ಹೋರಾಟಕ್ಕೆ ಮಣಿದ ನಮ್ಮ ಮೆಟ್ರೋ: ಕನ್ನಡೇತರ ನೇಮಕಾತಿ ಅಧಿಸೂಚನೆ ವಾಪಸ್

ಕನ್ನಡ ಪ್ರಾಧಿಕಾರ ಮತ್ತು ಹೋರಾಟಗಾರ ಪ್ರತಿಭಟನೆಗೆ ಮಣಿದ ಬೆಂಗಳೂರು ಮೆಟ್ರೋ ರೈಲು ನಿಗಮ 50 ರೈಲು ನಿರ್ವಾಹಕರ ನೇಮಕಾತಿ ಅಧಿಸೂಚನೆಯನ್ನು ಹಿಂಪಡೆದಿದೆ. ಕನ್ನಡೇತರರಿಗೆ ಮಾತ್ರ ಅವಕಾಶ ನೀಡುವ ನಿಯಮ ಕನ್ನಡಪರ ಸಂಘಟನೆಗಳ ಆಕ್ರೋಶ ಹಾಗೂ ಪ್ರತಿಭಟನೆಕ್ಕೆ ಕಾರಣವಾಗಿತ್ತು. ಸದ್ಯ ಎಚ್ಚೆತ್ತಿರುವ BMRCL ನಿರ್ಧಾರ ಕೈಬಿಟ್ಟಿದೆ.

ಹೋರಾಟಕ್ಕೆ ಮಣಿದ ನಮ್ಮ ಮೆಟ್ರೋ: ಕನ್ನಡೇತರ ನೇಮಕಾತಿ ಅಧಿಸೂಚನೆ ವಾಪಸ್
ಹೋರಾಟಕ್ಕೆ ಮಣಿದ ನಮ್ಮ ಮೆಟ್ರೋ: ಕನ್ನಡೇತರ ನೇಮಕಾತಿ ಅಧಿಸೂಚನೆ ವಾಪಸ್
Edited By:

Updated on: Mar 17, 2025 | 10:35 PM

ಬೆಂಗಳೂರು, ಮಾರ್ಚ್​ 17: ನಮ್ಮ ಮೆಟ್ರೋದಲ್ಲಿ (namma Metro) ಕನ್ನಡೇತರರಿಗೆ ನೇಮಕಾತಿ ಅಧಿಸೂಚನೆ ವಿಚಾರವಾಗಿ ಟಿವಿ9ನಲ್ಲಿ ವರದಿ ಬಳಿಕ ಎಚ್ಚೆತ್ತ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಇದೀಗ ಬೆಂಗಳೂರು ಮೆಟ್ರೋ ರೈಲು ನಿಗಮ ಕನ್ನಡೇತರರಿಗೆ ನೇಮಕಾತಿ ಅಧಿಸೂಚನೆಯನ್ನು ಹಿಂಪಡೆದಿದೆ. ಗುತ್ತಿಗೆ ಆಧಾರದ ಮೇಲೆ 50 ಟ್ರೈನ್‌ ಆಪರೇಟರ್‌ ಹುದ್ದೆಗಳ ನೇಮಕಾತಿಗೆ ಮೆಟ್ರೋ ಮುಂದಾಗಿತ್ತು. ಹೀಗಾಗಿ BMRCL ಕಚೇರಿ ಮುಂದೆ ಕನ್ನಡಪರ ಹೋರಾಟಗಾರರು ಧರಣಿ ಮಾಡಿದ್ದರು. ಇದರ ಬೆನ್ನಲ್ಲೇ ಕನ್ನಡೇತರರಿಗೆ ನೇಮಕಾತಿ ಅಧಿಸೂಚನೆ ವಾಪಸ್‌ ಪಡೆಯಲಾಗಿದೆ.

ಬಿಎಂಆರ್ ಸಿಎಲ್ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದೆ ಎಂದು ಕೆರಳಿದ ಕನ್ನಡ ಪರ ಹೋರಾಟಗಾರರಿಂದು ಶಾಂತಿನಗರದ ನಮ್ಮ ಮೆಟ್ರೋ ಮುಖ್ಯ ಕಚೇರಿಯ ಮುಂದೆ ಪ್ರತಿಭಟನೆ ಮಾಡಲಾಗಿತ್ತು. ಬಿಎಂಆರ್​​ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರರಾವ್ ಕಚೇರಿಯತ್ತ ಹೋದ ಕನ್ನಡ ಪರ ಹೋರಾಟಗಾರರನ್ನ ಕಂಡು, ಮೆಟ್ರೋ ಎಂಡಿ ತನ್ನ ಕಚೇರಿಯಿಂದ ಹೊರ ಬಂದು ಮಾತುಕತೆಗೆ ಮುಂದಾಗಿದ್ದರು. ಈ ವೇಳೆ ಮಾತಿಗಿಳಿದ ಕನ್ನಡಪರ ಹೋರಾಟಗಾರರು, ಶಾಂತಿಯುತವಾಗಿ ಪ್ರತಿಭಟನೆ ಮಾಡ್ತೇವೆ. ಕನ್ನಡಿಗರಿಗೆ ಅನ್ಯಾಯವಾದರೆ ಮೆಟ್ರೋ ಸ್ಟೇಷನ್​​ಗೆ ನುಗ್ತೇವೆಂದು ಎಚ್ಚರಿಕೆ ಕೊಟ್ಟಿದ್ದರು. ಅಲ್ಲದೇ ಷರತ್ತು ಬದಲಿಸುವಂತೆ ಮನವಿ ಪತ್ರ ಕೊಟ್ಟಿದ್ದರು.

ಬಿಎಂಆರ್​ಸಿಎಲ್​​​ ಎಂಡಿಗೆ ಪತ್ರ ಬರೆದ ಪುರುಷೋತ್ತಮ ಬಿಳಿಮಲೆ

ಈ ವಿಚಾರವಾಗಿ ನಮ್ಮ ಮೆಟ್ರೋದಲ್ಲಿ ಕನ್ನಡೇತರರಿಗೆ ನೇಮಕಾತಿ ಕಲ್ಪಿಸುವ ಪ್ರಕ್ರಿಯೆ ಕೈಬಿಡಬೇಕು. ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸುವಂತೆ ಬಿಎಂಆರ್​ಸಿಎಲ್​​​ ಎಂಡಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ
ನಮ್ಮ ಮೆಟ್ರೋ ನೇಮಕಾತಿ; ಟ್ರೈನ್​​ ಆಪರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ಮೆಟ್ರೋ ಚಾಲಕರಾಗುವುದು ಹೇಗೆ? ಅರ್ಹತೆಗಳೇನು?
ನಮ್ಮ ಮೆಟ್ರೋಗೆ ಆದಾಯ ಕೊರತೆ: ಜಾಹೀರಾತು ಮೊರೆ ಹೋದ ಬಿಎಂಆರ್​ಸಿಎಲ್
ಮೆಟ್ರೋಗೆ ಮರಳದ ಪ್ರಯಾಣಿಕರು: ಬೆಂಗಳೂರು ಟ್ರಾಫಿಕ್, ವಾಯುಮಾಲಿನ್ಯ ಹೆಚ್ಚಳ

ಪತ್ರದಲ್ಲೇನಿದೆ?

ನಮ್ಮ ಮೆಟ್ರೋ ಸಂಸ್ಥೆಯಲ್ಲಿ ಅನ್ಯ ಭಾಷಿಕರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಲು ಅನುಕೂಲ ಮಾಡಿಕೊಡುವ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿರುವ ವಿಷಯವು ಕನ್ನಡಿಗರಿಗೆ ವೇದನೆಯನ್ನು ತರುವ ಸಂಗತಿಯಾಗಿದೆ. ಇವು ಕೇವಲ ತಾತ್ಕಲಿಕ ಹುದ್ದೆಗಳೆಂದು ನಿಮ್ಮ ಸಂಸ್ಥೆಯು ನೀಡಿರುವ ಸಮಜಾಯಿಷಿ ಕನ್ನಡಿಗರ ವೇದನೆಯನ್ನು ಇನ್ನಷ್ಟು ಹೆಚ್ಚಿಸಿದೆ. ಕರ್ನಾಟಕದ ಸಂಸ್ಥೆಯೊಂದು ಅನ್ಯ ಭಾಷಿಕರಿಗೆ ನೀಡುವ ಈ ರೀತಿಯ ಆಹ್ವಾನ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಕನ್ನಡಿಗರ ಆತ್ಮಸ್ಥೆರ್ಯವನ್ನು ಕಸಿಯುವುದಷ್ಟೇ ಅಲ್ಲ, ಇದು ಸಾಂವಿಧಾನಿಕ ಆಶಯಗಳ ಸಂಪೂರ್ಣ ಉಲ್ಲಂಘನೆಯಾಗುತ್ತದೆ ಎಂದಿದ್ದಾರೆ.

ನೇಮಕಾತಿ ನಿಯಮಗಳಲ್ಲಿ ಕನ್ನಡಿಗರಿಗೆ ಪ್ರಾಧಾನ್ಯತೆಯನ್ನು ಉಲ್ಲೇಖಿಸಿದಲ್ಲಿ ಈ ರೀತಿಯ ಸಮಸ್ಯೆಗಳಿಗೆ ಪರಿಹಾರ ದೊರಕುತ್ತಿತ್ತು. ತಾಂತ್ರಿಕ ಹುದ್ದೆಯ ನೆಪವೊಡ್ಡಿ ಕನ್ನಡಿಗರನ್ನು ನೇಮಕಾತಿ ಪ್ರಕ್ರಿಯೆಯಿಂದ ದೂರವಿರಿಸುವುದು ಯಾವುದೇ ರೀತಿಯಲ್ಲೂ ಒಪ್ಪಲು ಸಾಧ್ಯವಿಲ್ಲದ ಅಂಶ. ಅಂತೆಯೇ ನೇಮಕಗೊಂಡ ಕನ್ನಡೇತರರಿಗೆ ಆದ್ಯತೆ ಮೇರೆಗೆ ಕನ್ನಡವನ್ನು ಕಲಿಸಬೇಕಾದುದು ಸಹ ನಮ್ಮ ಮೆಟ್ರೋ ಸಂಸ್ಥೆಯ ಪ್ರಾಥಮಿಕ ಜವಾಬ್ದಾರಿಯಾಗಿರುತ್ತದೆ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: BMRCL Recruitment 2025: ಬೆಂಗಳೂರು ಮೆಟ್ರೋ ನೇಮಕಾತಿ; 50+ ಟ್ರೈನ್​​ ಆಪರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ನಮ್ಮ ಮೆಟ್ರೋ ಸಂಸ್ಥೆ ಕೂಡಲೇ ಕನ್ನಡೇತರರಿಗೆ ನೇಮಕಾತಿ ಕಲ್ಪಿಸುವ ಪ್ರಕ್ರಿಯೆಯನ್ನು ತಡೆಹಿಡಿಯಬೇಕು. ಹಿಂದಿನ ನೇಮಕಾತಿ ಅಧಿಸೂಚನೆಗಳಲ್ಲಿ ನೇಮಕಗೊಂಡ ಕನ್ನಡೇತರರಿಗೆ ಕನ್ನಡ ಕಲಿಸುವ ಕಾರ್ಯಕ್ಕೆ ಮುಂದಾಗಬೇಕು. ಕನ್ನಡ ಕಲಿಯದ ಕನ್ನಡೇತರರನ್ನು ಸೇವೆಯಿಂದ ಬಿಡುಗಡೆ ಮಾಡಬೇಕು ಮತ್ತು ತಾಂತ್ರಿಕ ಹಾಗೂ ತಾಂತ್ರಿಕೇತರ ಹುದ್ದೆಗಳಿಗೆ ಸಂಪೂರ್ಣವಾಗಿ ಕನ್ನಡಿಗರನ್ನೇ ನೇಮಕ ಮಾಡಬೇಕು. ಮೆಟ್ರೋ ಸಂಸ್ಥೆಯಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನೆಯ ಕುರಿತಂತೆ ಇಷ್ಟರಲ್ಲಿಯೇ ಭೇಟಿ ನೀಡ ಬಯಸುತ್ತೇನೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:32 pm, Mon, 17 March 25