಹ ಘಟನೆಗಳು ನಡೆದರೂ ಏಕೆ ಎಚ್ಚರಿಕೆ ವಹಿಸುತ್ತಿಲ್ಲ, ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರೊಬ್ಬರು ಕಿಡಿಕಾರಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ