ಇನ್ಮುಂದೆ ಆರ್​​ಒ ಪ್ಲಾಂಟ್​​ಗಳ ನಿರ್ವಹಣೆ BWSSB ಸುಪರ್ದಿಗೆ: ಡಿಕೆ ಶಿವಕುಮಾರ್​ ಸೂಚನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 24, 2025 | 5:02 PM

ಬೆಂಗಳೂರಿನ ಆರ್​ಓ ಘಟಕಗಳ ನಿರ್ವಹಣೆಯನ್ನು ಬಿಬಿಎಂಪಿಯಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ವರ್ಗಾಯಿಸಲು ಡಿಸಿಎಂ ಡಿಕೆ ಶಿವಕುಮಾರ್ ಆದೇಶಿಸಿದ್ದಾರೆ. ಇದು ನೀರಿನ ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗಳ ಸಮನ್ವಯತೆ ಸುಧಾರಿಸುವ ಗುರಿ ಹೊಂದಿದೆ. ನೀರಿನ ಕೊರತೆಯ ಸಮಯದಲ್ಲಿ ಸಮನ್ವಯದ ಕೊರತೆಯಿಂದ ಉಂಟಾಗುವ ಸಮಸ್ಯೆಗಳನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಇನ್ಮುಂದೆ ಆರ್​​ಒ ಪ್ಲಾಂಟ್​​ಗಳ ನಿರ್ವಹಣೆ BWSSB ಸುಪರ್ದಿಗೆ: ಡಿಕೆ ಶಿವಕುಮಾರ್​ ಸೂಚನೆ
ಇನ್ಮುಂದೆ ಆರ್​​ಒ ಪ್ಲಾಂಟ್​​ಗಳ ನಿರ್ವಹಣೆ BWSSB ಸುಪರ್ದಿಗೆ: ಡಿಕೆ ಶಿವಕುಮಾರ್​ ಸೂಚನೆ
Follow us on

ಬೆಂಗಳೂರು, ಫೆಬ್ರವರಿ 24: ಇನ್ಮುಂದೆ ಆರ್​​ಒ ಪ್ಲಾಂಟ್​​ಗಳ ನಿರ್ವಹಣೆಯನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸುಪರ್ದಿಗೆ ನೀಡಲಾಗಿದೆ. ಡಿಸಿಎಂ, ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಆದೇಶ ಹಿನ್ನೆಲೆ ಬೆಂಗಳೂರು ಜಲಮಂಡಳಿಗೆ ಹಸ್ತಾಂತರಿಸಲು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಇಲಾಖೆಗೆ ಸೂಚನೆ ನೀಡಲಾಗಿದೆ.

ಬೆಂಗಳೂರಿನ ಜನರಿಗೆ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು, ನೀರು, ಒಳಚರಂಡಿ ವ್ಯವಸ್ಥೆಯ ಜವಾಬ್ದಾರಿಯನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಿಸುತ್ತಿದೆ. ಸದ್ಯ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಬಿಬಿಎಂಪಿ ನಿರ್ವಹಣೆ ಮಾಡುತ್ತಿದೆ.

ಇದನ್ನೂ ಓದಿ: ಕುಡಿಯುವ ನೀರು ವ್ಯರ್ಥ ಮಾಡಿದವರಿಗೆ ಜಲಮಂಡಳಿ ದಂಡಾಸ್ತ್ರ: 5.60 ಲಕ್ಷ ರೂ ವಸೂಲಿ

ಒಂದು ವೇಳೆ ಕೊಳವೆ ಬಾವಿಗಳು ಬತ್ತಿ ಹೋದಲ್ಲಿ ಆರ್​​ಒ ಘಟಕಕ್ಕೆ ಬೇಕಾಗುವ ನೀರನ್ನು ಜಲಮಂಡಳಿ ಮೂಲಕವೇ ಪೂರೈಸಬೇಕಾಗುತ್ತದೆ. ಈ ಸಮಯದಲ್ಲಿ ಸಮನ್ವಯದ ಕೊರತೆ ಉಂಟಾಗಿ, ನಾಗರಿಕರಿಗೆ ತೊಂದರೆ ಆಗುವುದನ್ನು ತಪ್ಪಿಸುವ ದೃಷ್ಟಿಯಿಂದ ಹಾಗೂ ಬೆಂಗಳೂರು ನಗರದ ನೀರು ಸರಬರಾಜಿನ ನಿರ್ವಹಣೆ ಮಾಡುತ್ತಿರುವ ಜಲಮಂಡಳಿಯವರೇ RO ಪ್ಲಾಂಟ್‌ಗಳ ನಿರ್ವಹಣೆ ಮಾಡುವುದು ಸೂಕ್ತ. ಹೀಗಾಗಿ ಕೂಡಲೇ ಆರ್​ಒ ಪ್ಲಾಂಟ್ BWSSB ಸುಪರ್ದಿಗೆ ನೀಡಲು ಡಿಕೆ ಶಿವಕುಮಾರ್​ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ನೀರಿನ ದರ ಹೆಚ್ಚಳ ಸುಳಿವು ನೀಡಿದ ಬೆಂಗಳೂರು ಜಲಮಂಡಳಿ: ಡಿಕೆಶಿ ನೇತೃತ್ವದ ಮುಂದಿನ ಸಭೆಯಲ್ಲಿ ತೀರ್ಮಾನ ಸಾಧ್ಯತೆ

ಜಲಮಂಡಳಿಯು ಈಗಾಗಲೇ ನೀರಿನ ಗುಣಮಟ್ಟವನ್ನು ಪರೀಕ್ಷಿಸಲು ತನ್ನದೇ ಆದ ಲ್ಯಾಬ್​ ಹೊಂದಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇತ್ತೀಚೆಗೆ ಹೇಳಿದ್ದರು. ಬೆಂಗಳೂರಿನ ನೀರಿನ ಗುಣಮಟ್ಟ ಮತ್ತು ಪರಿಸ್ಥಿತಿಯ ಬಗ್ಗೆ ಬಿಡಬ್ಲ್ಯುಎಸ್ಎಸ್​​ಬಿಗೆ ಸಮಗ್ರ ತಿಳುವಳಿಕೆ ಇರುವುದರಿಂದ ಬೇಸಿಗೆ ಆರಂಭಕ್ಕೂ ಮುಂಚಿತವಾಗಿ ಈ ನಿರ್ಧಾರ ಕೈಗೊಳ್ಳಾಗಿದೆ. ಇನ್ನು ನೀರಿಗೆ ಸಂಬಂಧಿಸಿದ ಯೋಜನೆಗಳಿಗಾಗಿ ನಾವು ಕೇಂದ್ರದಿಂದ ಪಡೆಯುವ ಹಣವನ್ನು ಬಿಡಬ್ಲ್ಯುಎಸ್ಎಸ್ಬಿ ಯೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ಹೇಳಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.