New Year Guidelines: ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಬೆಂಗಳೂರು ಪೊಲೀಸ್ ಆಯುಕ್ತ: ಇಲ್ಲಿದೆ ಮಾಹಿತಿ
Bengaluru New Year Guidelines: ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಗರ ಪೊಲೀಸರು ಸಕಲ ಸಿದ್ದತೆ ಮಾಡಿಕೊಂಡಿಕೊಳ್ಳುತ್ತಾರೆ. ಹೊಸ ವರ್ಷಾಚರಣೆ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸುದ್ದಿಗೋಷ್ಠಿ ನಡೆಸಿ ಮಾರ್ಗಸೂಚಿ ತಿಳಿಸಿದರು.
ಬೆಂಗಳೂರು, ಡಿಸೆಂಬರ್ 26: ಹೊಸ ವರ್ಷಾಚರಣೆಗೆ (New Year) ರಾಜ್ಯ ರಾಜಧಾನಿ ಬೆಂಗಳೂರು (Bengaluru) ಸಿದ್ದವಾಗುತ್ತಿದೆ. ಅದರಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ನಗರ ಪೊಲೀಸರು (Police) ತಯಾರಿ ನಡೆಸುತ್ತಿದ್ದಾರೆ. ಹೊಸ ವರ್ಷಾಚರಣೆ ವೇಳೆ ಜನರ ಸುರಕ್ಷತೆ ನಮ್ಮ ಆದ್ಯ ಕರ್ತವ್ಯ. ಯಾವುದೇ ಕಾರಣಕ್ಕೂ ಮಹಿಳೆ ಮತ್ತು ಮಕ್ಕಳಿಗೆ ಸಮಸ್ಯೆ ಆಗಬಾರದು. ಅಹಿತಕರ ಘಟನೆ ನಡೆಯದಂತೆ ಸೂಕ್ತ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ ಹೊಸ ವರ್ಷಾಚರಣೆ ದಿವಸ ಕ್ಲಬ್ಗಳಿಗೆ ರಾತ್ರಿ 1 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ವೈನ್ ಶಾಪ್ಗಳಿಗೆ ರಾತ್ರಿ 12 ಗಂಟೆಯವರೆಗೆ ಅವಕಾಶ ನೀಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ (B Dayananda) ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಭದ್ರತೆಗೆ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರನ್ನು ನಿಯೋಜಿಸಲಾಗಿದೆ. ಓರ್ವ ಜಂಟಿ ಪೊಲೀಸ್ ಆಯುಕ್ತ, 15 ಡಿಸಿಪಿ, 45 ಎಸಿಪಿ, 160 ಪಿಐ, 600 ಸಬ್ಇನ್ಸ್ಪೆಕ್ಟರ್ಗಳು, 600 ಎಎಸ್ಐ, 1800 ಹೆಡ್ಕಾನ್ಸ್ಟೇಬಲ್ಸ್, 5,200 ಕಾನ್ಸ್ಟೇಬಲ್ಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ಫ್ಲೈ ಓವರ್ ಮೇಲೆ ವೇಗವಾಗಿ ವಾಹನ ಚಲಾಯಿಸುವುದು ಮತ್ತು ವ್ಹೀಲಿಂಗ್ ಮಾಡುವುದನ್ನು ತಡೆಗಟ್ಟಲು ಎಲ್ಲ ಫ್ಲೈ ಓವರ್ಗಳನ್ನು ಬಂದ್ ಮಾಡಲಾಗುತ್ತದೆ. ಸಂಜೆ 6ರಿಂದ ಬೆಳಗ್ಗೆ 6ವರೆಗೆ ಫ್ಲೈ ಓವರ್ ಬಂದ್ ಮಾಡಲಿದ್ದೇವೆ. ಏರ್ಪೋರ್ಟ್ ರಸ್ತೆ ಹೊರತುಪಡಿಸಿ ಉಳಿದೆಡೆ ಸಿಸಿಟಿವಿ ಅಳವಡಿಕೆ. ಹಲವೆಡೆ ಡ್ರೋನ್ ಕ್ಯಾಮರಾ ಕಾರ್ಯಾಚರಣೆ ಕೂಡ ಇರಲಿದೆ. ಕೋರಮಂಗಲ, ಇಂದಿರಾನಗರ 100 ಅಡಿ ರಸ್ತೆಗಳಲ್ಲಿ ಹೆಚ್ಚಿನ ಭದ್ರತೆ ನೀಡಲಾಗುತ್ತದೆ. ಸಿವಿಲ್ ಡ್ರಸ್ಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದರು.
ಇದನ್ನೂ ಓದಿ: ಹೊಸ ವರ್ಷಾಚರಣೆಗೆ ನಶೆ ಏರಿಸಲು 100 ಕೋಟಿ ಮೌಲ್ಯದ ಡ್ರಗ್ಸ್ ಬೆಂಗಳೂರಿಗೆ ಸಪ್ಲೈ! ಸ್ಪೆಷಲ್ ಡ್ರೈವ್ಗೆ ಸಜ್ಜಾದ ನಗರ ಪೊಲೀಸರು
ಡ್ರಗ್ಸ್ ಉಪಟಳಕ್ಕೆ ಕಡಿವಾಣ ಹಾಕಲು ನಗರದಾದ್ಯಂತ ಒಂದು ವಾರದಿಂದ ನಿರಂತರ ಪರಿಶೀಲನೆ ನಡೆಯುತ್ತಿದೆ. ಸಿಸಿಬಿ ಅಧಿಕಾರಿಗಳು ಮಾದಕ ವಸ್ತು ಸಂಗ್ರಹಿಸಿದ್ದ ಮನೆಗಳ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ. ಅಧಿಕ ಲಿಕ್ಕರ್ ಶೇಖರಣೆ, ಅನಧಿಕೃತ ಮಾರಾಟದ ಮೇಲೆ ಹದ್ದಿನ ಕಣ್ಣಿಟ್ಟಿದ್ದೇವೆ. ಆಯಕಟ್ಟಿನ ಪ್ರದೇಶದಗಳಲ್ಲಿ ಪೊಲೀಸ್ ಚೌಕಿಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಬಿಬಿಎಂಪಿ, ಮೇಟ್ರೋ, ಬಿಎಂಟಿಸಿ, ಅಬಕಾರಿ, ಆರೋಗ್ಯ ಇಲಾಖೆ, ಅಗ್ನಿಶಾಮಕ, ಮಾಲಿನ್ಯ ನಿಯಂತ್ರಣ ಮಂಡಳಿ, ಬಿಎಂಆರ್ಸಿಎಲ್, ಬೆಸ್ಕಾಂ ಜೊತೆಗೆ ಮಾತುಕತೆ ನಡೆಸಲಾಗಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕಬ್ಬನ್ ಪಾರ್ಕ್, ಟ್ರಿನಿಟಿ, ಫಿನಿಕ್ಸ್ ಮಾಲ್, ಕ್ಲಬ್ಗಳ ಮುಂಭಾಗ ಬಿಗಿ ಪೊಲೀಸ್ ಭದ್ರತೆ ಮಾಡಲಾಗುತ್ತದೆ ಮಾಹಿತಿ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:50 am, Tue, 26 December 23